ಗ್ರೀಷ್ಮಾಳನ್ನು ಇನ್ನು ಜೈಲಿನಲ್ಲೇ ಏಕೆ ಇಟ್ಟುಕೊಂಡಿದ್ದೀರಿ? ಆಕೆಯನ್ನು ಸ್ಥಳದಲ್ಲೇ ಕೊಂದು ಹಾಕಿ! Sharon raj and Greeshma

Sharon raj and Greeshma
Published on

Sharon raj and Greeshma : ಕೇರಳದಲ್ಲಿ ಭಾರೀ ಕೋಲಾಹಲ ಎಬ್ಬಿಸಿದ್ದ ಶರೋನ್ ರಾಜ್​ ಕೊಲೆ ಪ್ರಕರಣದ ಆರೋಪಿ ಗ್ರೀಷ್ಮಾ ಅವರಂತಹವರನ್ನು ಸ್ಥಳದಲ್ಲೇ ಸಾಯಿಸಬೇಕು ಎಂದು ಮಲಯಾಳಂ ಖ್ಯಾತ ನಟಿ ಪ್ರಿಯಾಂಕಾ ಹೇಳಿದ್ದಾರೆ.

ತಮ್ಮ ಸಿನಿಮಾ ಪ್ರಚಾರದ ಭಾಗವಾಗಿ ಯೂಟ್ಯೂಬ್ ಚಾನೆಲ್‌ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಶರೋನ್​ ರಾಜ್ ಪ್ರಕರಣದ ಬಗ್ಗೆ ಮಾತನಾಡಿದ ಪ್ರಿಯಾಂಕಾ, ನಮ್ಮ ದೇಶದ ಕಾನೂನುಗಳನ್ನು ಬದಲಾಯಿಸುವ ಅಗತ್ಯವಿದೆ ಎಂದು ಹೇಳಿದ್ದಾರೆ.

ಗ್ರೀಷ್ಮಾಳನ್ನು ಸ್ಥಳದಲ್ಲೇ ಕೊಲ್ಲಬೇಕು ಎಂದು ನಾನು ಹೇಳುತ್ತೇನೆ. ಆ ತಾಯಿಯ ಮಗ (ಶರೋನ್​ ರಾಜ್​) ಸತ್ತಿಲ್ಲವೇ? ಆ ತಾಯಿ ಇನ್ನೂ ದುಃಖಿಸುತ್ತಿಲ್ಲವೇ? ಈ ಪ್ರಕರಣವನ್ನು ಏಕೆ ಎಳೆದುಕೊಂಡು ಹೋಗಲಾಗುತ್ತಿದೆ? ಅವಳು ಹೈಕೋರ್ಟ್‌ನಿಂದ ಜಾಮೀನು ಪಡೆದು ಹಿಂತಿರುಗುತ್ತಾಳೆಯೇ? ಆಕೆಯನ್ನು ಸ್ಥಳದಲ್ಲೇ ಕೊಲ್ಲಬೇಕು. ಮೂರು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಮಾಡಿದ ವ್ಯಕ್ತಿಯನ್ನು ಕೂಡ ಸ್ಥಳದಲ್ಲೇ ಕೊಲ್ಲಬೇಕು. ಅವರನ್ನು ಜೈಲಿಗೆ ಹಾಕಿ, ಊಟ ಕೊಟ್ಟು ದಪ್ಪ ಮಾಡುವುದರಲ್ಲಿ ಅರ್ಥವಿಲ್ಲ. ಒಬ್ಬ ತಾಯಿ ತನ್ನ ಮಗನನ್ನು ಕಳೆದುಕೊಂಡಿದ್ದಾರೆ. ವಿಷ ಕೊಟ್ಟು ಕೊಲೆ ಮಾಡಿದ ಆಕೆಯನ್ನು ಸ್ಥಳದಲ್ಲೇ ಗಲ್ಲಿಗೇರಿಸದೆ ತಿಂಗಳುಗಟ್ಟಲೆ ಏಕೆ ಜೈಲಿನಲ್ಲಿ ಇಡಬೇಕು? ಕಾನೂನನ್ನು ಬದಲಾಯಿಸಬೇಕಲ್ಲವೇ? ಖಂಡಿತ ಬದಲಾಯಿಸಬೇಕು ಎಂದು ಪ್ರಿಯಾಂಕಾ ಹೇಳಿದರು.

