ಶರಾವತಿ ಕಣಿವೆ ಮಾರಿಜಾತ್ರೋತ್ಸವ

marikambe (2)
ಮಾರಿಕಾಂಬೆ
Published on

ಕಾರ್ಗಲ್: ಸಾಗರ ತಾಲೂಕು ಭಾರಂಗಿ ಹೋಬಳಿಯ ಕೇಂದ್ರ ಪ್ರದೇಶ ಶರಾವತಿ ಕಣಿವೆಯ ಗ್ರಾಮ ದೇವತೆ ಮಾರಿಕಾಂಬಾ ದೇವಿ ಜಾತ್ರೋತ್ಸವ ಮೇ 12ರಿಂದ 15ರವರೆಗೆ ನೆರವೇರಲಿದೆ ಎಂದು ಸಮಿತಿ ಅಧ್ಯಕ್ಷ ಸಿ.ಸುಬ್ರಮಣಿ ಮಾಹಿತಿ ನೀಡಿದರು.

ದೇವಾಲಯದ ಆವರಣದಲ್ಲಿ ಜಾತ್ರೋತ್ಸವದ ಸಿದ್ಧತೆ ಪರಿಶೀಲಿಸಿ ಮಾತನಾಡಿದ ಅವರು, 12ರಂದು ಗಣ ಹೋಮ, ವಾಸ್ತು ಹೋಮ, ಚಂಡಿಕಾ ಹವನ ನೆರವೇರಲಿದೆ. ಮಧ್ಯಾಹ್ನ ಭಕ್ತರಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿದೆ. ಸಂಜೆ ಸ್ಥಳೀಯ ಪ್ರತಿಭೆಗಳಿಂದ ನೃತ್ಯ ಕಾರ್ಯಕ್ರಮ ನಡೆಯಲಿದೆ ಎಂದರು.

13ರಂದು ಧ್ವಜಾರೋಹಣದೊಂದಿಗೆ ಭಕ್ತರು ಶರಾವತಿ ನದಿ ತೀರಕ್ಕೆ ಶಕ್ತಿ ಕರಗ ತರಲು ತೆರಳುವರು. ಶರಾವತಿ ನದಿಯಲ್ಲಿ ಶಕ್ತಿ ಕರಗಕ್ಕೆ ಮಾರಿಕಾಂಬಾ ದೇವಿಯನ್ನು ಆವಾಹನೆ ಮಾಡಿ, ದೇವಾಲಯಕ್ಕೆ ದೇವಿಯನ್ನು ಕರೆ ತರಲಾಗುವುದು. ದೇವಿಯ ಆಗಮನದೊಂದಿಗೆ ಭಕ್ತರಿಗೆ ಅನ್ನ ಸಂತರ್ಪಣೆ ಮಾಡಲಾಗುವುದು. ಸಂಜೆ 4ಕ್ಕೆ ಹರಕೆ ಹೊತ್ತ ಭಕ್ತರು 12 ಅಡಿ ಉದ್ದದ ತ್ರಿಶೂಲವನ್ನು ಬೆನ್ನಿಗೆ ಮತ್ತು ಬಾಯಿಗೆ ಚುಚ್ಚಿಕೊಂಡು, ತಲೆಯ ಮೇಲೆ ಅಗ್ನಿಕುಂಡದ ಮಡಕೆಯನ್ನು ಹೊತ್ತುಕೊಂಡು, 20 ಅಡಿ ಎತ್ತರದ ಕ್ರೇನ್ ಮೇಲೆ ಸಾಗುವ ಸಿಡಿ ಉತ್ಸವ ನೆರವೇರಲಿದೆ. ಸಂಜೆ ಭದ್ರಾವತಿ ಬ್ರದರ್ಸ್‌ ತಂಡದಿಂದ ರಸ ಮಂಜರಿ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಹೇಳಿದರು.

14ರಂದು ಬೆಳಗ್ಗೆ ಸಾಂಪ್ರದಾಯಿಕ ಬಲಿ ಪೂಜೆ, ಸಂಜೆ 4ಕ್ಕೆ ಹರಕೆ ಹೊತ್ತ ಭಕ್ತರು 21 ಅಡಿ ಉದ್ದದ ಅಗ್ನಿ ಕುಂಡ ಹಾಯುವ ಕಾರ್ಯಕ್ರಮವಿದೆ. ಸಂಜೆ 7ಕ್ಕೆ ಕಾರ್ಗಲ್‌ನ ಮುಖ್ಯ ಬೀದಿಗಳಲ್ಲಿ ಮಾರಿಕಾಂಬಾ ದೇವಿಯ ಉತ್ಸವ ಮೂರ್ತಿ ಮೆರವಣಿಗೆ ನಡೆಯಲಿದೆ. 15ರಂದು ಪ್ರಾತಃಕಾಲದ ಪೂಜೆಯೊಂದಿಗೆ ದೇವಿಯನ್ನು ಸ್ವಸ್ಥಾನ ಶರಾವತಿ ನದಿಗೆ ಹೊತ್ತೊಯ್ದು ಶಕ್ತಿ ಕರಗವನ್ನು ವಿಸರ್ಜಿಸಲಾಗುವುದು ಎಂದು ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net