

ದಾವಣಗೆರೆ: ರಾಜ್ಯದಲ್ಲಿ ವಿದ್ಯುತ್ ದರ ಏರಿಕೆ ಮಾಡುವ ಮೂಲಕ ಕೈಗಾರಿಕೆಗಳಿಗೆ ತೊಂದರೆ ನೀಡಲಾಗುತ್ತಿದೆ ಎಂದು ತಮ್ಮ ಸರ್ಕಾರದ ವಿರುದ್ಧ ಹಿರಿಯ ಕಾಂಗ್ರೆಸ್(Congress) ಶಾಸಕ ಡಾ.ಶಾಮನೂರು ಶಿವಶಂಕರಪ್ಪ(Shamanuru Shivashankarappa) ಕಿಡಿಕಾರಿದ್ದಾರೆ.
ರಾಜ್ಯ ಸರ್ಕಾರ ಘೋಷಿಸಿದ ಉಚಿತ ವಿದ್ಯುತ್ ಯೋಜನೆ(Free Elecrticity Scheme) ಸೇರಿದಂತೆ ಇತರೆ ಗ್ಯಾರಂಟಿ ಯೋಜನೆಗಳ ಬಗ್ಗೆ ಮಾತನಾಡಿದ ಶಾಮನೂರು ಶಿವಶಂಕರಪ್ಪ, "ವಿದ್ಯುತ್ ದರ ಏರಿಕೆಯಿಂದ ಕೃಷಿ ಆಧರಿತ ಅಕ್ಕಿ ಗಿರಣಿಗಳಿಂದ ಹಿಡಿದು ಎಲ್ಲ ರೀತಿಯ ಕೈಗಾರಿಕಾ ಘಟಕಗಳಿಗೆ ತೀವ್ರ ಹೊಡೆತ ಬೀಳಲಿದೆ" ಎಂದು ಹೇಳಿದರು.
"ಗ್ಯಾರಂಟಿ ಯೋಜನೆಯಡಿ ಘೋಷಿಸಿದಂತೆ ಎಲ್ಲರಿಗೂ 200 ಯೂನಿಟ್ ಉಚಿತ ವಿದ್ಯುತ್ ನೀಡುತ್ತಿರುವುದಕ್ಕೆ ಅತೀವ ಸಂತಸವಿದೆ. ಇದನ್ನು ಮುಂದುವರಿಸಬೇಕು. ಆದರೆ ವಿದ್ಯುತ್ ದರ ಹೆಚ್ಚಿಸಿ ಕೈಗಾರಿಕೆಗಳಿಗೆ ಬರೆ ಎಳೆಯಬಾರದು. ಕೆಎಸ್ಆರ್ಟಿಸಿ ಬಿಜೆಪಿ ಸರ್ಕಾರ ಇದ್ದಾಗಲೇ ಬೆಲೆ ಏರಿಕೆಗೆ ಪ್ರಸ್ತಾವ ಸಲ್ಲಿಸಿತ್ತು ನಿಜ. ಆದ್ರೆ, ಈಗ ನಮ್ಮವರು ಈ ಪ್ರಸ್ತಾವವನ್ನು ತಿರಸ್ಕರಿಸಬೇಕಿತ್ತು" ಎಂದು ಹೇಳಿದರು.
"ವಿದ್ಯುತ್ ದರ ಏರಿಕೆಯಿಂದ ಕೈಗಾರಿಕೆಗಳಿಗೆ ಹೊಡೆತ ಬೀಳುತ್ತದೆ. ಒಂದು ಕೈಯಲ್ಲಿ ಸೌಲಭ್ಯ ಕೊಟ್ಟು, ಇನ್ನೊಂದು ಕೈಯಲ್ಲಿ ಕಸಿದುಕೊಡಂತೆ ಆಗಬಾರದು. ಗ್ಯಾರಂಟಿ ಯೋಜನೆಗಳ ಜಾರಿಗೆ ಷರತ್ತುಗಳನ್ನು ವಿಧಿಸಬಾರದು. ಬಸ್‌ನಲ್ಲಿ ಪ್ರಯಾಣಿಸುವ ಮಹಿಳೆಯರಿಗೆ ಗುರುತಿನ ಚೀಟಿ ಕೇಳಬಾರದು. ಸೀರೆ ಉಟ್ಟುಕೊಂಡು ಬಂದರೆ ಮಹಿಳೆಯರು ಎಂದು ಗೊತ್ತಾಗುತ್ತದೆ. ಅದಕ್ಕೇಕೆ ಷರತ್ತು ಹಾಕಬೇಕು" ಎಂದು ರಾಜ್ಯ ಸರ್ಕಾರವನ್ನು ನೇರವಾಗಿ ಪ್ರಶ್ನಿಸಿದರು.