ಶೆಟ್ಟರ್ ಸೇರ್ಪಡೆ ಕೈಗೆ ಶಾಕ್ ಬಿಜೆಪಿಗೆ ಟಾನಿಕ್

Shettar BJP
Published on

ಪ್ರಕಾಶ. ಎಸ್. ಶೇಟ್ ಹುಬ್ಬಳ್ಳಿ
ಜಗದೀಶ ಶೆಟ್ಟರ್ ಘರ್ ವಾಪಸಿಯಿಂದ ಉತ್ತರ ಕರ್ನಾಟಕ ಭಾಗದಲ್ಲಿ ರಾಜಕೀಯ ಲೆಕ್ಕಾಚಾರಗಳು ಬದಲಾಗಲಿವೆ. ಶೆಟ್ಟರ್​ಗೆ ಪುನಃ ಬಿಜೆಪಿಯಲ್ಲಿ ರಾಜಕೀಯ ಸ್ಥಾನಮಾನಗಳು ಸಿಗಲಿವೆ ಎನ್ನುವ ಲೆಕ್ಕಾಚಾರ ಒಂದೆಡೆಯಾದರೆ, ಬಿಜೆಪಿಗೂ ಶೆಟ್ಟರ್ ಅವರಿಂದ ಲಾಭ. ಶೆಟ್ಟರ್ ಸೇರ್ಪಡೆ ಉತ್ತರ ಕರ್ನಾಟಕ ಭಾಗದಲ್ಲಿ ಲೋಕಸಭೆ ಚುನಾವಣೆ ಹೊತ್ತಲ್ಲಿ ಬಿಜೆಪಿಗೆ ಟಾನಿಕ್ ಆಗಲಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಶೆಟ್ಟರ್ ಹಾಗೂ ಲಕ್ಷ್ಮಣ ಸವದಿ ಅವರಿಗೆ ಬಿಜೆಪಿ ಟಿಕೆಟ್ ನಿರಾಕರಿಸಿದ್ದರಿಂದ ಅವರು ಕಾಂಗ್ರೆಸ್ ಸೇರಿದರು. ಇದರಿಂದ ಲಿಂಗಾಯತ ಮತಗಳು ಕಾಂಗ್ರೆಸ್​ನತ್ತ ಹೊರಳಿರುವುದು ಕಂಡು ಬಂದಿತ್ತು. ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ ತವರು ಜಿಲ್ಲೆ ಹಾವೇರಿಯಲ್ಲಿ ಒಟ್ಟು 6 ಸ್ಥಾನಗಳ ಪೈಕಿ ಬೊಮ್ಮಾಯಿ ಮಾತ್ರ ಬಿಜೆಪಿಯಿಂದ ಗೆದ್ದಿದ್ದರು. ಅದೂ ಅವರ ವೈಯಕ್ತಿಕ ವರ್ಚಸ್ಸಿನಿಂದ. ಇನ್ನುಳಿದ ಐದು ಕ್ಷೇತ್ರದಲ್ಲಿ ಬಿಜೆಪಿಯಿಂದ ಲಿಂಗಾಯತ ಅಭ್ಯರ್ಥಿಗಳು ಸ್ಪರ್ಧಿಸಿದ್ದರೂ ಕಾಂಗ್ರೆಸ್​ನ ನಾಲ್ವರು ಅಭ್ಯರ್ಥಿಗಳು ಅನ್ಯಜಾತಿಯವರಾಗಿದ್ದೂ (ಯು.ಬಿ. ಬಣಕಾರ ಹೊರತು ಪಡಿಸಿ) ಗೆದ್ದಿದ್ದು ಗಮನಾರ್ಹ. ಇದು ಬಹುಸಂಖ್ಯಾತ ಲಿಂಗಾಯತ ಮತಗಳು ಕಾಂಗ್ರೆಸ್​ನತ್ತ ಹೊರಳಿದ್ದವು ಎನ್ನುವುದನ್ನು ಸ್ಪಷ್ಟಪಡಿಸಿತ್ತು.

