ಶರಾವತಿ ನೀರು ಬೆಂಗಳೂರಿಗೆ ಯೋಜನೆ ಅವೈಜ್ಞಾನಿಕ

sgr sharavati
ಶರಾವತಿ ನದಿ ನೀರನ್ನು ಬೆಂಗಳೂರಿಗೆ ಕೊಂಡೊಯ್ಯುವ ನಿರ್ಧಾರ ಖಂಡಿಸಿ ಹೋರಾಟ ಸಮಿತಿ ಪದಾಧಿಕಾರಿಗಳು ಎಸಿ ಯತೀಶ್ ಅವರಿಗೆ ಮನವಿ ಸಲ್ಲಿಸಿದರು. ಹರತಾಳು ಹಾಲಪ್ಪ, ಅಖಿಲೇಶ್ ಚಿಪ್ಳಿ, ದಿನೇಶ್, ರಮೇಶ್, ಪ್ರಫುಲ್ಲಾ ಮಧುಕರ್, ದೇವೇಂದ್ರಪ್ಪ, ಗಣೇಶಪ್ರಸಾದ್, ನಂದಾ ಗೊಜನೂರು, ಸರೋಜಾ ರಾಘವೇಂದ್ರ ಇತರರಿದ್ದರು.
Published on

ಸಾಗರ: ಶರಾವತಿ ನೀರನ್ನು ಬೆಂಗಳೂರಿಗೆ ಹರಿಸುವ ಯೋಜನೆ ಅವೈಜ್ಞಾನಿಕ. ಪಂಪ್ಡ್ ಸ್ಟೋರೇಜ್ ಎನ್ನುವ ಇನ್ನೊಂದು ಯೋಜನೆಯನ್ನು ಮುನ್ನೆಲೆಗೆ ತಂದಿದೆ. ಸರ್ಕಾರ ಸ್ಥಳೀಯರ ಅಭಿಪ್ರಾಯವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಆಗ್ರಹಿಸಿ ಶರಾವತಿ ನದಿ ಉಳಿಸಿ ಹೋರಾಟ ಸಮಿತಿ ಪದಾಧಿಕಾರಿಗಳು ಎಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಯ ಜನರು ಒಗ್ಗಟ್ಟಾಗಿ ಶರಾವತಿ ನದಿ ನೀರು ಬೆಂಗಳೂರಿಗೆ ಒಯ್ಯುವುದನ್ನು ಮತ್ತು ಶರಾವತಿ ಪಂಪ್ಡ್ೃ ಯೋಜನೆಯನ್ನು ತೀವ್ರವಾಗಿ ವಿರೋಧಿಸುತ್ತಿದ್ದೇವೆ. ಅವೈಜ್ಞಾನಿಕ ಹಾಗೂ ಕಾರ್ಯಸಾಧುವಲ್ಲದ ಯೋಜನೆ ಯಾವುದೇ ಕಾರಣಕ್ಕೂ ಕೈಗೆತ್ತಿಕೊಳ್ಳಬಾರದು. ನಮ್ಮ ತಾಳ್ಮೆ ಪರೀಕ್ಷಿಸಬೇಡಿ ಎಂದು ಪರಿಸರ ಹೋರಾಟಗಾರ ಅಖಿಲೇಶ್ ಚಿಪ್ಳಿ ಆಕ್ರೋಶ ವ್ಯಕ್ತಪಡಿಸಿದರು.
ಮಾಜಿ ಸಚಿವ ಹರತಾಳು ಹಾಲಪ್ಪ ಮಾತನಾಡಿ, ಜನಪ್ರತಿನಿಧಿಗಳು ಯೋಜನೆ ಬಗ್ಗೆ ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಮಾತನಾಡಬಾರದು. ಇದರಿಂದ ದೊಡ್ಡ ಪ್ರಮಾಣದಲ್ಲಿ ಪರಿಸರ ಹಾನಿಯಾಗುತ್ತದೆ. ಯೋಜನೆ ಕೈಬಿಡುವಂತೆ ಸರ್ಕಾರದ ಮೇಲೆ ಒತ್ತಡ ತರಲು ಜನಾಭಿಪ್ರಾಯ ರೂಪಿಸಬೇಕು ಎಂದು ತಿಳಿಸಿದರು.
