

ಪವಾಡಗಳಾಗಲು ಬಿಡಬೇಕಷ್ಟೆ. ಇತರರನ್ನು ಮೆಚ್ಚಿಸುವ ಸಲುವಾಗಿ ಏನನ್ನೋ ಸೃಷ್ಟಿಸುವುದು ಬೇಡ. ಇದು ಪ್ರೌಢತೆಯ ಲಕ್ಷಣವಲ್ಲ. ನಾವು ಯಾರನ್ನೂ ಮೆಚ್ಚಿಸಬೇಕಿಲ್ಲ. ಯಾರಾದರೂ ಹೀಗೆ ಮಾಡಲು ಪ್ರಯತ್ನಿಸಿದರೆ, ಅವರು ಅಂದುಕೊಂಡಷ್ಟು ಉನ್ನತ ಮಟ್ಟದಲ್ಲಿ ಅವರು ಇಲ್ಲ ಎಂದರ್ಥ. ಭಕ್ತಿಯ, ಪ್ರೇಮದ ಶಕ್ತಿ ಅಷ್ಟು ಉನ್ನತವಾಗಿದೆ. ಬೇರೆಯೆಲ್ಲವೂ ಅಭಿವ್ಯಕ್ತವಾಗಲು ಇರುವ ಸಾಧನಗಳು ಮಾತ್ರ. ಸತ್ಸಂಗದಲ್ಲಿ ಭಕ್ತಿಯಿಂದ ಕುಳಿತಾಗ ಪ್ರಾಣದ ಮಟ್ಟ ಹಾಗೆಯೇ ಹೆಚ್ಚುವುದನ್ನು ಕಾಣಬಹುದು.
ನಿಮಗೂ ಈ ರೀತಿಯ ಅನುಭವಗಳಾಗಿದ್ದರೆ ಅದನ್ನು ದಾಖಲಿಸಿ. ಈ ರೀತಿ ದಾಖಲಿಸುವ ಸಲುವಾಗಿ ಬರೆದಾಗ, ಇತರರಿಗೆ ಹೀಗೆ ಒಳ್ಳೆದಾಯಿತು ಎಂದು ಓದಿದಾಗ, ಓದುಗರು ಉತ್ಸಾಹಿತರಾಗುತ್ತಾರೆ. ಇಂದಿನ ಜಗತ್ತಿನಲ್ಲಿ ನಾವು ಸದಾ ಕೆಟ್ಟ ವಿಷಯಗಳನ್ನೇ ಕೇಳುತ್ತಿರುತ್ತೇವೆ. ಇಲ್ಲಿ ಕಳ್ಳತನವಾಯಿತು, ಅಲ್ಲಿ ಶೀಲಹರಣವಾಯಿತು, ಇಲ್ಲಿ ಮೋಸ ನಡೆಯಿತು ಎಂದೇ ಸದಾ ಕೇಳುತ್ತಿರುತ್ತೇವೆ. ಅಪರಾಧಗಳ ಬಗ್ಗೆಯೇ ಸದಾ ಕೇಳಿ ಕೇಳಿ ಜೀವನದಲ್ಲಿ ಆಸಕ್ತಿಯನ್ನು ಕಳೆದುಕೊಂಡುಬಿಡುತ್ತೇವೆ. ನಕಾರಾತ್ಮಕ ಕಥೆಗಳ ಬಗ್ಗೆ ನಿರಂತರವಾಗಿ ಕೇಳಿ ಅನೇಕ ಯುವಕರು ಜೀವನದಲ್ಲಿ ಆಸಕ್ತಿಯನ್ನು ಕಳೆದುಕೊಳ್ಳುತ್ತಾರೆ.
