

ಸೂರತ್: ತಮ್ಮಿಬ್ಬರ ಖಾಸಗಿ ಕ್ಷಣಗಳ ದೃಶ್ಯವನ್ನು ಚಿತ್ರೀಕರಿಸಿ ಬ್ಲಾಕ್ ಮೇಲ್ ಮಾಡುತ್ತಿದ್ದಾನೆ ಎಂದು ಆರೋಪಿಸಿ 25 ವರ್ಷದ ಯುವತಿಯೋರ್ವಳು ವ್ಯಕ್ತಿಯೋರ್ವನ ವಿರುದ್ಧ ದೂರು ದಾಖಲಿಸಿದ್ದಾಳೆ.
ಆತ ಆಕೆಯ ತಂದೆಯ ಸಂಬಂಧಿ. ಹೆಸರು ಕರಣ್. ಸೌರಾಷ್ಟ್ರ ಮೂಲದ ಆಕೆ ಸೂರತ್‌ನ ಪುನಾದಲ್ಲಿ ವಾಸಿಸುತ್ತಿದ್ದಾಳೆ. ಸೀರೆಗಳಿಗೆ ಕುಸುರಿ ಕೆಲಸ ಮಾಡಿ ಜೀವನ ಸಾಗಿಸುತ್ತಿರುವ ಆಕೆಗೆ ಈ ಕಲೆಯನ್ನು ಅವನೇ ಕಲಿಸಿದ್ದು, ಇದಕ್ಕಾಗಿ ನಿತ್ಯ ಆಕೆಯ ಮನೆಗೆ ಭೇಟಿ ನೀಡುತ್ತಿದ್ದ.
ಆತ ಆಕೆಯ ತಂದೆಯ ಸೋದರ ಸಂಬಂಧಿಯಾದರೂ ತನ್ನನ್ನು ಚಿಕ್ಕಪ್ಪ ಎಂದು ಕರೆಯಬೇಡ ಎಂದಿದ್ದಾನೆ. ಒಂದು ವರ್ಷದ ಹಿಂದೆ ಅವನು ಅವಳಲ್ಲಿ ಪ್ರೇಮ ನಿವೇದನೆ ಮಾಡಿದ ನಂತರ ಇಬ್ಬರೂ ಸಂಬಂಧ ಬೆಳೆಸಿದ್ದಾರೆ. ಅದಾದ ಒಂದು ತಿಂಗಳ ನಂತರ, ಆತ ಇಬ್ಬರ ಖಾಸಗಿ ಕ್ಷಣಗಳ ವೀಡಿಯೊವನ್ನು ರೆಕಾರ್ಡ್ ಮಾಡಿದ್ದಾನೆ ಎಂದು ಆಕೆ ಆರೋಪಿಸಿದ್ದಾಳೆ.
ಮೂರು ತಿಂಗಳ ಹಿಂದೆ ಆಕೆಗೆ ಬೇರೆ ಕಡೆ ಹುಡುಗನನ್ನು ನೋಡಿ ಮದುವೆಮಾಡಲು ಕುಟುಂಬದವರು ನಿರ್ಧರಿಸಿದ್ದಾರೆ. ಕರಣ್ ಈ ಬಗ್ಗೆ ತಿಳಿದಾಗ, ಅವಳ ಮದುವೆಯ ನಂತರವೂ ಅವನೊಂದಿಗೆ ದೈಹಿಕ ಸಂಬಂಧವನ್ನು ಮುಂದುವರಿಸಲು ಆಕೆಗೆ ಕೇಳಿದ್ದಾನೆ. ಅದನ್ನು ಆಕೆ ನಿರಾಕರಿಸಿದ್ದಲ್ಲದೆ ಅವನೊಂದಿಗಿನ ಸಂಬಂಧವನ್ನು ನಿಲ್ಲಿಸಿದ್ದಾಳೆ. ಕರಣ್ ಕೋಪದಿಂದ ತಮ್ಮಿಬ್ಬರ ಖಾಸಗಿ ಕ್ಷಣಗಳ ವಿಡಿಯೋವನ್ನು ಆಕೆಯ ತಂದೆಗೆ ಕಳುಹಿಸಿದ್ದಷ್ಟೇ ಅಲ್ಲದೆ ತಮ್ಮ ಕುಟುಂಬಕ್ಕೆ, ಇತರ ಕೆಲವರಿಗೆ ಹಂಚಿಕೊಂಡಿದ್ದಾನೆ.
ಪುನಾ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಪ್ರಾರಂಭಿಸಿದ್ದಾರೆ. ಆರೋಪಿ ತನ್ನ ಊರಿಗೆ ಪರಾರಿಯಾಗಿದ್ದು, ಆತನನ್ನು ಬಂಧಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಪೊಲೀಸರು ತಿಳಿಸಿದ್ದಾರೆ.