ಧಾರವಾಡ ಜಿಲ್ಲೆಯಲ್ಲಿಯೂ ಸಂತೋಷ ಲಾಡ್, ಎನ್.ಎಚ್. ಕೋನರೆಡ್ಡಿ ಪ್ರಬಲ ಲಿಂಗಾಯತ ಬಿಜೆಪಿ ಅಭ್ಯರ್ಥಿಗಳ ಎದುರು ಗೆದ್ದಿದ್ದರು. ಬೆಳಗಾವಿಯಲ್ಲಿ ಗಣೇಶ ಹುಕ್ಕೇರಿ, ಲಕ್ಷ್ಮಣ ಸವದಿ, ಭರಮಗೌಡ ಕಾಗೆ, ಲಕ್ಷ್ಮೀ ಹೆಬ್ಬಾಳ್ಳರ್, ಬಾಬಾಸಾಹೇಬ ಪಾಟೀಲ್, ಮಹಾಂತೇಶ ಕೌಜಲಗಿ, ಅಶೋಕ ಪಟ್ಟಣ ಸೇರಿ ಕಾಂಗ್ರೆಸ್​ನ 7 ಲಿಂಗಾಯತ ಅಭ್ಯರ್ಥಿಗಳು ಗೆದ್ದಿದ್ದರು. ಇದು ಲಿಂಗಾಯತ ಮತ ಧ್ರುವೀಕರಣವೆಂದೇ ವಿಶ್ಲೇಷಿಸಲಾಗಿತ್ತು. ವಿಜಯಪುರ, ಬಾಗಲಕೋಟೆಯಲ್ಲಿಯೂ ಪರಿಸ್ಥಿತಿ ಭಿನ್ನವಾಗಿರಲಿಲ್ಲ. ಶೆಟ್ಟರ್ ಸೇರ್ಪಡೆಯಿಂದ ಲೋಕಸಭೆ ಚುನಾವಣೆಯಲ್ಲಿ ಸಾಕಷ್ಟು ಬದಲಾವಣೆ ಆಗುವ ಸಾಧ್ಯತೆ ಇದೆ. ಬಿಜೆಪಿ ಸೇರಿರುವ ಶೆಟ್ಟರ್​ಗೆ ಅವಕಾಶ ಮಾಡಿಕೊಡಬೇಕಾಗಿದ್ದು, ಅವರು ಧಾರವಾಡ ಅಥವಾ ಬೆಳಗಾವಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಆಗಬಹುದು. ಬೆಳಗಾವಿಯ ಹಾಲಿ ಸಂಸದೆ ಮಂಗಲ ಅಂಗಡಿ ಅವರು ಶೆಟ್ಟರ್ ಸಂಬಂಧಿ. ಮಂಗಲ ಈ ಬಾರಿ ಸ್ಪರ್ಧಿಸುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದ್ದು, ಆ ಸ್ಥಾನ ಶೆಟ್ಟರ್ ಭರ್ತಿ ಮಾಡಬಹುದು. ಲಕ್ಷ್ಮಣ ಸವದಿ ಬಿಜೆಪಿ ಸೇರಿದರೂ ಜಾರಕಿಹೊಳಿ ಕುಟುಂಬದೊಂದಿಗೆ ಅನ್ಯೋನ್ಯತೆ ಅಷ್ಟಕ್ಕಷ್ಟೇ. ಶೆಟ್ಟರ್ ರಮೇಶ ಜಾರಕಿಹೊಳಿ ಅವರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದು, ಶೆಟ್ಟರ್ ಬೆನ್ನಿಗೆ ರಮೇಶ ನಿಲ್ಲುತ್ತಾರೆ.

