ರಸ್ತೆ ಅಭಿವೃದ್ಧಿಗೆ ಅಗತ್ಯ ಕ್ರಮ

13 nrp 1dasara
ಎನ್.ಆರ್.ಪುರದ ಮೆಣಸೂರು ಬೈಪಾಸ್ ಸರ್ಕಲ್‌ನಲ್ಲಿ ನಡೆದ ಶರನ್ನವರಾತ್ರಿ ಮಹೋತ್ಸವದಲ್ಲಿ ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿದರು. ಪ್ರಶಾಂತ್ ಎಲ್. ಶೆಟ್ಟಿ, ಪಿ.ಆರ್.ಸದಾಶಿವ, ದಿವಾಕರ, ವಾಸಪ್ಪಗೌಡ, ಬಿಳಾಲ್‌ಮನೆ ಉಪೇಂದ್ರ, ವಿಶ್ವನಾಥ್, ಅಭಿನವ ಗಿರಿರಾಜ್ ಇದ್ದರು.
Published on

ಎನ್.ಆರ್.ಪುರ: ಈ ಬಾರಿ ಅತಿವೃಷ್ಟಿಯಿಂದ ಕ್ಷೇತ್ರದಲ್ಲಿ ಸಾಕಷ್ಟು ಹಾನಿ ಸಂಭವಿಸಿದ್ದು ಸರ್ಕಾರ ಪರಿಹಾರಧನ ನೀಡುತ್ತಿದೆ. ಅಲ್ಲಲ್ಲಿ ರಸ್ತೆಗಳಲ್ಲಿ ಗುಂಡಿಗಳು ಬಿದ್ದಿದ್ದು ಮಳೆ ಕಡಿಮೆಯಾದ ಕೂಡಲೇ ಕ್ಷೇತ್ರದ ಎಲ್ಲ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮದ ಅಧ್ಯಕ್ಷ ಟಿ.ಡಿ.ರಾಜೇಗೌಡ ಹೇಳಿದರು.
ಶನಿವಾರ ರಾತ್ರಿ ಮೆಣಸೂರು ಬೈಪಾಸ್ ಸರ್ಕಲ್‌ನಲ್ಲಿ ನಡೆದ ಶರನ್ನವರಾತ್ರಿ ವಿಸರ್ಜನಾ ಸಮಾರಂಭದಲ್ಲಿ ಮಾತನಾಡಿದ ಅವರು, ಕ್ಷೇತ್ರದಲ್ಲಿ ಒಂಬತ್ತು ದಿನಗಳ ಕಾಲ ಶೃಂಗೇರಿ, ಶಕಟಪುರ, ಹರಿಹರಪುರ, ಬಾಳೆಹೊನ್ನೂರು, ಬಸ್ತಿಮಠ, ಎನ್.ಆರ್.ಪುರದಲ್ಲಿ ಶರನ್ನವರಾತ್ರಿ ಉತ್ಸವ ಜರುಗಿದೆ. ದೇಶದಲ್ಲಿ ಶಿಷ್ಟರನ್ನು ರಕ್ಷಿಸಿ, ದುಷ್ಟರನ್ನು ಸಂಹಾರ ಮಾಡಿ, ಮನುಕುಲವನ್ನು ಉಳಿಸಿದ ಇತಿಹಾಸವಿದೆ. ಶೃಂಗೇರಿ ಪ್ರಾಕೃತಿಕ, ಸಾಂಸ್ಕೃತಿಕ ಹಾಗೂ ಧಾರ್ಮಿಕವಾಗಿ ದೇಶ ವಿದೇಶದಲ್ಲೂ ಗಮನಸೆಳೆದಿದೆ ಎಂದರು.
ಪಪಂ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತ್ ಎಲ್. ಶೆಟ್ಟಿ ಮಾತನಾಡಿ, ಶರನ್ನವರಾತ್ರಿ ಮಹೋತ್ಸವ ಅಂಗವಾಗಿ ಸಭೆಗೆ ರಸ್ತೆ ಮಧ್ಯೆ ವೇದಿಕೆ ನಿರ್ಮಾಣ ಮಾಡಲಾಗುತ್ತಿದೆ. ಶಾಸಕರು ಭದ್ರಾ ಹಿನ್ನೀರಿನ ತಟದಲ್ಲಿ ಗೋಡೆ ನಿರ್ಮಿಸಿ ಜಾಗವನ್ನು ಸಮತಟ್ಟು ಮಾಡಿಸಲು ಗಮನಹರಿಸಿದಲ್ಲಿ ಮುಂದಿನ ದಿನಗಳಲ್ಲಿ ನವರಾತ್ರಿ ಉತ್ಸವವನ್ನು ಅಲ್ಲಿಯೇ ಮಾಡಲು ಅನುಕೂಲವಾಗುತ್ತದೆ. ಭದ್ರಾ ಹಿನ್ನೀರಿನ ಈ ಸುಂದರ ಪ್ರದೇಶವು ಪ್ರವಾಸೋದ್ಯಮ ಸ್ಥಳವಾಗಿ ಮಾರ್ಪಾಡಾಗುತ್ತದೆ ಎಂದರು.
ತಾಲೂಕು ಬಿಜೆಪಿ ಅಧ್ಯಕ್ಷ ಅರುಣಕುಮಾರ್ ಮಾತನಾಡಿ, ಈ ಸ್ಥಳವನ್ನು ಪ್ರವಾಸೋದ್ಯಮ ಪ್ರೇಕ್ಷಣೀಯ ಸ್ಥಳವನ್ನಾಗಿ ಅಭಿವೃದ್ಧಿಪಡಿಸಲು ಗಮನಹರಿಸಬೇಕು ಎಂದು ಹೇಳಿದರು.
ಕೆಪಿಸಿಸಿ ಸದಸ್ಯ ಪಿ.ಆರ್.ಸದಾಶಿವ ಮಾತನಾಡಿ, ಭಕ್ತಾದಿಗಳು ಮತ್ತು ಸಾರ್ವಜನಿಕರ ಸಹಕಾರದಿಂದ ತೆಪ್ಪೋತ್ಸವ ಅದ್ದೂರಿಯಾಗಿ ನಡೆದಿದೆ. ಶಾಸಕ ಟಿ.ಡಿ.ರಾಜೇಗೌಡ ಹಾಗೂ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಶ್ರೀನಿವಾಸ್ ಅವರು ಊರಿನ ಎಲ್ಲ ದೇವಸ್ಥಾನ, ಚರ್ಚ್, ಮಸೀದಿಗಳ ಜೀರ್ಣೋದ್ಧಾರಕ್ಕಾಗಿ ಬಹಳಷ್ಟು ಶ್ರಮಿಸಿದ್ದಾರೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net