"ಜೂ.12 ಅಲ್ಲ 5ಕ್ಕೆ..."; ವಿಮಾನ ದುರಂತಕ್ಕೂ ಮುನ್ನ ತಂದೆ ಆಡಿದ ಕೊನೆಯ ಮಾತಿದು! ವಿಜಯ್​ ರೂಪಾನಿ ಪುತ್ರಿ ಭಾವುಕ | Radhika Rupani

ವಿಜಯವಾಣಿ (52)
Published on

Radhika Rupani: ಅಹಮದಾಬಾದ್​ ವಿಮಾನ ದುರಂತ ಸಂಭವಿಸಿ ಇಂದಿಗೆ ಒಂದು ತಿಂಗಳು ಕಳೆದಿದೆ. ಜೂನ್​ 12ರಂದು ನಡೆದ ಏರ್ ಇಂಡಿಯಾ ಬೋಯಿಂಗ್ 787-8 ಡ್ರೀಮ್‌ಲೈನರ್ ಅಪಘಾತದಲ್ಲಿ ಒಟ್ಟು 270 ಮಂದಿ ಜೀವ ಕಳೆದುಕೊಂಡರು. ಇದು ಭಾರತೀಯ ವಾಯುಯಾನ ಇತಿಹಾಸದಲ್ಲೇ ಅತ್ಯಂತ ಘೋರ ದುರಂತಗಳಲ್ಲಿ ಒಂದಾಗಿದೆ. ಇತ್ತೀಚೆಗಷ್ಟೇ ವಿಮಾನದಲ್ಲಿದ್ದ ಬ್ಲ್ಯಾಕ್​ಬಾಕ್ಸ್ ಮತ್ತು ಕಾಕ್​ಪಿಟ್​ ರೆಕಾರ್ಡರ್​ ಡೇಟಾಗಳು ತನಿಖಾ ಸಂಸ್ಥೆಗೆ ಲಭ್ಯವಾಗಿದೆ. ಈ ವಿಚಾರದ ಬೆನ್ನಲ್ಲೇ ದುರಂತದಲ್ಲಿ ಸಾವನ್ನಪ್ಪಿದ ಹಿರಿಯ ರಾಜಕಾರಣಿ ವಿಜಯ್ ರೂಪಾನಿ ಅವರ ಪುತ್ರಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.

ಜೂನ್​ 05ಕ್ಕೆ ಬರಬೇಕಿತ್ತು!

ಲಂಡನ್​ಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ ಗುಜರಾತ್‌ನ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಕೂಡ ಪ್ರಯಾಣಿಸುತ್ತಿದ್ದರು. ಆದರೆ, ದುರಂತದಲ್ಲಿ ಅವರೂ ಉಸಿರು ಚೆಲ್ಲಿದರು. ಅಪಘಾತ ನಡೆದು ಇಂದಿಗೆ ಒಂದು ತಿಂಗಳು ಕಳೆದ ಹಿನ್ನಲೆ ರಾಜ್‌ಕೋಟ್‌ನಲ್ಲಿರುವ ತಮ್ಮ ನಿವಾಸದಲ್ಲಿ ಮಾತನಾಡಿದ ರೂಪಾನಿ ಪುತ್ರಿ ರಾಧಿಕಾ, ದುರಂತಕ್ಕೂ ಮುನ್ನ ತಂದೆ ಆಡಿದ ಕೊನೆಯ ಮಾತುಗಳನ್ನು ನೆನೆದು ಭಾವುಕರಾಗಿದ್ದಾರೆ.