ಶೆಟ್ಟರ್ ಧಾರವಾಡ ಲೋಕಸಭೆ ಅಭ್ಯರ್ಥಿ ಆದರೂ ಅಚ್ಚರಿಯಿಲ್ಲ. ಲಿಂಗಾಯತರಿಗೆ ಅವಕಾಶ ಕೊಡಬೇಕು ಎನ್ನುವ ದನಿ ಇರುವುದರಿಂದ ಹೈಕಮಾಂಡ್ ಈ ನಿರ್ಣಯಕ್ಕೆ ಬರುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ. ಇಂಥ ಸನ್ನಿವೇಶದಲ್ಲಿ ಹಾಲಿ ಕೇಂದ್ರ ಸಚಿವರು ಹಾಗೂ ಧಾರವಾಡ ಸಂಸದರೂ ಆಗಿರುವ ಪ್ರಲ್ಹಾದ ಜೋಶಿ ಅವರಿಗೆ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಸ್ಥಾನ ಒಲಿದು ಬರಬಹುದು. ಉತ್ತರಾಖಂಡ ಹಾಗೂ ರಾಜಸ್ಥಾನ ಚುನಾವಣೆಯಲ್ಲಿ ಜೋಶಿ ಬಿಜೆಪಿ ಗೆಲ್ಲಿಸಿಕೊಂಡು ಬರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಜೆ.ಪಿ. ನಡ್ಡಾ ಬಳಿಕ ಪ್ರಲ್ಹಾದ ಜೋಶಿ ಅವರನ್ನು ರಾಷ್ಟ್ರೀಯ ಅಧ್ಯಕ್ಷರನ್ನಾಗಿಸಿ ಪಕ್ಷವನ್ನು ಇನ್ನಷ್ಟು ಗಟ್ಟಿಗೊಳಿಸುವ ಚಿಂತನೆಯೂ ಇದೆ. ಇಲ್ಲದೆ ಹೋದಲ್ಲಿ ಉತ್ತರ ಕನ್ನಡ ಜಿಲ್ಲೆಯಿಂದ ಜೋಶಿ ಅವರನ್ನು ಅಭ್ಯರ್ಥಿಯನ್ನಾಗಿಸಿ ಶೆಟ್ಟರ್​ಗೆ ಧಾರವಾಡದಿಂದ ಅವಕಾಶ ಕೊಡಲೂಬಹುದು. ಇವೆಲ್ಲವನ್ನೂ ಮಿಕ್ಕಿ ಶೆಟ್ಟರ್ ಅವರಿಗೆ ರಾಜ್ಯಸಭೆ ಸದಸ್ಯರನ್ನಾಗಿಸುವ ಸಾಧ್ಯತೆಯೂ ಉಂಟು.

ಲೆಕ್ಕಾಚಾರ ತಲೆಕೆಳಗೆ: ಜಗದೀಶ್ ಶೆಟ್ಟರ್ ಕಾಂಗ್ರೆಸ್​ಗೆ ಸಡನ್ ಶಾಕ್ ನೀಡಿದ್ದು, ಕೈ ಪಾಳಯದಲ್ಲಿ ಕಸಿವಿಸಿಯುಂಟಾಗಿದೆ. ಲೋಕಸಭೆ ಚುನಾವಣೆ ಎದುರಿಗಿರುವಾಗ ಶೆಟ್ಟರ್ ತೀರ್ಮಾನ ಚುನಾವಣಾ ಲೆಕ್ಕಾಚಾರಕ್ಕೆ ಹೊಡೆತಕೊಟ್ಟಿದೆ. ಶೆಟ್ಟರ್ ಬಿಜೆಪಿ ತೊರೆದಿದ್ದನ್ನೇ ಕಾಂಗ್ರೆಸ್ ಬಳಸಿಕೊಂಡಿತ್ತು. ಜತೆಗೆ ಲಕ್ಷ್ಮಣ್ ಸವದಿ ಕೂಡ ತೊರೆದಿದ್ದರಿಂದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪ್ರಚಾರಕ್ಕೆ ದೊಡ್ಡ ಸರಕಾಯಿತು. ಲೋಕಸಭೆ ಚುನಾವಣೆಯಲ್ಲೂ ಇದೇ ವಿಚಾರ ಜೀವಂತ ಇಡುವ ಪ್ರಯತ್ನ ನಡೆದಿತ್ತು. ಲಿಂಗಾಯತ ಸಮುದಾಯದ ಮತ ಬ್ಯಾಂಕ್ ಮೇಲೆ ಕಣ್ಣಿಟ್ಟು, ಬಿಜೆಪಿಯ ಶಕ್ತಿ ಕುಂದಿಸುವ ಲೆಕ್ಕಾಚಾರವದು. ಇದೀಗ ಕಾಂಗ್ರೆಸ್​ನ ಲೆಕ್ಕಾಚಾರ ತಲೆಕೆಳಗಾಗಿದೆ.

