

IND vs ENG: ಲಾರ್ಡ್ಸ್ ಮೈದಾನದಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ಮತ್ತು ಭಾರತ ನಡುವಿನ 3ನೇ ಟೆಸ್ಟ್ನ ಎರಡನೇ ದಿನಾಂತ್ಯದಲ್ಲಿ ಇಂಗ್ಲೆಂಡ್ ಬ್ಯಾಟರ್ಗಳ ನಾಟಕದಾಟಕ್ಕೆ ಟೀಮ್ ಇಂಡಿಯಾ ತೀವ್ರ ಅಸಮಾಧಾನ ಹೊರಹಾಕಿದೆ.
ಮೊದಲ ಇನ್ನಿಂಗ್ಸ್ ಅಂತ್ಯಕ್ಕೆ ಎರಡೂ ತಂಡಗಳು 387 ರನ್ಗೆ ಸಮಬಲ ಕಂಡಿತು. ದಿನ ಮುಗಿಯಲು ಇನ್ನು ಕೆಲವೇ ನಿಮಿಷಗಳು ಬಾಕಿ ಉಳಿದಿರುವಾಗ ಬ್ಯಾಟಿಂಗ್ಗಿಳಿದ ಇಂಗ್ಲೆಂಡ್ ಬ್ಯಾಟರ್ಗಳಾದ ಜ್ಯಾಕ್ ಕ್ರಾಲಿ ಮತ್ತು ಬೆನ್ ಡಕೆಟ್, ಎರಡನೇ ಓವರ್ ಎದುರಿಸುವ ವೇಳೆ ಆಡಿದ ನಾಟಕ ಟೀಮ್ ಇಂಡಿಯಾವನ್ನು ಅಕ್ಷರಶಃ ಕೆರಳಿಸಿತು. ಎರಡನೇ ಓವರ್ನಲ್ಲಿ ಬೌಲಿಂಗ್ ದಾಳಿಗೆ ಜಸ್ಪ್ರಿತ್ ಬುಮ್ರಾ ಇಳಿದ ಬೆನ್ನಲ್ಲೇ ಕ್ರೀಸ್ನಲ್ಲಿದ್ದ ಜ್ಯಾಕ್, ಕಾರಣವಿಲ್ಲದೆ ಹೊರ ನಡೆದರು. ಇದು ಬುಮ್ರಾ ಮತ್ತು ಕ್ಯಾಪ್ಟನ್ ಶುಭಮನ್ ಗಿಲ್ ಪಿತ್ತವನ್ನು ನೆತ್ತಿಗೇರಿಸಿತು.
ಜ್ಯಾಕ್ ಮತ್ತು ಡಕೆಟ್ ನಡೆದುಕೊಂಡ ರೀತಿಗೆ ಕೆರಳಿದ ಗಿಲ್, ಸ್ಟಾರ್ ಬ್ಯಾಟರ್ಗಳನ್ನೇ ದಿಟ್ಟಿಸಿ, ನಿಂದಿಸಿದರು. ಧೈರ್ಯವಿದ್ದರೆ ಆಡಿ ಎಂದು ಸವಾಲು ಹಾಕಿದರು. ಈ ವೇಳೆ ಶುಭಮನ್ ಪರ ನಿಂತ ಕೆ.ಎಲ್. ರಾಹುಲ್, ಬುಮ್ರಾ ಮತ್ತು ಜಡೇಜಾ ಕೂಡ ಆಂಗ್ಲರ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದರು. ಇದೇ ಸಮಯಕ್ಕೆ ಇಂಗ್ಲೆಂಡ್ ಎರಡು ರನ್ಗಳಿಂದ ಲೀಡ್ ಪಡೆದು, ದಿನದಾಟವನ್ನು ಮುಗಿಸಿತು. ಜ್ಯಾಕ್ ಮತ್ತು ಡಕೆಟ್ ನಡೆದುಕೊಂಡ ರೀತಿಗೆ ಕ್ರಿಕೆಟ್ ಪ್ರಿಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗಿಲ್ ಬೈಗುಳದ ದೃಶ್ಯ ಸದ್ಯ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ,(ಏಜೆನ್ಸೀಸ್).