

ಕುರುಕ್ಷೇತ್ರ: ಮದ್ಯವ್ಯಸನಿ ಗಂಡನನ್ನು ತೊರೆದು ಮತ್ತೊಬ್ಬನೊಂದಿಗೆ ಪ್ರೇಮ ಶುರುವಿಟ್ಟುಕೊಂಡವಳಿಗೆ ಪ್ರೇಮಿಯೇ ವಿಷವುಣಿಸಿ ಕೊಂದ ಘಟನೆ ನಡೆದಿದೆ.
ಮೃತ ಮಹಿಳೆ ಹೆಸರು ಪಿಂಕಿ, ಕುರುಕ್ಷೇತ್ರದ ಬೊಹ್ಲಿ ಗ್ರಾಮದವಳು. ಸುಮಾರು 10 ವರ್ಷದ ಹಿಂದೆ ಪಿಂಕಿ ರವಿ ಎಂಬಾತನನ್ನು ಮದುವೆಯಾದಳು. ಅವರಿಗೆ ಇಬ್ಬರು ಮಕ್ಕಳು ಜನಿಸಿದರು. ಏತನ್ಮಧ್ಯೆ ಸುಮಾರು 3 ವರ್ಷಗಳ ಹಿಂದೆ, ರವಿ ಮಾದಕ ವ್ಯಸನಿಯಾದ. ಇದರಿಂದ ತೀವ್ರ ನೊಂದ ಪಿಂಕಿ, ಪತಿಯಿಂದ ದೂರವಾಗಿ ತನ್ನ ಮಕ್ಕಳೊಂದಿಗೆ ಪ್ರತ್ಯೇಕವಾಗಿ ವಾಸಿಸಲು ಥಾನೇಸರದ ಆಕಾಶ್ ನಗರ ಪ್ರದೇಶದ ಬಾಡಿಗೆ ಮನೆಗೆ ಬಂದಳು.
ದಿನಗಳೆದಂತೆ ಆಕೆಗೆ ಗಂಗಾ ಸಿಂಗ್ ಎಂಬಾತನೊಂದಿಗೆ ಪ್ರೇಮ ಅಂಕುರಿಸಿತು. ಆದರೆ ಗಂಗಾ ಕೂಡ ಮದ್ಯವ್ಯಸನಿಯಾಗಿದ್ದ, ಆತ ಪಿಂಕಿಯ ಮೇಲೆ ಹಲ್ಲೆ ಮಾಡಿ ಮದ್ಯ ತರಲು ಹಣಕ್ಕಾಗಿ ಒತ್ತಾಯಿಸುತ್ತಿದ್ದ. ಮತ್ತಷ್ಟು ನೊಂದ ಪಿಂಕಿಗೆ ಬಾಣಲೆಯಿಂದ ಬೆಂಕಿಗೆ ಬಿದ್ದಂತಾಗಿತ್ತು. ಇತ್ತೀಚೆಗೆ ತನ್ನ ತಾಯಿಗೆ ಈ ಅತಂತ್ರ ಸ್ಥಿತಿಯ ಕುರಿತು ಹೇಳಿಕೊಂಡಿದ್ದಾಳೆ. ಆಗಸ್ಟ್ 7 ರಂದು ಗಂಗಾ ಮತ್ತು ಆತನ ಹೆಂಡತಿ ಪಿಂಕಿ ಮನೆಗೆ ಬಂದಿದ್ದರು ಅವರಿಬ್ಬರೂ ತಂದ ಔಷಧವನ್ನು ಪಿಂಕಿಗೆ ಕುಡಿಸಿದ್ದಾರೆ.
ಔಷಧ ಸೇವಿಸಿದ ನಂತರ, ಪಿಂಕಿಗೆ ವಾಂತಿ ಶುರುವಾಗಿ ಆಕೆ ಶನಿವಾರ ಸಾವಿಗೀಡಾಗಿದ್ದಾಳೆ. ಮರಣೋತ್ತರ ಪರೀಕ್ಷೆ ನಡೆಸಿ ಶವವನ್ನು ಭಾನುವಾರ ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡು, ತನಿಖೆ ಆರಂಭಿಸಲಾಗಿದೆ ಎಂದು ಕೃಷ್ಣ ಗೇಟ್ ಪೊಲೀಸ್ ಠಾಣೆಯ ಠಾಣಾಧಿಕಾರಿ ಮಾಂಗೆ ರಾಮ್ ತಿಳಿಸಿದ್ದಾರೆ.