ಹಾವೇರಿಯಿಂದ ಬೊಮ್ಮಾಯಿ?: ವಿಜಯೇಂದ್ರ ರಾಜ್ಯಾಧ್ಯಕ್ಷರಾಗಿ ಲಿಂಗಾಯತರಿಗೆ ಮನ್ನಣೆ ಸಿಕ್ಕಿದ್ದರಿಂದ ವಿಪಕ್ಷ ಸ್ಥಾನ ಒಕ್ಕಲಿಗರಿಗೆ ನೀಡಬೇಕೆಂಬ ಕಾರಣಕ್ಕೆ ಆರ್.ಅಶೋಕ್ ಅವರಿಗೆ ಅವಕಾಶ ಒಲಿಯಿತು. ಹೀಗಾಗಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಇದೀಗ ಸೂಕ್ತ ಸ್ಥಾನಮಾನ ನೀಡಬೇಕೆಂಬ ಕಾರಣಕ್ಕೆ ಕೇಂದ್ರಕ್ಕೆ ಕಳುಹಿಸುವ ಚಿಂತನೆ ನಡೆದಿದೆ. ಹಾವೇರಿ-ಗದಗ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸಲು ಶಿವಕುಮಾರ ಉದಾಸಿ ನಿರಾಕರಿಸಿರುವುದರಿಂದ ಎರಡೂ ಜಿಲ್ಲೆಯಲ್ಲಿ ಪ್ರಬಲ ಹಿಡಿತ ಹೊಂದಿರುವ ಬೊಮ್ಮಾಯಿ ಅವರಿಗೆ ಅವಕಾಶ ನೀಡಲು ಹೈಕಮಾಂಡ್ ಸಿದ್ಧತೆ ನಡೆಸಿದೆ. ಇದಕ್ಕೆ ಪೂರಕವಾಗಿ ಬೊಮ್ಮಾಯಿ ಅವರೂ ಯೋಜನೆ ರೂಪಿಸುತ್ತಿದ್ದು, ಈಗಾಗಲೆ ಎರಡು ಹಂತಗಳಲ್ಲಿ ಸಮೀಕ್ಷೆ ನಡೆಸಿದ್ದಾರೆ. ಮುಖ್ಯಮಂತ್ರಿಯಾಗಿ ಹಾವೇರಿ ಜಿಲ್ಲೆಯ ಅಭಿವೃದ್ಧಿಗೆ ವ್ಯಾಪಕ ಕಾರ್ಯಕ್ರಮಗಳನ್ನು ತಂದಿರುವುದು ಬೊಮ್ಮಾಯಿ ಗೆಲುವಿಗೆ ಸಹಕಾರಿಯಾಗಲಿದೆ.

ಕಮಲ ಪಡೆಗೆ ವಾಪಾಸಾಗುವ ಪ್ರಶ್ನೆಯೇ ಇಲ್ಲ: ಜಗದೀಶ್ ಶೆಟ್ಟರ್ ಯಾವ ಕಾರಣಕ್ಕೆ ಬಿಜೆಪಿಗೆ ವಾಪಸಾದರು ಎಂಬುದು ಗೊತ್ತಿಲ್ಲ. ಆದರೆ ನಾನಂತೂ ಹೋಗುವ ಪ್ರಶ್ನೆಯೇ ಇಲ್ಲವೆಂದು ಶಾಸಕ ಲಕ್ಷ್ಮಣ ಸವದಿ ಸ್ಪಷ್ಟಪಡಿಸಿದ್ದಾರೆ. ಶೆಟ್ಟರ್ ಬಿಜೆಪಿಗೆ ಹೋಗಿದ್ದರಿಂದ ಕಾಂಗ್ರೆಸ್​ಗೆ ಡ್ಯಾಮೇಜ್ ಆಗಲ್ಲ. ರಾಷ್ಟ್ರೀಯ ಪಕ್ಷಗಳು ಒಬ್ಬರ ಮೇಲೆ ಅವಲಂಬಿತವಾಗಿರಲ್ಲ. ಅವರು ರಾಜೀನಾಮೆ ನೀಡಿದ್ದು ವೈಯಕ್ತಿಕ. ಆ ಬಗ್ಗೆ ಮಾತನಾಡಲ್ಲ ಎಂದರು. ನಾವಿಬ್ಬರು ಕಾಂಗ್ರೆಸ್ ಬರುವಾಗ ಒಟ್ಟಿಗೆ ನಿರ್ಧಾರ ಮಾಡಿರಲಿಲ್ಲ. ನಾನು ಮೊದಲು ಸೇರ್ಪಡೆಯಾದೆ, ಆಮೇಲೆ ಅವರು ಬಂದಿದ್ದರು. ಈಗ ಏಕೆ ಬಿಜೆಪಿಗೆ ಹೋದರು ಎಂದು ಅವರನ್ನೇ ಕೇಳಬೇಕು ಎಂದರು.