ಇದೇ ಸಂದರ್ಭದಲ್ಲಿ ಶರೋನ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಗ್ರೀಷ್ಮಾ, ತನಗೆ ಮರಣದಂಡನೆ ವಿಧಿಸಿರುವ ನೆಯ್ಯಟ್ಟಿಂಕರ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸುವಂತೆ ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಸದ್ಯ ಗ್ರೀಷ್ಮಾ ಅಟ್ಟಕ್ಕುಳಂಗರ ಜೈಲಿನಲ್ಲಿದ್ದಾಳೆ.

ಏನಿದು ಗ್ರೀಷ್ಮಾ-ಶರೋನ್​ ಪ್ರಕರಣ?

ಕೇರಳದ ತಿರುವನಂತಪುರದಲ್ಲಿ ಅ.25ರಂದು ರೇಡಿಯೋಲಜಿ ವಿದ್ಯಾರ್ಥಿ ಶರೋನ್ ರಾಜ್ ಮೃತಪಟ್ಟಿದ್ದ. ಆತನ ಪ್ರೇಯಸಿ ಗ್ರೀಷ್ಮಾ ಮೇಲೆ ಅನುಮಾನ ಮೂಡಿ ಪೊಲೀಸರು ಆಕೆಯನ್ನು ವಶಕ್ಕೆ ಪಡೆದುಕೊಂಡಿದ್ದರು. ಸಾಕಷ್ಟು ವಿಚಾರಣೆ ಬಳಿಕ ಅ.31 ರಂದು ಗ್ರೀಷ್ಮಾ, ವಿಷವುಣಿಸಿ ಕೊಲೆ ಮಾಡಿದ್ದಾಗಿ ತಪ್ಪೊಪ್ಪಿಕೊಂಡಳು. ಅ. 14ರಂದು ಶರೋನ್​ ರಾಜ್​ನನ್ನು ತನ್ನ ಮನೆಗೆ ಕರೆಸಿಕೊಂಡ ಗ್ರೀಷ್ಮಾ, ಆಯುರ್ವೇದದ ಔಷಧಿಯಲ್ಲಿ ಕ್ರಿಮಿನಾಶಕವನ್ನು ಬೆರೆಸಿ ಕುಡಿಸಿದ್ದಳು. ಬಳಿಕ ವಿಪರೀತ ವಾಂತಿ ಮಾಡಿಕೊಂಡಿದ್ದ ರಾಜ್​, ತನ್ನ ಸ್ನೇಹಿತನೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದ. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಸಾವು-ಬದುಕಿನ ನಡುವೆ ಹೋರಾಡಿ ಅ.25 ರಂದು ಆತ ಮೃತಪಟ್ಟನು. ಸಂಚು ರೂಪಿಸಿ ಆತನನ್ನು ಗ್ರೀಷ್ಮಾ ಕೊಲೆ ಮಾಡಿದ್ದಾಳೆ.

