ಕೋಲಾರ ಜಿಲ್ಲೆಯ ಜನರ ಬಹುದಿನಗಳ ಬೇಡಿಕೆಯಾದ ಮೆಡಿಕಲ್ ಕಾಲೇಜು, ವರ್ತುಲ ರಸ್ತೆಗೆ ಬಜೆಟ್‌ನಲ್ಲಿ ಹಣ ಘೋಷಣೆ ಮಾಡುವ ಸಾಧ್ಯತೆ! / ನಗರಸಭೆಯನ್ನು ಪಾಲಿಕೆ ಮಾಡಲು ಅಧಿಕಾರಿಗಳಿಗೆ ಮುಖ್ಯಮಂತ್ರಿಗಳ ಸೂಚನೆ

Published on

ವಿಜಯವಾಣಿ ಸುದ್ದಿಜಾಲ ಕೋಲಾರ

ಎನ್.ಮುನಿವೆಂಕಟೇಗೌಡ

ಕೋಲಾರ ಜಿಲ್ಲೆಯ ಜನರ ಬಹುದಿನಗಳ ಬೇಡಿಕೆಯಾದ ಮೆಡಿಕಲ್ ಕಾಲೇಜು, ವರ್ತುಲ ರಸ್ತೆಗೆ ಮಾ.೭ ರಂದು ನಡೆಯುವ ಬಜೆಟ್‌ನಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಹಣ ಮೀಸಲಿಡುವುದು ಬಹುತೇಕ ಖಚಿತಗೊಂಡಿದ್ದು, ಉಳಿದ ಬೇಡಿಕೆಗಳಿಗೂ ಸ್ಪಂದಿಸುವ ಸಾಧ್ಯತೆ ಇದ್ದು, ಅಂತು ಇಂತು ೨ ಬೇಡಿಕೆಗಳನ್ನು ಈಡೇರಿಸುವ ತೀರ್ಮಾನಕ್ಕೆ ಸರ್ಕಾರ ಬದ್ಧವಾಗಿದೆ ಎನ್ನಲಾಗಿದೆ.

ಕೋಲಾರ ಶಾಸಕ ಕೊತ್ತೂರು ಮಂಜುನಾಥ್, ಎಂ.ಎಲ್.ಸಿ.ಗಳಾದ ಅನಿಲ್‌ಕುಮಾರ್ ಮತ್ತು ನಸೀರ್ ಅಹ್ಮದ್ ಕೋಲಾರಕ್ಕೆ ಮೆಡಿಕಲ್ ಕಾಲೇಜು, ಇಂಜಿನೀಯರಿAಗ್ ಕಾಲೇಜು, ವರ್ತುಲ ರಸ್ತೆ, ಎಪಿಸಿಎಂಗೆ ಜಾಗ, ಎತ್ತಿನಹೊಳೆ ಯೋಜನೆಗೆ ಹಣ ಬಿಡುಗಡೆ ಹಾಗೂ ಕೋಲಾರ ನಗರಸಭೆಯನ್ನು ಮಹಾನಗರ ಪಾಲಿಕೆ ಸೇರಿಸುವ ಸೇರಿದಂತೆ ಕೆಲವು ಬೇಡಿಕೆಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರ ಮೂಲಕ ಮುಖ್ಯಮಂತ್ರಿಗಳ ಬಳಿ ಒತ್ತಾಯಿಸಿದ್ದರು.

ಜಿಲ್ಲೆಯ ಮತ್ತು ಶಾಸಕರೊಂದಿಗೆ ಚರ್ಚಿಸಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ ಸದ್ಯಕ್ಕೆ ಕೋಲಾರಕ್ಕೆ ವರ್ತುಲ ರಸ್ತೆ, ಮೆಡಿಕಲ್ ಕಾಲೇಜಿಗೆ ಬಜೆಟ್‌ನಲ್ಲಿ ಹಣ ಘೋಷಣೆ ಮಾಡುವುದಾಗಿ ಒಪ್ಪಿಗೆ ನೀಡಿರುವುದಾಗಿ ತಿಳಿದುಬಂದಿದೆ. ಕೋಲಾರ ನಗರಸಭೆಯನ್ನು ಮಹಾನಗರ ಪಾಲಿಕೆಯಾಗಿ ಮಾಡಲು ಅಧಿಕಾರಿಗಳೊಂದಿಗೆ ಚರ್ಚಿಸಲು ಸೂಚನೆ ನೀಡಿರುವುದಾಗಿ ತಿಳಿಸಿದ್ದಾರೆ ಎನ್ನಲಾಗಿದೆ.