ರಾಜ್ಯ ರಾಜಕಾರಣದಲ್ಲಿ ದೊಡ್ಡ ಬೆಳವಣಿಗೆ: ಲೋಕಸಭೆ ಚುನಾವಣೆಗೂ ಮುನ್ನ ರಾಜ್ಯ ರಾಜಕಾರಣದಲ್ಲಿ ದೊಡ್ಡ ರಾಜಕೀಯ ಬೆಳವಣಿಗೆ ಆಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭವಿಷ್ಯ ನುಡಿದಿದ್ದಾರೆ. ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಮರಳಿ ಬಿಜೆಪಿ ಸೇರ್ಪಡೆಯಾಗಿರುವ ಹಿನ್ನೆಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.

ಶೆಟ್ಟರ್ ಸರಿಯಾದ ಸಮಯದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಂಡಿದ್ದಾರೆ. ಅವರು ಕಾಂಗ್ರೆಸ್ ಮೇಲಿನ ಪ್ರೀತಿಯಿಂದ ಹೋಗಿರಲಿಲ್ಲ. ಬಿಜೆಪಿಯಲ್ಲಿ ಆಗಿರುವ ಬೇಸರದಿಂದ ಹೋಗಿದ್ದರು ಎಂದರು. ಅವರನ್ನು ನಾನು ಜನಸಂಘದಿಂದ ನೋಡಿದ್ದೇನೆ. ಅವರಿಗೆ ಕಾಂಗ್ರೆಸ್ ಡಿಎನ್​ಎ ಒಗ್ಗುವುದಿಲ್ಲ. ಅವರ ದೇಹ ಮಾತ್ರ ಅಲ್ಲಿಗೆ ಹೋಗಿತ್ತು. ಮನಸ್ಸು ಬಿಜೆಪಿಯಲ್ಲಿಯೇ ಇತ್ತು. ಮುಂದಿನ ದಿನಗಳಲ್ಲಿ ಬಿಜೆಪಿ ನಾಯಕರಷ್ಟೇ ಘರ್​ವಾಪ್ಸಿ ಆಗುವುದಿಲ್ಲ. ಕಾಂಗ್ರೆಸ್​ನ ಪ್ರಮುಖ ನಾಯಕರೂ ಬರಲಿದ್ದಾರೆ. ಚುನಾವಣೆ ನಂತರ ಕಾಂಗ್ರೆಸ್ ಇಬ್ಬಾಗವಾಗುವ ಸಾಧ್ಯತೆ ಇದೆ ಎಂದರು. ಡಿಕೆ ಶಿವಕುಮಾರ್ ಯಾವಾಗಲೂ ಬ್ಲಾಕ್ ಮೇಲ್ ರಾಜಕಾರಣದ ಬಗ್ಗೆ ಮಾತನಾಡುತ್ತಾರೆ. ಶೆಟ್ಟರ್ ಅವರನ್ನು ಯಾರೂ ಬ್ಲಾಕ್​ವೆುೕಲ್ ಮಾಡಲು ಸಾಧ್ಯವಿಲ್ಲ. ಅವರ ಸೇರ್ಪಡೆಯಿಂದ ಪಕ್ಷಕ್ಕೆ ಇನ್ನಷ್ಟು ಬಲ ಬಂದಿದೆ ಎಂದರು.

ಎಂಎಲ್ಸಿ ಸ್ಥಾನಕ್ಕೆ ಶೆಟ್ಟರ್ ರಾಜೀನಾಮೆ ಅಂಗೀಕಾರ: ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ಜಗದೀಶ್ ಶೆಟ್ಟರ್ ಸಲ್ಲಿಸಿರುವ ರಾಜೀನಾಮೆಯನ್ನು ಸಭಾಪತಿ ಬಸವರಾಜ ಹೊರಟ್ಟಿ ಅಂಗೀಕರಿಸಿದ್ದಾರೆ.

ಕಾಂಗ್ರೆಸ್​ನೊಳಗಿನ ಉಸಿರುಗಟ್ಟುವ ವಾತಾವರಣ ತಡೆದುಕೊಳ್ಳಲಾಗದೆ ಜಗದೀಶ್ ಶೆಟ್ಟರ್ ಮರಳಿ ಬಿಜೆಪಿಗೆ ಸೇರಿದ್ದಾರೆ. ಇದು ಆಪರೇಷನ್ ಕಮಲವೇನಲ್ಲ. ಸಂಘ ಪರಿವಾರದ ಹಿನ್ನೆಲೆಯಿಂದ ಬೆಳೆದ ಅವರು ಮರಳಿ ಗೂಡಿಗೆ ಬಂದಿದ್ದಾರೆ.

| ಆರ್.ಅಶೋಕ್, ವಿರೋಧ ಪಕ್ಷದ ನಾಯಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net