

Shah Rukh Khan: ಆ.01 ರಂದು 71ನೇ ರಾಷ್ಟ್ರೀಯ ಪ್ರಶಸ್ತಿಗಳನ್ನು ಪ್ರಕಟಿಸಿದ ಕೇಂದ್ರ ಸರ್ಕಾರ, 2023ರಲ್ಲಿ ಬಿಡುಗಡೆಯಾದ ಹಲವು ಸಿನಿಮಾಗಳಿಗೆ ಪ್ರಶಸ್ತಿಗಳನ್ನು ಘೋಷಿಸಿತು. ಇದರೊಂದಿಗೆ ವಿವಿಧ ವಿಭಾಗಗಳಿಗೂ ಅವಾರ್ಡ್ಗಳನ್ನು ಕೊಟ್ಟು ಗೌರವಿಸಲಾಯಿತು. ಈ ಪೈಕಿ ಬಾಲಿವುಡ್ ಹಿರಿಯ ನಟ ಶಾರುಖ್ ಖಾನ್ ಮತ್ತು ವಿಕ್ರಾಂತ್ ಮ್ಯಾಸ್ಸೆ ಒಟ್ಟಿಗೆ ಅತ್ಯುತ್ತಮ ನಟ ರಾಷ್ಟ್ರೀಯ ಪ್ರಶಸ್ತಿಯನ್ನು ಸ್ವೀಕರಿಸಿದರು.
'ಜವಾನ್' ಚಿತ್ರಕ್ಕಾಗಿ ಶಾರುಖ್ ಗೆದ್ದರೆ, 12 ಫೇಲ್ ಸಿನಿಮಾಗಾಗಿ ವಿಕ್ರಾಂತ್ ಗೆದ್ದಿದ್ದಾರೆ. ಬಾಲಿವುಡ್ನ ಸ್ಟಾರ್ ಹಾಗೂ ಹಿರಿಯ ನಟ ಶಾರುಖ್ ಖಾನ್ಗೆ ಅಪಾರ ಅಭಿಮಾನಿಗಳ ಬಳಗವಿದ್ದು, ಹಲವಾರು ಸೂಪರ್ಹಿಟ್ ಸಿನಿಮಾಗಳನ್ನು ಹಿಂದಿ ಚಿತ್ರೋದ್ಯಮಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ಅತ್ಯುತ್ತಮ ನಟ ರಾಷ್ಟ್ರಪ್ರಶಸ್ತಿ ಅವರ ಮೊದಲ ರಾಷ್ಟ್ರೀಯ ಪ್ರಶಸ್ತಿ ಎಂಬುದು ಸದ್ಯ ಹಲವರ ಹುಬ್ಬೇರಿಸಿದೆ. 33 ವರ್ಷಗಳ ಸಿನಿಪಯಣದಲ್ಲಿ ನೂರಾರು ಸಿನಿಮಾಗಳನ್ನು ಮಾಡಿರುವ ನಟನಿಗೆ, ಫಿಲ್ಮ್ಫೇರ್ ಹಿಡಿದು ನಾನಾ ರೀತಿಯ ಪ್ರಶಸ್ತಿಗಳು ಒಲಿದು ಬಂದಿವೆ. ಆದರೆ, ಇಲ್ಲಿಯವರೆಗೆ ರಾಷ್ಟ್ರೀಯ ಪ್ರಶಸ್ತಿ ಸಿಕ್ಕಿರಲಿಲ್ಲ.
ಯಾವುದೇ ಹಿನ್ನೆಲೆ ಇಲ್ಲದೆ, ಸಣ್ಣ ಪಾತ್ರಗಳು ಮತ್ತು ಧಾರಾವಾಹಿಗಳಲ್ಲಿ ಅಭಿನಯಿಸುವ ಮೂಲಕ ಸ್ಟಾರ್ ಹೀರೋ ಆಗಿ ಬೆಳೆದ ಶಾರುಖ್, 90ರ ದಶಕದಲ್ಲಿ ಬಾಲಿವುಡ್ ಚಿತ್ರರಂಗವನ್ನು ಆಳಿದ ನಟ ಎಂದರೆ ಖಂಡಿತ ತಪ್ಪಾಗಲಾರದು. ತಮ್ಮ ಚಿತ್ರಗಳಿಂದ ಪ್ರೇಕ್ಷಕರ ಹೃದಯ ಗೆದ್ದ ಕಿಂಗ್ ಖಾನ್, ಇಂದು ಕೋಟ್ಯಂತರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ.