ಶರಾವತಿ ಪಂಪ್ಡ್ೃ ಯೋಜನೆ ಹಣ ಹೊಡೆಯುವ ಇನ್ನೊಂದು ಯೋಜನೆ. ಸುಮಾರು ಎಂಟು ಸಾವಿರ ಕೋಟಿ ರೂ. ಯೋಜನೆ ಈಗಾಗಲೆ ಟೆಂಡರ್ ಹಂತಕ್ಕೆ ಬಂದಿದೆ. ಎರಡು ಸಾವಿರ ಮೆಗಾವಾಟ್ ವಿದ್ಯುತ್ ಉತ್ಪಾದಿಸಲು ಸುಮಾರು 2400 ಮೆ.ವಾ. ವಿದ್ಯುತ್ ಬಳಕೆ ಮಾಡಿಕೊಳ್ಳುವ ಅತ್ಯಂತ ಅವೈಜ್ಞಾನಿಕ ಯೋಜನೆ ಇದು. ಈ ಬಗ್ಗೆ ಸಿಎಂಗೆ ಮನವರಿಕೆ ಮಾಡಿಕೊಡಬೇಕು. ಸಂದರ್ಭ ಬಂದರೆ ಕಾನೂನು ಹೋರಾಟಕ್ಕೆ ಸಹ ಮುಂದಾಗಬೇಕು. ಇದಕ್ಕೆ ಎಲ್ಲ ರೀತಿಯ ಸಹಕಾರ ನೀಡುತ್ತೇನೆ ಎಂದರು.
ವಿದ್ಯುತ್ ಉತ್ಪಾದನೆಗೆ ಬೇರೆ ರೀತಿಯ ಪ್ರಯತ್ನಗಳಾಗಿವೆ. ಸೌರ ವಿದ್ಯುತ್ ಪ್ರಯತ್ನ ಕರ್ನಾಟಕದಲ್ಲಿ ಯಶಸ್ಸು ಕಂಡಿದೆ. ಅದನ್ನು ಬಿಟ್ಟು ಶರಾವತಿ ನೀರನ್ನು ಬೆಂಗಳೂರಿಗೆ ಕೊಂಡೊಯ್ಯುವ ಚಿಂತನೆ ಅವೈಜ್ಞಾನಿಕ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ವಿದ್ಯುಚ್ಛಕ್ತಿ ತಾಂತ್ರಿಕ ಸಲಹೆಗಾರ ಶಂಕರ ಶರ್ಮ ಮಾತನಾಡಿ, ಬೆಂಗಳೂರು ನಿವಾಸಿಗಳಿಗೆ ಮಳೆ ನೀರು ಸಂಗ್ರಹದಿಂದಲೇ ನಿರ್ವಹಣೆ ಮಾಡಬಹುದು. ಬೆಂಗಳೂರಿಗರೇ ನಮಗೆ ಬೇರೆ ಕಡೆಗಳಿಂದ ನೀರು ತರುವುದು ಬೇಡ ಎನ್ನುತ್ತಿದ್ದಾರೆ. ಆದರೆ ರಾಜ್ಯ ಸರ್ಕಾರಕ್ಕೆ ಏಕಿಷ್ಟು ಕಾಳಜಿ ಎಂಬುದೇ ತಿಳಿಯುತ್ತಿಲ್ಲ ಎಂದರು.
ಮುಖಂಡರಾದ ದಿನೇಶ್ ಶಿರವಾಳ, ರಮೇಶ್ ಕೆಳದಿ, ದೇವೇಂದ್ರಪ್ಪ, ಗಣೇಶ ಪ್ರಸಾದ್, ಎಂ.ವಿ.ಪ್ರತಿಭಾ, ಸರೋಜಾ ರಾಘವೇಂದ್ರ, ಅಕ್ಷರ, ಧನುಷ್, ರಮೇಶ್, ನಾರಾಯಣಮೂರ್ತಿ, ವಿನಾಯಕ ರಾವ್, ಮಂಜುನಾಥ ಜೇಡಿಕುಣಿ, ನಂದಾ ಗೊಜನೂರು, ಲತಾ ದಳವಾಯಿ, ಉಮಾಮಹೇಶ್ವರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net