ತುಂಡು ಬಟ್ಟೆ, ಅವರೊಂದಿಗೆ ಮಾತುಕತೆ! ದೀಪಕ್​ ಯಾದವ್​ ವಿರುದ್ಧ ರಾಧಿಕಾ ಆಪ್ತೆ ಅಚ್ಚರಿ ಹೇಳಿಕೆ | Radhika Yadav

ವಿಜಯವಾಣಿ (57)
Published on

Radhika Yadav: ತಂದೆಯಿಂದಲೇ ಗುಂಡೇಟಿಗೆ ಬಲಿಯಾದ ರಾಷ್ಟ್ರ ಮಟ್ಟದ ಟೆನಿಸ್​ ಆಟಗಾರ್ತಿ ರಾಧಿಕಾ ಯಾದವ್​ ಪ್ರಕರಣ ಸದ್ಯ ಹಲವು ತಿರುವುಗಳಿಗೆ ಸಾಕ್ಷಿಯಾಗಿದೆ. ಮಗಳ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ತಂದೆಯೇ ದಿಢೀರ್ ಕೊಲೆಗಾರನಾಗಿ ಬದಲಾಗಿದ್ದು, ಕುಟುಂಬಸ್ಥರು ಮಾತ್ರವಲ್ಲ ಇಡೀ ದೇಶದ ಜನತೆಯನ್ನೇ ಬೆಚ್ಚಿ ಬೀಳಿಸಿದೆ.

ಮನೆಯಲ್ಲಿ ಮಗಳು ಅಡುಗೆ ಮಾಡುತ್ತಿದ್ದ ವೇಳೆ ಹಿಂಬದಿಯಿಂದ ಐದು ಸುತ್ತು ಗುಂಡು ಹಾರಿಸಿದ ರಾಧಿಕಾ ತಂದೆ ದೀಪಕ್ ಯಾದವ್​, ನಾಲ್ಕು ಗುಂಡುಗಳು ಪುತ್ರಿಯ ಬೆನ್ನಿನ ಭಾಗಕ್ಕೆ ಹೊಕ್ಕಿ ಕೊನೆಯುಸಿರೆಳೆಯುವವರೆಗೂ ಮೌನಕ್ಕೆ ಜಾರಿರುವುದು ಕೊಲೆಯ ಉದ್ದೇಶವನ್ನು ಪ್ರಶ್ನಿಸಿದೆ. ಪ್ರಸ್ತುತ ಜೈಲಿನಲ್ಲಿರುವ ದೀಪಕ್​ ವಿರುದ್ಧ ಹಲವು ಅನುಮಾನಗಳನ್ನು ಮೂಡಿದ್ದು, ಹೆತ್ತ ಮಗಳನ್ನೇ ಕೊಲ್ಲುವ ಆತನ ಕ್ರೂರ ಮನಸ್ಥಿತಿ ಹಿಂದಿದ್ದ ಕಾರಣವೇನು ಎಂಬುದೇ ದೊಡ್ಡ ಪ್ರಶ್ನೆಯಾಗಿದೆ. ಈ ಮಧ್ಯೆ ಮೃತ ಟೆನಿಸ್​ ಆಟಗಾರ್ತಿಯ ಸ್ನೇಹಿತೆ ವಿಡಿಯೋ ಮೂಲಕ ಅಚ್ಚರಿ ಸಂಗತಿಗಳನ್ನು ಬಯಲು ಮಾಡಿದ್ದಾರೆ.

ಜಾಲತಾಣದಲ್ಲಿ ವಿಡಿಯೋ ತುಣುಕಿನ ಮೂಲಕ ದೀಪಕ್​ ವಿರುದ್ಧ ಹಿಮಾಂಶಿಕಾ ಸಿಂಗ್ ರಜಪೂತ್ ಆರೋಪಿಸಿದ್ದು, ರಾಧಿಕಾಳ ಜೀವನದ ಪ್ರತಿಯೊಂದು ವಿಷಯದಲ್ಲಿಯೂ ಆತ ಕಂಟ್ರೋಲ್ ಮಾಡುತ್ತಿದ್ದ. ಅವಳ ಜೀವನವನ್ನು ತನ್ನ ಬೈಗುಳ, ಟೀಕೆ, ಚುಚ್ಚು ಮಾತುಗಳಿಂದಲೇ ಕಣ್ಣೀರಿಡುವಂತೆ ಮಾಡಿದ್ದ. ರಾಧಿಕಾಳ ಸಾಧನೆಯನ್ನು ಸಹಿಸದ ಆತನ ಸ್ನೇಹಿತರ ಮಾತು ಕೇಳಿ, ಮಗಳನ್ನೇ ಹತ್ಯೆಗೈದಿದ್ದಾನೆ. ಅವಳನ್ನು ತುಂಬ ಬಿಗಿಯಾದ ವಾತಾವರಣದಲ್ಲಿ ಕೂಡಿಟ್ಟಿದ್ದ ಎಂದಿದ್ದಾರೆ.

"ಅವಳು ಶಾರ್ಟ್ಸ್​​ ಹಾಕಿಕೊಂಡರೆ ಸಹಿಸುತ್ತಿರಲಿಲ್ಲ. ಹುಡುಗರ ಜೊತೆಗೆ ಮಾತನಾಡಿದರೆ ಕಿಡಿಕಾರುತ್ತಿದ್ದರು. ರಾಧಿಕಾ ತನ್ನ ಟೆನಿಸ್ ವೃತ್ತಿಜೀವನದಲ್ಲಿ ತುಂಬಾ ಶ್ರಮಿಸಿದ್ದಳು. ತನ್ನದೇ ಆದ ಅಕಾಡೆಮಿಯನ್ನು ಸಹ ನಿರ್ಮಿಸಿದ್ದಳು. ರಾಧಿಕಾ ಸ್ವತಂತ್ರವಾಗಿ ಇಷ್ಟೆಲ್ಲ ಮಾಡುತ್ತಿದ್ದಳು ಎಂಬ ಸಂಗತಿಯನ್ನು ಅವರಿಂದ ಸಹಿಸಲಾಗಲಿಲ್ಲ ಎಂದು ಹಿಮಾಂಶಿ ಆರೋಪಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net