

ಶಿಕಾರಿಪುರ: ಕನ್ನಡ ಸಾಹಿತ್ಯದ ಅಧ್ಯಯನದ ಬಗ್ಗೆ ಎಲ್ಲರೂ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ಶಿಕಾರಿಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ. ಶೇಖರ್ ಹೇಳಿದರು. ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಏರ್ಪಡಿಸಿದ್ದ ವಿದ್ಯಾರ್ಥಿಗಳಿಗೆ ಸಾಹಿತ್ಯ ಏಕೆ ಬೇಕು ಎನ್ನುವ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಮಾಜ ಸದೃಢಗೊಳಿಸುವಲ್ಲಿ ವಿದ್ಯಾರ್ಥಿಗಳ ಪಾತ್ರ ಹಿರಿದು. ವಿದ್ಯಾರ್ಥಿಗಳು ಉತ್ತಮ ಭವಿಷ್ಯ ರೂಪಿಸಿಕೊಳ್ಳುವತ್ತ ಹೆಚ್ಚಿನ ಗಮನಹರಿಸಬೇಕು ಎಂದರು.
ಚಾರ್ವಾಕ ರಾಘು ಮಾತನಾಡಿ, ಸಾಹಿತ್ಯ ಎಂದರೆ ಕಥೆ, ಕವನ ಮಾತ್ರವಲ್ಲ. ವಿಜ್ಞಾನ, ಇತಿಹಾಸ, ಸಮಾಜಶಾಸ್ತ್ರ, ಮತ್ತಿತರ ವಿಭಾಗಗಳಲ್ಲಿ ಬಂದಿರುವ ವಿಚಾರಗಳು ಕೂಡ ಸಾಹಿತ್ಯ. ಇಂದು ಭಾರತದ ಸಂವಿಧಾನ ತಿದ್ದುಪಡಿ ಮಾಡುವ ವ್ಯವಸ್ಥಿತ ಷಡ್ಯಂತ್ರ ನಡೆಯುತ್ತಿದೆ. ರಾಜಕೀಯ ಸ್ವಾತಂತ್ರ ಸಿಕ್ಕಿದೆ. ಆದರೆ ಸಾಮಾಜಿಕ, ಆರ್ಥಿಕ ಸ್ವಾತಂತ್ರ ಸಂಪೂರ್ಣ ಸಿಕ್ಕಿಲ್ಲ. ಹೀಗಾಗಿ ಅಂಬೇಡ್ಕರ್, ಲೋಹಿಯಾ, ಗಾಂಧಿ, ಸಾವಿತ್ರಿ ಬಾಯಿ ಪುಲೆ ಮುಂತಾದವರ ಕುರಿತ ಸಾಹಿತ್ಯದ ಅಧ್ಯಯನ ಮಾಡಬೇಕು ಎಂದು ತಿಳಿಸಿದರು.
ವಿಭಾಗದ ಮುಖ್ಯಸ್ಥ ಆರ್.ಕೆ.ವಿನಯ್ ಮಾತನಾಡಿ, ಸಾಹಿತ್ಯ ಎನ್ನುವುದು ಕೇವಲ ಓದಲು ಅಲ್ಲ. ಅದು ಬದುಕಿನ ಭಾಗ. ಸಮಾಜಪರ ಇರುವ ಸಾಹಿತ್ಯ ಓದಿದರೆ ನಿಮ್ಮ ಬದುಕಿನ ದಾರಿಯೇ ಬದಲಾಗುತ್ತದೆ. ಜೀವನದಲ್ಲಿ ಹೊಸ ಬೆಳಕು ಮೂಡುತ್ತದೆ ಎಂದರು. ಕನ್ನಡ ಪ್ರಾಧ್ಯಾಪಕ ಸತೀಶ್ ನಾಯ್ಕ, ನರಸೇಗೌಡರು, ಸೋಮಶೇಖರ್ ಶಿಮೊಗ್ಗಿ ಇತರರಿದ್ದರು.