ಪ್ರಯತ್ನಗಳು ವಿಫಲವಾದ್ದರಿಂದ ಕೊಲೆ

ಗ್ರೀಷ್ಮಾ 2022ರ ಮಾರ್ಚ್ 4ರಂದು ಯೋಧನೊಬ್ಬನ ಜತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಳು. ಬಳಿಕ ಶರೂನ್​ ಜತೆ ತನ್ನ ಸಂಬಂಧವನ್ನು ಕಡಿದುಕೊಂಡಿದ್ದಳು. ಆದರೆ, ಮೇ ತಿಂಗಳಲ್ಲಿ ಶರೂನ್​ ಮತ್ತೆ ಗ್ರೀಷ್ಮಾಗೆ ಹತ್ತಿರವಾಗಿದ್ದ.​ ಬಳಿಕ ನವೆಂಬರ್‌ನಲ್ಲಿ ಶರೋನ್ ಅವರ ಮನೆಯಲ್ಲಿ ಮತ್ತು ನಂತರ ವೆಟ್ಟುಕಾಡ್ ಚರ್ಚ್‌ನಲ್ಲಿ ಇಬ್ಬರು ವಿವಾಹವಾದರು. ಇದಾದ ಬಳಿಕ ಥ್ರಿಪ್ಪರಪುವಿನಲ್ಲಿ ರೂಮ್​ ಬುಕ್​ ಮಾಡಿ ಇಬ್ಬರು ಲೈಂಗಿಕ ಕ್ರಿಯೆ ನಡೆಸಿದರು. ಯೋಧನ ಜತೆ ತನ್ನ ಮದುವೆ ದಿನ ಹತ್ತಿರ ಬರುತ್ತಿದ್ದಂತೆ ಶರೂನ್​ನಿಂದ ದೂರಾಗಲು ಗ್ರೀಷ್ಮಾ ಬಯಸಿದಳು. ಲವ್​ ಬ್ರೇಕಪ್​ ಮಾಡಿಕೊಳ್ಳಲು ಸಾಕಷ್ಟು ಮನವೊಲಿಸಿದಳು. ಆದರೆ, ಅದಕ್ಕೆ ಆತ ಒಪ್ಪಲಿಲ್ಲ. ತನ್ನ ಜಾತಕದ ಪ್ರಕಾರ ಮೊದಲ ಪತಿ ಸಾಯುತ್ತಾನೆ ಎಂದು ಹೇಳುವ ಮೂಲಕ ರಾಜ್​ನನ್ನು ಬೆದರಿಸುವ ಪ್ರಯತ್ನ ಮಾಡಿದ್ದಳು. ಆದರೂ ಆತ ಆಕೆಯನ್ನು ಬಿಡಲು ತಯಾರಿರಲಿಲ್ಲ. ತನ್ನೆಲ್ಲ ಪ್ರಯತ್ನಗಳು ವಿಫಲವಾದ್ದರಿಂದ ಅಂತಿಮವಾಗಿ ಕೊಲೆಯನ್ನು ಆಯ್ಕೆ ಮಾಡಿಕೊಂಡಳು ಎಂದು ಪೊಲೀಸ್​ ಮೂಲಗಳು ತಿಳಿಸಿವೆ.

ಸೆಕ್ಸ್​ಗಾಗಿ ಒತ್ತಾಯ

2022ರ ಅಕ್ಟೋಬರ್​ 13ರಂದು ಇಬ್ಬರು 1 ಗಂಟೆ 7 ನಿಮಿಷಗಳ ಕಾಲ ಸೆಕ್ಸ್​ ಬಗ್ಗೆ ಮಾತನಾಡಿದ್ದರು. ಸೆಕ್ಸ್​ಗಾಗಿ ಒತ್ತಾಯ ಮಾಡುತ್ತಿದ್ದರಿಂದ ಅಕ್ಟೋಬರ್​ 14ರಂದು ನಾನು ಗ್ರೀಷ್ಮಾ ಮನೆಗೆ ಹೋದೆ ಎಂದು ಶರೂನ್​ ತನ್ನ ಸಂಬಂಧಿಕರ ಮುಂದೆ ಹೇಳಿಕೊಂಡಿದ್ದಾನೆ. ಆಯುರ್ವೇದಿಕ್​ ಔಷಧದಲ್ಲಿ ವಿಷ ಬೆರೆಸಿ ನೀಡಿ ಕೊಲೆ ಮಾಡಿದ್ದಾಳೆ. ಬಳಿಕ ಆತನೊಂದಿಗೆ ನಡೆಸಿದ್ದ ಚಾಟ್​ ಅನ್ನು ಗ್ರೀಷ್ಮಾ ಡಿಲೀಟ್​ ಮಾಡಿದ್ದಾಳೆ. ಅಳಿಸಿದ ಸಂದೇಶಗಳನ್ನು ಹಿಂಪಡೆಯಬಹುದೇ ಎಂದು ನೋಡಲು ಅವಳು ಹಲವಾರು ಬಾರಿ ಗೂಗಲ್ ಮತ್ತು ಯೂಟ್ಯೂಬ್‌ನಲ್ಲಿಯೂ ಹುಡುಕಾಡಿದ್ದಾಳೆ.

