ಅತಿ ಅಗತ್ಯವಿರದೆ ಸಿಟಿ ಸ್ಕ್ಯಾನ್​ ಮಾಡಿಸ್ಕೊಂಡ್ರೆ ಮತ್ತೊಂದು ಅಪಾಯ ಮೈಮೇಲೆ ಎಳೆದುಕೊಂಡಂತೆ: ಎಐಐಎಂಎಸ್​ ವೈದ್ಯರ ಎಚ್ಚರಿಕೆ

CT scan
Published on

ನವದೆಹಲಿ: ಕರೊನಾ ಸೋಂಕು ವ್ಯಾಪಿಸುತ್ತಿರುವ ನಡುವೆಯೇ ಈಗ ಹೆಚ್ಚಾಗಿ ಕೇಳಿಬರುತ್ತಿರುವ ಮತ್ತೊಂದು ವಿಷಯವೆಂದರೆ ಸಿಟಿ ಸ್ಕ್ಯಾನ್​ನದ್ದು. ಕರೊನಾ ಸೋಂಕು ಇದೆಯೋ ಇಲ್ಲವೋ ಎಂದು ತಿಳಿದುಕೊಳ್ಳಲು ಸಿಟಿ ಸ್ಕ್ಯಾನ್​ ಕೂಡ ವೈದ್ಯರು ಸಲಹೆ ಮಾಡುತ್ತಿದ್ದಾರೆ. ಆದರೆ ಅದನ್ನು ಅತಿ ಅಗತ್ಯ ಎನಿಸದ ಹೊರತು ಮಾಡಿಸಿಕೊಳ್ಳುವುದು ಒಳಿತಲ್ಲ. ಹಾಗೆ ಪದೇಪದೆ ಸಿಟಿ ಸ್ಯ್ಕಾನ್​ಗೆ ಒಳಗಾದರೆ ಮತ್ತೊಂದು ಅಪಾಯವನ್ನು ಮೈಮೇಲೆ ಎಳೆದುಕೊಂಡಂತೆ ಎಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ.

ಆಲ್​ ಇಂಡಿಯಾ ಇನ್​ಸ್ಟಿಟ್ಯೂಟ್​ ಆಫ್ ಮೆಡಿಕಲ್ ಸೈನ್ಸಸ್​ (ಎಐಐಎಂಎಸ್​) ನಿರ್ದೇಶಕ ಡಾ.ರಣ್​ದೀಪ್ ಗುಲೇರಿಯಾ ಇಂಥದ್ದೊಂದು ಎಚ್ಚರಿಕೆಯನ್ನು ನೀಡಿದ್ದಾರೆ. ತುಂಬ ಮಂದಿ ಅಗತ್ಯ ಇರದಿದ್ದರೂ ಕರೊನಾ ಸೋಂಕು ಪತ್ತೆ ಹಚ್ಚಿಕೊಳ್ಳಲು ಸಿಟಿ ಸ್ಕ್ಯಾನ್ ಮೊರೆ ಹೋಗುತ್ತಿದ್ದಾರೆ. ಇನ್ನು ಕೆಲವರು ಸಿಟಿ ಸ್ಕ್ಯಾನ್​ಗೆ ಬರೆಯಿರಿ ಎಂದು ವೈದ್ಯರಿಗೇ ಹೇಳುತ್ತಿದ್ದಾರೆ. ಆದರೆ ಹೀಗೆ ಅನಗತ್ಯವಾಗಿ ಸಿಟಿ ಸ್ಕ್ಯಾನ್​ಗೆ ಒಳಗಾಗುತ್ತಿರುವುದು ಮುಂದೆ ದೊಡ್ಡ ಅಪಾಯವನ್ನೇ ತಂದೊಡ್ಡಲಿದೆ ಎಂದು ಅವರು ಕಿವಿಮಾತು ಹೇಳಿದ್ದಾರೆ.

