ಮದುವೆ ಆಗು ಎಂದು ಒತ್ತಾಯಿಸಿದ ಇಬ್ಬರಿಗೂ ಒಲ್ಲೆ ಎಂದಳು; ಎರಡು ಗುಂಡೇಟಿಗೆ ಹೆಣವಾಗಿ ಉರುಳಿದಳು..!

Mayra
Published on

ನವದೆಹಲಿ: ಮದುವೆಯಾಗು ಎಂದು ಈಕೆಯನ್ನು ಇಬ್ಬರು ಒತ್ತಾಯಿಸುತ್ತಿದ್ದರು. ಆದರೆ ಇಬ್ಬರ ಬೇಡಿಕೆಯನ್ನೂ ನಿರಾಕರಿಸಿದ್ದೇ ಈಕೆಯ ಸಾವಿಗೆ ಕಾರಣವಾಗಿದೆ. 25 ವರ್ಷದ ಈ ಯುವತಿ ಎರಡು ಗುಂಡೇಟಿಗೆ ಬಲಿಯಾಗಿ ಮೃತಪಟ್ಟಿದ್ದಾಳೆ.

ಬ್ರಿಟಿಷ್ ಯುವತಿ ಮಯ್ರಾ ಜುಲ್ಫೀಕರ್​ ಕೊಲೆಯಾದ ಯುವತಿ. ಈಕೆ ತಾನು ವಾಸವಿದ್ದ ಬಾಡಿಗೆ ಮನೆಯಲ್ಲಿ ಹತ್ಯೆಗೀಡಾಗಿದ್ದಾಳೆ. ಪಾಕಿಸ್ತಾನದ ಲಾಹೋರ್​ನ ಡಿಫೆನ್ಸ್​ ಹೌಸಿಂಗ್ ಅಥಾರಿಟಿಗೆ ಸೇರಿದ ನಿವಾಸದಲ್ಲಿ ಈಕೆ ವಾಸವಾಗಿದ್ದಳು. ಲಾಹೋರ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಈಕೆಯ ಸ್ನೇಹಿತ ಅಸಾದ್ ಅಮೀರ್ ಬಟ್​ ಬಗ್ಗೆ ಶಂಕೆ ಹೊಂದಿದ್ದಾರೆ.

ಮಯ್ರಾ ತನ್ನ ಗೆಳತಿ ಇಕ್ರಾ ಜತೆ ಬಾಡಿಗೆ ಮನೆಯಲ್ಲಿ ನೆಲೆಸಿದ್ದಳು. ಮಯ್ರಾ ಪೋಷಕರು ಯುಕೆಯಲ್ಲಿದ್ದು, ಈಕೆ ಮೂರು ತಿಂಗಳ ಹಿಂದೆ ಲಾಹೋರ್​ಗೆ ಬಂದಿದ್ದಳು. ಮಯ್ರಾ ಕತ್ತು ಹಾಗೂ ತೋಳಿನ ಮೇಲೆ ಒಂದೊಂದು ಗುಂಡೇಟು ಬಿದ್ದಿದ್ದು, ಕೈ ಹಾಗೂ ಕಾಲಿನ ಮೇಲೆ ಪರಚಿದ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಯ್ರಾ ಅಂಕಲ್, ಲಾಹೋರ್​ನಲ್ಲೇ ನೆಲೆಸಿರುವ ಮಹಮದ್ ನಜೀರ್, ಕೊಲೆಯಾಗುವ ಹಿಂದಿನ ದಿನ ಮಯ್ರಾ ತಮ್ಮ ಮನೆಗೆ ಬಂದಿದ್ದು, ಮದುವೆ ಆಗುವಂತೆ ಆಕೆಗೆ ಇಬ್ಬರು ಒತ್ತಾಯಿಸುತ್ತಿರುವ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅಸಾದ್ ಅಮೀರ್ ಬಟ್​ ಹಾಗೂ ಜಹೀದ್ ಜದೂನ್ ಎಂಬಿಬ್ಬರು ಮದುವೆ ಆಗುವಂತೆ ಒತ್ತಾಯಿಸಿದ್ದು, ಅದನ್ನು ಮಯ್ರಾ ನಿರಾಕರಿಸಿದ್ದಕ್ಕೆ ಅವರೇ ಈ ಕೊಲೆ ಮಾಡಿದ್ದಾರೆ ಎಂದು ನಜೀರ್ ಪೊಲೀಸರಿಗೆ ನೀಡಿದ್ದ ದೂರಿನಲ್ಲಿ ತಿಳಿಸಿದ್ದಾರೆ. ಈ ಮೇರೆಗೆ ಪೊಲೀಸರು ಆ ಇಬ್ಬರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಇಳಿದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net