ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ‌ ಮತ್ತೊಂದು ಎಡವಟ್ಟು; ನಾಪತ್ತೆಯಾಗಿದ್ದ ಸೋಂಕಿತನ ಮೃತದೇಹ ಆಸ್ಪತ್ರೆ ಶವಾಗಾರದಲ್ಲೇ ಪತ್ತೆ!

Suresh
Published on

ಚಾಮರಾಜನಗರ: ಆಮ್ಲಜನಕ ಕೊರತೆಯಿಂದ, ವೈದ್ಯಕೀಯ ಸೌಲಭ್ಯದ ಅವ್ಯವಸ್ಥೆಯಿಂದ ಸಾಲುಸಾಲು ಮರಣ ಸಂಭವಿಸಿರುವ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಮತ್ತೊಂದು ಎಡವಟ್ಟು ನಡೆದಿದೆ. ಇಲ್ಲಿಂದ ಸೋಂಕಿತನೊಬ್ಬ ನಾಪತ್ತೆಯಾಗಿದ್ದು, ಬಳಿಕ ಆಸ್ಪತ್ರೆಯ ಶವಾಗಾರದಲ್ಲೇ ಆತನ ಶವ ಪತ್ತೆಯಾಗಿದೆ!

ಚಾಮರಾಜನಗರ ತಾಲೂಕು ಆಲ್ದೂರು ಗ್ರಾಮದ ಸುರೇಶ್ ಮೃತಪಟ್ಟಿರುವ ಸೋಂಕಿತ. ಕರೊನಾ ಸೋಂಕಿಗೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಸುರೇಶ್ ನಾಪತ್ತೆಯಾಗಿದ್ದರೂ, ಆಸ್ಪತ್ರೆಯವರು ಆತನ ಕುಟುಂಬಸ್ಥರಿಗೆ ಯಾವುದೇ ಮಾಹಿತಿ ನೀಡಿರಲಿಲ್ಲ.

ತನ್ನ ಪತಿ ಕಾಣಿಸುತ್ತಿಲ್ಲ ಎಂದು ಸುರೇಶ್ ಪತ್ನಿ ಎಲ್ಲೆಡೆ ಹುಡುಕಾಡಿದ್ದಾರೆ. ಪತಿಯ ಬಗ್ಗೆ ಆಸ್ಪತ್ರೆಯಲ್ಲೂ ವಿಚಾರಿಸಿದ್ದಾರೆ. ಆದರೂ ಎಲ್ಲಿಯೂ ಸರಿಯಾದ ಮಾಹಿತಿ ಸಿಗದೆ ಬೇಸತ್ತ ಆಕೆ ಕೊನೆಗೆ ಮಾಧ್ಯಮಗಳ ಮೊರೆ ಹೋಗಿದ್ದಾರೆ. ಕರೋನಾ ಸೋಂಕಿತ ತಮ್ಮ ಪತಿ ಕಾಣಿಸುತ್ತಿಲ್ಲ, ಆಸ್ಪತ್ರೆಯಲ್ಲಿ ಕೇಳಿದರೂ ಸರಿಯಾದ ಮಾಹಿತಿ ನೀಡುತ್ತಿಲ್ಲ ಎಂದು ಅವರು ಪತ್ರಕರ್ತರ ಬಳಿ ಅಲವತ್ತುಕೊಂಡಿದ್ದಾರೆ. ಬಳಿಕ ಆಕೆಯ ಪತಿಯ ಶವ ಆಸ್ಪತ್ರೆಯ ಶವಾಗಾರದಲ್ಲಿರುವುದು ಮಾಧ್ಯಮದವರ ಮಧ್ಯಪ್ರವೇಶದಿಂದಾಗಿ ತಿಳಿದುಬಂತು.

ಈ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕಿದಾಗ ಇಂದು ಬೆಳಗ್ಗೆ ಇದೇ ಜಿಲ್ಲಾಸ್ಪತ್ರೆಯ ಮುಂಭಾಗದ ರಸ್ತೆಯಲ್ಲಿ ಸುರೇಶ್ ಶವವಾಗಿ ಪತ್ತೆಯಾಗಿದ್ದು ತಿಳಿದುಬಂದಿದೆ. ಈ ಬಗ್ಗೆ ಮಾಹಿತಿ ತಿಳಿದ ಪೊಲೀಸರು ಅದನ್ನು ಅನಾಥ ಶವ ಎಂದು ಭಾವಿಸಿ ಆಸ್ಪತ್ರೆಯ ಶವಾಗಾರಕ್ಕೆ ತಲುಪಿಸಿದ್ದರು. ಇಷ್ಟೆಲ್ಲ ನಡೆದಿರುವುದು ತಿಳಿಯದ ಸುರೇಶ್ ಪತ್ನಿ, ಪತಿಗಾಗಿ ಎಲ್ಲೆಡೆ ಹುಡುಕಾಡುವಂತೆ ಆಗಿತ್ತು.

ಸುರೇಶ್ ಮೃತದೇಹ ಶವಾಗಾರದಲ್ಲಿ ಕಂಡುಬಂದಿದ್ದನ್ನು ತಿಳಿದ ಬಳಿಕ ಅವರ ಕುಟುಂಬಸ್ಥರು ಗೋಳಾಡಿದ್ದು, ಕರೊನಾ ರೋಗಿಯನ್ನು ಹೊರಹೋಗಲು ಬಿಟ್ಟು ಆಸ್ಪತ್ರೆ ಸಿಬ್ಬಂದಿ ಎಡವಟ್ಟು ಮಾಡಿದ್ದಾರೆ ಎಂದು ಸಾರ್ವಜನಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮತ್ತೊಂದೆಡೆ ಕರೊನಾ ಸೋಂಕಿತ ಎಂದು ಗೊತ್ತಾಗದೆ ಯಾವುದೇ ನಿಯಮ ಪಾಲಿಸದೆ ಪೊಲೀಸರು ಸುರೇಶ್ ಮೃತದೇಹವನ್ನು ಶವಾಗಾರಕ್ಕೆ ಸಾಗಿಸಿ ಇರಿಸಿದ್ದಾರೆ ಎಂದು ಪೊಲೀಸರನ್ನೂ ಸಾರ್ವಜನಿಕರು ಟೀಕಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net