ಒಮ್ಮೆ ನಾವು ಕೆನಡದಲ್ಲಿದ್ದಾಗ ನಮ್ಮನ್ನು ಭೇಟಿ ಮಾಡಲು ಓರ್ವ ದಂಪತಿಗಳು ಬಂದಿದ್ದರು. ಅವರ ಹದಿನೆಂಟು ವರ್ಷದ ಮಗ ಆತ್ಮಹತ್ಯೆಗೆ ಶರಣಾಗಿದ್ದ. ಅತಿ ಬುದ್ಧಿವಂತನಾಗಿದ್ದ ಅವನು, ‘ಈ ಜಗತ್ತಿನಲ್ಲಿ ಬದುಕಲು ನನಗೆ ಇಷ್ಟವಿಲ್ಲ. ಪ್ರತಿನಿತ್ಯ ಅನೇಕ ಅಪರಾಧಗಳು ನಡೆಯುತ್ತಲೇ ಇರುತ್ತದೆ. ಇಂತಹ ಜಗತ್ತು ನನಗೆ ಸಾಕಾಗಿದೆ’ ಎಂದು ಬರೆದಿಟ್ಟು ನೇಣು ಹಾಕಿಕೊಂಡಿದ್ದ. ಅವನಿಗೆ ಈ ರೀತಿಯ ಮಾಹಿತಿ ಎಲ್ಲಿಂದ ಬಂದಿತು? ಕೇವಲ ಪತ್ರಿಕೆಗಳನ್ನು ಓದುವುದರಿಂದ, ವಾರ್ತಾ ಚಾನೆಲ್ಗಳನ್ನು ವೀಕ್ಷಿಸುವುದ
ರಿಂದ. ಸಕಾರಾತ್ಮಕವಾದ ಸುದ್ಧಿಯನ್ನು ನಾವೆಲ್ಲರೂ ಹರಡಬೇಕು. ಈ ಪ್ರಪಂಚವು ಪ್ರೇಮದಿಂದ ಆಳಲ್ಪಟ್ಟಿದೆ. ಆ ದಿವ್ಯವಾದ ಬೆಳಕು ನಿಮಗೆಂದೂ ಅನೇಕ ಕೊಡುಗೆಗಳನ್ನು ನೀಡುತ್ತಿರುತ್ತದೆ, ಅನೇಕ ಪವಾಡಗಳಾಗಲು ಸಾಧ್ಯ.ನೀವೆಲ್ಲರೂ ನಿಮ್ಮ ಸಕಾರಾತ್ಮಕವಾದ ಅನುಭವಗಳ ಬಗ್ಗೆ ಬರೆದು ಜೀವನದ ಆಶಾಕಿರಣವನ್ನು ಹೊರತನ್ನಿ. ಇದಕ್ಕಾಗಿ ಬಹಳ ಕಾತರದಿಂದ ಎದುರು ನೋಡುತ್ತಿರುವ ಅನೇಕರಿದ್ದಾರೆ. ಕಥೆಗಳನ್ನು ಸೃಷ್ಟಿಸಬೇಕಿಲ್ಲ. ಆ ಮೂಲಕ ಮತ್ತೊಂದು ವಿಪರೀತ ಸುಳ್ಳು ಕಥೆಗಳನ್ನು ಬರೆಯುವುದು ಸರಿಯಲ್ಲ. ನಮಗೆ ನಡೆದ ಒಳ್ಳೆಯದನ್ನು ಜನರ ಗಮನಕ್ಕೆ ತರಬೇಕು. ಸಣ್ಣದಾಗಿ ಬರೆಯಿರಿ.
ನೈಜವಾದ ಅನುಭವವನ್ನು ಹಂಚಿಕೊಂಡಾಗ ಇತರರ ಜೀವನದಲ್ಲಿ ಸಕಾರಾತ್ಮಕವಾದ ಪರಿವರ್ತನೆ ಉಂಟಾಗುತ್ತದೆ. ಹೀಗೆ, ಜನರು ಬೆಳಕಿನತ್ತ, ಜೀವನದತ್ತ, ಪ್ರೇಮದತ್ತ ನಡೆಯುವಂತೆ ನಾವು ಸ್ಪೂರ್ತಿ ನೀಡಬೇಕು. ಹಿಂದಿನ ಕಾಲಕ್ಕಿಂತಲೂ ಇದರ ತೀವ್ರ ಅವಶ್ಯಕತೆ ಇಂದಿನ ದಿನಗಳಲ್ಲಿ ಬಂದೊದಗಿದೆ.
ಆಳವಾದ ಪ್ರಾರ್ಥನೆಯಿಂದ ಸಾವಿರಾರು ಜನರು ಗುಣಮುಖರಾಗಿದ್ದಾರೆ. ನಮ್ಮ ಮನಸ್ಸಿನ ಸ್ಥಿತಿ ಹೇಗಾಗಿಬಿಟ್ಟಿದೆ ಎಂದರೆ, ನಾವು ಶಕ್ತಿ ವಲಯವನ್ನೇ ನಂಬುವುದಿಲ್ಲ. ನಾವು ನುಂಗುವ ರಾಸಾಯನಿಕ ಗುಳಿಗೆಗಳ ಮೇಲೆಯೇ ನಮಗೆ ಹೆಚ್ಚು ವಿಶ್ವಾಸ. ಹಾಗೆಂದ ಮಾತ್ರಕ್ಕೆ, ಶಕ್ತಿಯ ವಲಯವಿದೆ, ನಾನು ಯಾವ ಮಾತ್ರೆಯನ್ನೂ ಇನ್ನು ಮುಂದೆ ನುಂಗುವುದಿಲ್ಲ ಎಂಬುದಾಗಿ ಅರ್ಥೈಸಬೇಡಿ. ಮಾತ್ರೆಗಳನ್ನು, ವೈದ್ಯರ ಸಲಹೆಯನ್ನು ತಳ್ಳಿಹಾಕಬೇಡಿ. ಅದೇ ಸಮಯದಲ್ಲಿ ಪವಾಡಗಳಾಗಲು ಒಂದು ಅವಕಾಶವನ್ನು ಕೊಡಿ.