ಎತ್ತಿನಹೊಳೆ ಯೋಜನೆ ಕಾಮಗಾರಿ ಸಕಲೇಶ್ವರದ ಬಳಿ ಪೂರ್ಣಗೊಂಡಿದ್ದು, ಪೈಪ್‌ಲೈನ್ ಕಾಮಗಾರಿ ಮುಂದುವರೆದಿದ್ದು, ಬೈರಗುಂಡಲಹಳ್ಳಿ ಬಳಿ ನೀರಿನ ಶೇಖರಣೆ ಟ್ಯಾಂಕ್ ನಿರ್ಮಾಣಕ್ಕೆ ಭೂಮಿ ಸ್ವಾಧೀನ ಸೇರಿದಂತೆ ಉಳಿಕೆ ಕಾಮಗಾರಿ ಮುಂದುವರೆಯಲು ಹಣದ ಅವಶ್ಯಕತೆ ಇದ್ದು, ಉಳಿದ ಕಾಮಗಾರಿ ಪೂರ್ಣಗೊಳಿಸಲು ಹಣ ಬಿಡುಗಡೆಗೆ ಕೋಲಾರ ಜಿಲ್ಲೆಯ ಶಾಸಕರು ಮನವಿ ಮಾಡಿದ್ದರು. ಮನವಿಗೆ ಸ್ಪಂದಿಸಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ ಎತ್ತಿನಹೊಳೆ ಕಾಮಗಾರಿ ಪೂರ್ಣಗೊಳಿಸಲು ೫ ಸಾವಿರ ಕೋಟಿ ಬಿಡುಗಡೆಗೊಳಿಸಲು ಒಪ್ಪಿಗೆ ನೀಡಿದ್ದಾರೆ ಎನ್ನಲಾಗಿದೆ.

ಮೆಡಿಕಲ್ ಕಾಲೇಜಿಗೆ ಬಜೆಟ್‌ನಲ್ಲಿ ಹಣ ಬಿಡುಗಡೆಗೊಳಿಸಿದರೆ ಕೋಲಾರ ನಗರದ ಎಸ್.ಎನ್.ಆರ್.ಆಸ್ಪತ್ರೆಯ ಮುಂಭಾಗ ಇರುವ ಪ್ರವಾಸಿ ಮಂದಿರದ ೪ ಎಕೆರೆ ಮತ್ತು ರೇಷ್ಮೆ ಇಲಾಖೆಗೆ ಸೇರಿರುವ ೪ ಎಕೆರೆ ಜಾಗ ಸೇರಿ ೮ ಎಕೆರೆ ಜಾಗದಲ್ಲಿ ಮೆಡಿಕಲ್ ಕಾಲೇಜು ನಿರ್ಮಣ ಮಾಡಲು ಚಿಂತನೆ ನಡೆದಿದೆ. ಈಗಾಗಲೇ ಸ್ಥಳ ಪರಿಶೀಲನೆ ಕಾರ್ಯ ನಡೆದಿದ್ದು, ಪ್ರವಾಸಿ ಮಂದಿರಕ್ಕೆ ಟೇಕಲ್ ರಸ್ತೆಯ ಛತ್ರಕೋಡಿಹಳ್ಳಿ ಬಳಿಯ ೮ ಎಕರೆ ಜಮೀನು ಗುರ್ತಿಸಲಾಗಿದೆ.

ರೇಷ್ಮೆ ಇಲಾಖೆಯನ್ನು ಬೇರೆಡೆಗೆ ವರ್ಗಾವಣೆ ಮಾಡಲು ಜಿಲ್ಲಾಡಳಿತ ಸ್ಥಳ ಗುರ್ತಿಸುವ ಕೆಲಸ ನಡೆಯುತ್ತಿದ್ದು, ಮೆಡಿಕಲ್ ಕಾಲೇಜಿಗೆ ಹಣ ಬಿಡುಗಡೆಯಾದರೆ ರೇಷ್ಮೆ ಇಲಾಖೆಯನ್ನು ಬೇರೆಡೆಗೆ ವರ್ಗಾವಣೆ ಮಾಡಲು ಜಿಲ್ಲಾಡಳಿತ ತೀರ್ಮಾನಿಸಿದೆ.