ಸಾಯುವ ಕೊನೆಯ ಕ್ಷಣದಲ್ಲಿ ಐಸಿಯು ಬೆಡ್​ನಲ್ಲಿದ್ದ ಶರೋನ್ ರಾಜ್, ನನಗೆ ವಿಷವನ್ನು ನೀಡಿ ವಂಚನೆ ಮಾಡಿದ್ದಾಳೆ ಎಂದು ಸಂಬಂಧಿಕರಿಗೆ ಹೇಳಿದ್ದಾನೆ. ಈ ಎಲ್ಲ ಅಂಶಗಳನ್ನು ಪೊಲೀಸರು ಚಾರ್ಜ್​ಶೀಟ್​ನಲ್ಲಿ ದಾಖಲಿಸಿದ್ದು, ನೆಯ್ಯಟ್ಟಿಂಕರ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು. ಜನವರಿ 20ರಂದು ಶಿಕ್ಷೆಯನ್ನು ಪ್ರಕಟಿಸಿದ ನ್ಯಾಯಾಯಲ ಗ್ರೀಷ್ಮಾಗೆ ಗಲ್ಲು ಶಿಕ್ಷೆಯನ್ನು ವಿಧಿಸಿದೆ. ಈ ಪ್ರಕರಣದ ಮತ್ತೊಬ್ಬ ಆರೋಪಿ ಗ್ರೀಷ್ಮಾಳ ಚಿಕ್ಕಪ್ಪ ನಿರ್ಮಲಕುಮಾರನ್ ನಾಯರ್​ಗೆ 3 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 2 ಲಕ್ಷ ರೂ. ದಂಡವನ್ನು ಕೋರ್ಟ್​ ವಿಧಿಸಿದೆ. ಎರಡನೇ ಆರೋಪಿಯಾಗಿರುವ ಗ್ರೀಷ್ಮಾಳ ತಾಯಿ ಸಿಂಧು ಅವರನ್ನು ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ನ್ಯಾಯಾಲಯ ಖುಲಾಸೆಗೊಳಿಸಿದೆ.

ನ್ಯಾಯಾಧೀಶ ಎ.ಎಂ. ಬಶೀರ್ ಅವರು ಈ ಮಹತ್ವದ ತೀರ್ಪುನ್ನು ಪ್ರಕಟಿಸಿದರು. ಇದೇ ಸಂದರ್ಭದಲ್ಲಿ ತನಿಖಾ ಅಧಿಕಾರಿಗಳನ್ನು ನ್ಯಾಯಾಲಯ ಶ್ಲಾಘಿಸಿತು. ಬದಲಾಗುತ್ತಿರುವ ಕಾಲಕ್ಕೆ ಅನುಗುಣವಾಗಿ ಪೊಲೀಸರು ತನಿಖಾ ವಿಧಾನಗಳನ್ನು ಬದಲಾಯಿಸಿದ್ದಾರೆ ಎಂದು ನ್ಯಾಯಾಲಯವು ಪ್ರಶಂಸಿಸಿತು. ತಿರುವನಂತಪುರಂ ಗ್ರಾಮೀಣ ಎಸ್‌ಪಿ ಡಿ.ಶಿಲ್ಪಾ ಅವರ ನೇತೃತ್ವದಲ್ಲಿ ರಚಿಸಲಾದ ವಿಶೇಷ ತನಿಖಾ ತಂಡವು ಪ್ರಕರಣದ ತನಿಖೆ ನಡೆಸಿತು. ಎಸ್‌ಪಿ ಎಂ.ಕೆ. ಜುಲ್ಫಿಕರ್, ಡಿವೈಎಸ್‌ಪಿಗಳಾದ ಕೆ.ಜೆ. ಜಾನ್ಸನ್, ವಿ.ಟಿ. ರಸಿತ್ ಮತ್ತು ಪಾರಸಲ ಇನ್ಸ್‌ಪೆಕ್ಟರ್ ಸಾಜಿ ತನಿಖೆಯ ನೇತೃತ್ವ ವಹಿಸಿದ್ದರು. ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ವಿ.ಎಸ್. ವಿನೀತ್ ಕುಮಾರ್, ಅಲ್ಫಾಸ್ ಮಥಥಿಲ್ ಮತ್ತು ನವನೀತ್ ಕುಮಾರ್ ಪ್ರಾಸಿಕ್ಯೂಷನ್ ಪರವಾಗಿ ಹಾಜರಾದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net