ಅನೇಕ ಸೂಪರ್ ಹಿಟ್ ಮತ್ತು ಉತ್ತಮ ಚಿತ್ರಗಳಿಂದ ಪ್ರಭಾವಿತರಾದ ಶಾರುಖ್ ಖಾನ್ ಅನೇಕ ಪ್ರಶಸ್ತಿಗಳನ್ನು ಬಾಚಿಕೊಂಡಿದ್ದಾರೆ. ಅತ್ಯುತ್ತಮ ನಟ ವಿಭಾಗಗಳಲ್ಲಿ ಹಲವಾರು ಪ್ರಶಸ್ತಿಗಳನ್ನು ಸಹ ಗೆದ್ದಿದ್ದಾರೆ. 12 ಬಾರಿ ಅತ್ಯುತ್ತಮ ನಟನಾಗಿ ಫಿಲ್ಮ್ಫೇರ್ ಅವಾರ್ಡ್ ಪಡೆದಿದ್ದಾರೆ. 'ದಿಲ್ವಾಲೆ ದುಲ್ಹನಿಯಾ ಲೆ ಜಾಯೆಂಗೆ', 'ಸ್ವದೇಶ್', 'ವೀರ್ ಜ಼ಾರಾ', 'ಚೆಕ್ ದೇ ಇಂಡಿಯಾ', 'ದೇವದಾಸ್', 'ಡಾನ್', 'ಮೈ ನೇಮ್ ಈಸ್ ಖಾನ್' ಸೇರಿ ಮುಂತಾದ ಚಿತ್ರಗಳಲ್ಲಿ ಶಾರುಖ್ ಖಾನ್ ತಮ್ಮ ಅಭಿನಯದಿಂದಲೇ ಚಿತ್ರಪ್ರೇಮಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಇಂತಹ ಸೂಪರ್ಹಿಟ್ ಚಿತ್ರಗಳಿಗೆ ಸಿಗದ ರಾಷ್ಟ್ರೀಯ ಪ್ರಶಸ್ತಿ ಈಗ ವಾಣಿಜ್ಯ ಚಿತ್ರ 'ಜವಾನ್' ಲಭಿಸಿರುವುದು ಗಮನಾರ್ಹ. ಜವಾನ್ ಚಿತ್ರದಲ್ಲಿ ಶಾರುಖ್ ಖಾನ್ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಭಾರತೀಯ ಬಾಕ್ಸ್ ಆಫೀಸ್ನಲ್ಲಿ ಭಾರೀ ಲಾಭವನ್ನು ಗಳಿಸಿತು. ಇದು ಚಿತ್ರತಂಡಕ್ಕೆ ಉತ್ತಮ ಆದಾಯವನ್ನೇ ತಂದುಕೊಟ್ಟಿತು. ಸಿನಿಪ್ರಿಯರು ಕೂಡ ಜವಾನ್ ಚಿತ್ರಕ್ಕೆ ಪಾಸಿಟಿವ್ ಪ್ರತಿಕ್ರಿಯೆಗಳನ್ನು ನೀಡಿದ್ದರು. ಇಷ್ಟು ವರ್ಷಗಳಲ್ಲಿ ನಟನಿಗೆ ಸಿಗದ ರಾಷ್ಟ್ರೀಯ ಅತ್ಯುತ್ತಮ ನಟ ಪ್ರಶಸ್ತಿ ಈಗ ಒಲಿದು ಬಂದಿರುವುದಕ್ಕೆ ಅಭಿಮಾನಿಗಳು ಅತೀವ ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಬಾಲಿವುಡ್ ದಿಗ್ಗಜರು, ಗಣ್ಯರಿಂದಲೂ ನಟನಿಗೆ ಅಭಿನಂದನೆಗಳ ಸುರಿಮಳೆಯೇ ಹರಿದುಬಂದಿವೆ,(ಏಜೆನ್ಸೀಸ್).