ಕೋಟ್

ಕೋಲಾರ ನಗರ ಅಭಿವೃದ್ಧಿ ಸೇರಿದಂತೆ ಜಿಲ್ಲೆಯ ಅಭಿವೃದ್ಧಿಗೆ ಮಾ.೭ ರಂದು ನಡೆಯುವ ಬಜೆಟ್‌ನಲ್ಲಿ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಲಾಗಿದ್ದು, ಇದರಲ್ಲಿ ಕೆಲವು ಬೇಡಿಕೆಗಳನ್ನು ಈಡೇರಿಸುವುದಾಗಿ ಮುಖ್ಯಮಂತ್ರಿಗಳು ಒಪ್ಪಿಗೆ ನೀಡಿದ್ದಾರೆ. ಮೆಡಿಕಲ್ ಕಾಲೇಜು, ವರ್ತುಲ ರಸ್ತೆ ನಿರ್ಮಾಣಕ್ಕಂತು ಬಜೆಟ್‌ನಲ್ಲಿ ಹಣ ಘೋಷಣೆ ಮಾಡಲಿದ್ದಾರೆ. ಉಳಿದ ಬೇಡಿಕೆಗಳನ್ನು ಈಡೇರಿಸುವ ಸಾಧ್ಯತೆ ಇದೆ. ಮುಖ್ಯಮಂತ್ರಿಗಳ ಮೇಲೆ ನಮಗೆ ನಂಬಿಕೆಯು ಇದೆ. ಕೋಲಾರ ನಗರ ಸೇರಿದಂತೆ ಜಿಲ್ಲೆಯ ಅಭಿವೃದ್ದಿಯ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ಹಾಗೂ ಎಲ್ಲಾ ಶಾಸಕರು ಮುಖ್ಯಮಂತ್ರಿಗಳ ಮೇಲೆ ಒತ್ತಡ ತರಲಾಗಿದೆ.

-ಶಾಸಕ ಕೊತ್ತೂರು ಮಂಜುನಾಥ್

ಕೋಟ್

ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್ ರವರು ನಮ್ಮ ಜಿಲ್ಲೆಯವರೇ ಆದ ಕಾರಣ ಜಿಲ್ಲೆಯ ಅಭಿವೃದ್ದಿ ಸೇರಿದಂತೆ ಕೋಲಾರ ನಗರದ ಅಭಿವೃದ್ಧಿ ಬಜೆಟ್‌ನಲ್ಲಿ ಹಣ ಬಿಡುಗಡೆ ಮಾಡಲು ಮುಖ್ಯಮಂತ್ರಿಗಳ ಒತ್ತಡ ತರಲಾಗಿದೆ. ಹಲವು ಬೇಡಿಕೆಗಳನ್ನು ಈಡೇರಿಸಲು ಮುಖ್ಯಮಂತ್ರಿಗಳು ಒಪ್ಪಿಗೆ ನೀಡಿದ್ದಾರೆ ಎನ್ನಲಾಗಿದೆ. ವಿಶೇಷವಾಗಿ ಎತ್ತಿನ ಹೊಳೆ ಯೋಜನೆಯ ನೀರು ಕೋಲಾರಕ್ಕೆ ತರುವುದು ಮುಖ್ಯವಾಗಿದೆ. ಎಪಿಎಂಸಿಗೆ ಜಾಗ ಸೇರಿದಂತೆ ಎಪಿಎಂಸಿ ಮಾರುಕಟ್ಟೆ ಅಭಿವೃದ್ಧಿಪಡಿಸಲು ಬಜೆಟ್‌ನಲ್ಲಿ ಸೇರಿಸಿ ಹಣ ಬಿಡುಗಡೆ ಸೇರಿದಂತೆ ಕೋಲಾರ ನಗರವನ್ನು ನಗರಪಾಲಿಕೆ ಮಾಡಲು ಬಜೆಟ್‌ನಲ್ಲಿ ಹಣ ಘೋಷಣೆ ಮಾಡಲು ಒತ್ತಾಯಪಡಿಸಲಾಗಿದೆ.

-ಎಂಎಲ್‌ಸಿ ಅನಿಲ್‌ಕುಮಾರ್

ಚಿತ್ರ ೨೭ ಕೆ.ಎಲ್.ಆರ್. ೦೩ : ಕೋಲಾರ ಮೆಡಿಕಲ್ ಕಾಲೇಜು ನಿರ್ಮಾಣ ಮಾಡುವ ಪ್ರವಾಸಿ ಮಂದಿರ ಜಾಗ

ಚಿತ್ರ ೨೭ ಕೆ.ಎಲ್.ಆರ್. ೦೩ಎ : ಕೋಲಾರ ವರ್ತುಲ ರಸ್ತೆಯ ನಿರ್ಮಾಣಕ್ಕೆ ಗಡಿ ಗುರ್ತಿಸಿರುವುದು.

ಚಿತ್ರ ೨೭ ಕೆ.ಎಲ್.ಆರ್. ೦೩ಬಿ : ಶಾಸಕ ಕೊತ್ತೂರು ಮಂಜುನಾಥ್ ರವರ ಭಾವಚಿತ್ರ

ಚಿತ್ರ ೨೭ ಕೆ.ಎಲ್.ಆರ್. ೦೩ಸಿ : ಎಂಎಲ್‌ಸಿ ಅನಿಲ್‌ಕುಮಾರ್ ರವರ ಭಾವಚಿತ್ರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net