"ನನ್ನ ತಂದೆ ನನ್ನನ್ನು ಭೇಟಿಯಾಗಲು ಲಂಡನ್​ಗೆ ಪ್ರಯಾಣಿಸುತ್ತಿದ್ದರು. ಅಪಘಾತದ ಸಮಯದಲ್ಲಿ, ನಾನು ವಿಯೆನ್ನಾದಲ್ಲಿದ್ದೆ. ಮೊದಲಿಗೆ ಈ ಸುದ್ದಿ ಕೇಳಿದಾಗ, ಅವರು ಗಾಯಗೊಂಡಿರಬಹುದು ಎಂದು ಭಾವಿಸಿದ್ದೆ. ಅಪಘಾತ ಸಂಭವಿಸುವ ಒಂದು ದಿನದ ಮೊದಲು ನಾನು ಅಪ್ಪನೊಂದಿಗೆ ವಿಡಿಯೋ ಕಾಲ್​ನಲ್ಲಿ ಮಾತನಾಡಿದ್ದೆ. ನೀವ್ಯಾಕೆ ಜೂನ್​ 5ರಂದು ಬರಲಿಲ್ಲ? ಬೇಗ ಬನ್ನಿ ಎಂದು ಕೇಳಿದ್ದೆ. ಅಸಲಿಗೆ ಅವರ ಟಿಕೆಟ್​ ಜೂನ್ 5ಕ್ಕೆ ಬುಕ್ ಆಗಿತ್ತು. ಆದರೆ, ನಂತರದಲ್ಲಿ ಅದು ಜೂನ್ 12ಕ್ಕೆ ಬದಲಾಯಿತು" ಎಂದು ಹೇಳಿದ್ದಾರೆ.

ಭಾರತದ ಇತಿಹಾಸದಲ್ಲೇ ಇದು ಮಹಾ ದುರಂತ!

ಭಾರತದ ಇತಿಹಾಸದಲ್ಲೇ ಅತಿದೊಡ್ಡ ವಿಮಾನ ದುರಂತ ಗುಜರಾತ್​ನ ಅಹಮದಾಬಾದ್​ನಲ್ಲಿ ಸಂಭವಿಸಿದೆ. ಗುರುವಾರ (ಜೂನ್​ 12) ಮಧ್ಯಾಹ್ನ ಟೇಕ್ ಆಫ್ ಆದ ಏರ್ ಇಂಡಿಯಾ ಎ1-171 ವಿಮಾನ 32 ಸೆಕೆಂಡ್​ಗಳಲ್ಲಿ ಮೇಘಾನಿ ನಗರದ ವೈದ್ಯಕೀಯ ಕಾಲೇಜು ಹಾಸ್ಟೆಲ್ ಮೇಲೆ ಪತನಗೊಂಡಿತು. ವಿದೇಶಿಯರೂ ಸೇರಿ 230 ಪ್ರಯಾಣಿಕರು, 12 ಸಿಬ್ಬಂದಿ ಇದ್ದ ವಿಮಾನದಲ್ಲಿ ಓರ್ವ ಪ್ರಯಾಣಿಕ ಪವಾಡಸದೃಶ ರೀತಿಯಲ್ಲಿ ಬದುಕುಳಿದರೆ ಉಳಿದವರೆಲ್ಲ ಸಜೀವ ದಹನವಾಗಿದ್ದಾರೆ.

ವಿಮಾನ ಹಾಸ್ಟೆಲ್ ಕಟ್ಟಡದ ಮೇಲೆ ಬಿದ್ದ ಪರಿಣಾಮ ಊಟಕ್ಕೆ ಕುಳಿತಿದ್ದ 24 ವೈದ್ಯಕೀಯ ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿರುವ ಹಲವು ಗಾಯಾಳುಗಳ ಸ್ಥಿತಿ ಗಂಭೀರವಾಗಿದೆ. ಮೇಲ್ನೋಟಕ್ಕೆ ತಾಂತ್ರಿಕ ದೋಷವೇ ಅಪಘಾತಕ್ಕೆ ಕಾರಣ ಎನ್ನಲಾಗುತ್ತಿದ್ದು ತನಿಖೆ ಬಳಿಕ ನಿಖರ ಕಾರಣ ಗೊತ್ತಾಗಬೇಕಿದೆ. ಈ ಹಿಂದೆ ಭಾರತದಲ್ಲಿ ಹಲವು ನಾಗರಿಕ ವಿಮಾನ ಪತನ ದುರಂತ ನಡೆದಿದ್ದವಾದರೂ ಈ ಪ್ರಮಾಣದ ಭೀಕರ ಅಪಘಾತ ಇದೇ ಮೊದಲು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net