ಕರೊನಾ ಸೋಂಕಿತ ಎಲ್ಲರಿಗೂ ಸಿಟಿ ಸ್ಕ್ಯಾನ್​ ಅಗತ್ಯ ಇರುವುದಿಲ್ಲ. ರೋಗ ಲಕ್ಷಣ ಸಣ್ಣ ಪ್ರಮಾಣದಲ್ಲಿ ಇರುವಾಗ ಸಿಟಿ ಸ್ಕ್ಯಾನ್​ ಅಗತ್ಯವೇ ಇಲ್ಲ. ರೋಗಲಕ್ಷಣ ಸಾಧಾರಣಕ್ಕಿಂತ ಹೆಚ್ಚಾದಾಗ ಅಥವಾ ಆಸ್ಪತ್ರೆಗೆ ಸೇರುವಂಥ ಪರಿಸ್ಥಿತಿ ಸೃಷ್ಟಿಯಾದಾಗ ಸಿಟಿ ಸ್ಕ್ಯಾನ್ ಮಾಡಿಸಿಕೊಳ್ಳಬಹುದು. ಆಗಲೂ ಮೊದಲ ಆಯ್ಕೆ ಚೆಸ್ಟ್​ ಎಕ್ಸ್​-ರೇ ಆಗಿರಬೇಕು. ಅದರಲ್ಲೂ ಸರಿ ಅನಿಸದಿದ್ದಾಗ ಮಾತ್ರ ಸಿಟಿ ಸ್ಕ್ಯಾನ್​ ಮಾಡಿಸಿಕೊಳ್ಳಬಹುದು ಎಂದು ಅವರು ಸಲಹೆ ನೀಡಿದ್ದಾರೆ.

ದುರಂತವೆಂದರೆ ಅಸಿಂಪ್ಟಮ್ಯಾಟಿಕ್ ಸೋಂಕಿತರೂ ಸಿಟಿ ಸ್ಕ್ಯಾನ್​ ಮಾಡಿಸಿಕೊಳ್ಳುತ್ತಿದ್ದಾರೆ. ಒಮ್ಮೆ ಸಿಟಿ ಸ್ಕ್ಯಾನ್ ಮಾಡಿಸಿಕೊಂಡರೆ 300ರಿಂದ 400 ಎಕ್ಸ್​ರೇಯಿಂದ ಹೊರಹೊಮ್ಮುವಷ್ಟು ರೇಡಿಯೇಷನ್​ ದೇಹಕ್ಕೆ ತಗಲುತ್ತದೆ. ಹೀಗೆ ಪದೇಪದೆ ಸಿಟಿ ಸ್ಕ್ಯಾನ್ ಮಾಡಿಸಿಕೊಂಡರೆ, ಅದರಲ್ಲೂ ಯುವಪೀಳಿಗೆಯವರು ಮುಂದೆ ಕ್ಯಾನ್ಸರ್ ರೋಗಕ್ಕೆ ತುತ್ತಾಗುವ ಸಾಧ್ಯತೆ ಅಧಿಕವಿರುತ್ತದೆ ಎಂದು ಅವರು ಕಿವಿಮಾತು ಹೇಳಿದ್ದಾರೆ. ಅದೇ ರೀತಿ ಸಿಆರ್​ಪಿ, ಡಿ-ಡಿಮ್ಮರ್​ ಮುಂತಾದ ಬಯೋಮಾರ್ಕರ್ಸ್ ಪರೀಕ್ಷೆಗೂ ಅತಿ ಅಗತ್ಯವೆನಿಸದೆ ಒಳಪಡಬಾರದು. ಸೋಂಕಿನ ಲಕ್ಷಣಗಳು ಇಲ್ಲದಿದ್ದಾಗ ಅಥವಾ ಸಣ್ಣ ಪ್ರಮಾಣಲ್ಲಿದ್ದಾಗ ಈ ಟೆಸ್ಟ್​ಗಳ ಅಗತ್ಯ ಇರುವುದಿಲ್ಲ. ಇವು ಕೂಡ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತವೆ ಎಂದಿದ್ದಾರೆ. ಹಾಗೆಯೇ ಸೋಂಕಿನ ಆರಂಭಿಕ ಹಂತದಲ್ಲೇ ಸ್ಟಿರಾಯ್ಡ್ಸ್​ ತೆಗೆದುಕೊಳ್ಳುವುದು ಕೂಡ ಆರೋಗ್ಯಕ್ಕೆ ಹಾನಿಕರ ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net