ಸದ್ದಿಲದ್ದಂತೆ ಒಟಿಟಿಗೆ ಲಗ್ಗೆಯಿಟ್ಟ ನಟಿ ಶಕೀಲಾ ಬಯೋಪಿಕ್ ಸಿನಿಮಾ!​ ಯಾವುದರಲ್ಲಿ ಪ್ರಸಾರ? ಇಲ್ಲಿದೆ ವಿವರ | Shakeela

ವಿಜಯವಾಣಿ - 2025-02-27T190821.799
Published on

Shakeela Movie OTT: ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡ ಚಿತ್ರಗಳಲ್ಲಿ ಅಭಿನಯಿಸಿರುವ ನಟಿ ಶಕೀಲಾ ಅವರ ಜೀವನ ಚರಿತ್ರೆಯನ್ನು ಸಿನಿಮಾ ಮೂಲಕ ಜನರ ಮುಂದಿಡಲಾಗಿತ್ತು. ಅಂದು ಚಿತ್ರಮಂದಿರಗಳಲ್ಲಿ ತೆರೆಕಂಡಿದ್ದ ಈ ಚಿತ್ರವು ಈಗ ಒಟಿಟಿಗೆ ಎಂಟ್ರಿಕೊಟ್ಟಿದೆ.

ಶಕೀಲಾ ಅವರ ಬದುಕು, ಸಿನಿವೃತ್ತಿಯನ್ನು ಆಧರಿಸಿದ ಬಯೋಪಿಕ್​ ಚಿತ್ರವನ್ನು 2020ರ ಡಿಸೆಂಬರ್​ 25ರಂದು ಬಾಲಿವುಡ್​ ಅಂಗಳದಲ್ಲಿ ನಿರ್ದೇಶಕ ಇಂದ್ರಜೀತ್ ಲಂಕೇಶ್ ರಿಲೀಸ್ ಮಾಡಿದ್ದರು. ಈ ಚಿತ್ರದಲ್ಲಿ ನಟಿ ರಿಚಾ ಚೆಡ್ಡಾ ಶಕೀಲಾ ಅವರ ಪಾತ್ರದಲ್ಲಿ ಮಿಂಚಿದ್ದಾರೆ. ಪಂಕಜ್ ತ್ರಿಪಾಠಿ, ಟಾಲಿವುಡ್ ನಟಿ ಎಸ್ತರ್, ರಾಜೀವ್ ಪಿಳ್ಳೈ, ಶಿವ ರಾಣಾ, ಕಾಜೋಲ್ ಚುಗ್, ಸಂದೀಪ್ ಸೇರಿದಂತೆ ಮುಂತಾದವರ ತಾರಾಗಣ ಚಿತ್ರದಲ್ಲಿದೆ.

ನಟಿಯ ಜೀವನ ಆಧರಿತ ಸಿನಿಮಾ ಹಿಂದಿ, ತಮಿಳು, ತೆಲುಗು ಮತ್ತು ಕನ್ನಡ ಭಾಷೆಗಳಲ್ಲಿ ಬಿಡುಗಡೆಯಾಯಿತು. ಆದಾಗ್ಯೂ, ಶಕೀಲಾ ಅವರ ಚಿತ್ರವು ಪ್ರೇಕ್ಷಕರಿಂದ ನಿರೀಕ್ಷಿಸಿದ ಮೆಚ್ಚುಗೆಯನ್ನು ಪಡೆಯಲಿಲ್ಲ. ಇದು ಹೆಚ್ಚಾಗಿ ವಯಸ್ಕರ ವಿಷಯವನ್ನು ಒಳಗೊಂಡಿದ್ದರಿಂದ, ಪ್ರೇಕ್ಷಕರಲ್ಲಿ ಒಂದು ನಿರ್ದಿಷ್ಟ ವರ್ಗ ಮಾತ್ರ ಚಿತ್ರವನ್ನು ಹೆಚ್ಚಾಗಿ ಮೆಚ್ಚಿಕೊಂಡಿತು. ಇನ್ನೂ ಶಕೀಲಾ ಮೇಲಿನ ಕ್ರೇಜ್‌ನಿಂದಾಗಿ ಚಿತ್ರ ಬಿಡುಗಡೆಯಾದ ತಕ್ಷಣವೇ ಕೆಲವರು ಪೈರಸಿ ಮಾಡಿ, ಯೂಟ್ಯೂಬ್‌ನಲ್ಲಿ ಹರಿಬಿಟ್ಟಿದ್ದರು.

ಇದೀಗ ಐದು ವರ್ಷಗಳ ಬಳಿಕ ಈ ಚಿತ್ರವು ಸ್ಟ್ರೀಮಿಂಗ್‌ಗೆ ಲಭ್ಯವಿದ್ದು, ಯಾವುದೇ ಪೋಸ್ಟರ್​ ಇಲ್ಲದೆ ಅಮೆಜಾನ್ ಪ್ರೈಮ್‌ನಲ್ಲಿ ಪ್ರಸಾರವಾಗುತ್ತಿದೆ. ಆದಾಗ್ಯೂ, ಪ್ರಸ್ತುತ ಹಿಂದಿ ಆವೃತ್ತಿಯಲ್ಲಿ ಮಾತ್ರ ಸಿನಿಮಾ ಬಿಡುಗಡೆಯಾಗಿದೆ. ಮುಂಬರುವ ದಿನಗಳಲ್ಲಿ ಚಿತ್ರವು ತೆಲುಗು ಆವೃತ್ತಿಯಲ್ಲಿಯೂ ಸ್ಟ್ರೀಮಿಂಗ್‌ ಆಗುವ ಸಾಧ್ಯತೆಗಳಿವೆ ಎಂದು ವರದಿ ತಿಳಿಸಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net