ಹುರಿಯತ್ ಕಾನ್ಫರೆನ್ಸ್​ಗೆ ಗೀಲಾನಿ ರಾಜೀನಾಮೆ ಹಿಂದಿದೆ ಕುತೂಹಲಕಾರಿ ಒಳಸುಳಿ

geelani
Published on

ನವದೆಹಲಿ: ಜಮ್ಮು-ಕಾಶ್ಮೀರ ಮತ್ತು ಸುತ್ತಮುತ್ತ ಕಳೆದ ಒಂದೆರಡು ವರ್ಷದಿಂದೀಚೆಗೆ ನಡೆಯುತ್ತಿರುವ ವಿದ್ಯಮಾನಗಳು ಬಹಳ ಕುತೂಹಲಕರವಾದುದು. ಮೇ ತಿಂಗಳಲ್ಲಿ ಉಗ್ರ ಸೈಯದ್ ಸಲಾಲುದ್ದೀನ್ ಮನೆ ಮೇಲೆ ಹ್ಯಾಂಡ್ ಗ್ರೆನೇಡ್ ದಾಳಿ ನಡೆದ ಬೆನ್ನಿಗೆ ಇತ್ತ ಜಮ್ಮು-ಕಾಶ್ಮೀರದಲ್ಲಿ ಹುರಿಯತ್ ಕಾನ್ಫರೆನ್ಸ್​ನ ನಾಯಕ ಗೀಲಾನಿ ತಾನು ರಾಜೀನಾಮೆ ನೀಡುತ್ತಿರುವುದಾಗಿ ಘೋಷಿಸಿದರು. ಹುರಿಯತ್ ಕಾನ್ಫರೆನ್ಸ್​ನ ಮುಖ್ಯಭೂಮಿಕೆಯಲ್ಲಿ ಇರಲಾರೆ ಎಂದರು.

ಗೀಲಾನಿ ಅವರ ಈ ನಡೆಯ ಹಿಂದಿನ ಒಳಸುಳಿ ಕುತೂಹಲಕರವಾದುದು. ಮೂಲಗಳ ಪ್ರಕಾರ, 1990ರ ದಶಕದಲ್ಲಿ ಪಾಕ್ ಆಕ್ರಮಿತ ಕಾಶ್ಮೀರಕ್ಕೆ ತೆರಳಿದ ಉಗ್ರರೆಲ್ಲರೂ ಈಗ ಭಯೋತ್ಪಾದಕರಾಗಿ ಉಳಿದಿಲ್ಲ. ಅವರೀಗ ರಾಜಕೀಯದ ಮುಂಚೂಣಿಗೆ ಬರುವ ತವಕದಲ್ಲಿದ್ದಾರೆ. ಅವರೆಲ್ಲರೂ ತಮ್ಮದೇ ಆದ ಕನಸುಗಳೊಂದಗೆ ಸ್ವಹಿತಾಸಕ್ತಿಯಲ್ಲಿ ಕೆಲಸ ಮಾಡಲಾರಂಭಿಸಿದ್ದಾರೆ. ಹೀಗಾಗಿ ಸಂಘಟನೆಯಲ್ಲೂ ತಮ್ಮ ಸ್ಥಾನಗಳನ್ನು ತೊರೆಯುತ್ತಿಲ್ಲ. ಹುರಿಯತ್ ಕಾನ್ಫರೆನ್ಸ್​ನ ರಾಜಕೀಯಕ್ಕೆ ಹಿಜ್ಬುಲ್​ನ ಮಾಜಿ ಕಮಾಂಡರ್ ಒಬ್ಬನನ್ನು ತರವುದಕ್ಕೆ ಗೀಲಾನಿ ಪ್ರಯತ್ನಿಸಿದ್ದರು. ಆದರೆ, ಹುರಿಯತ್​ನ ಪ್ರಮುಖ ಸ್ಥಾನಗಳಲ್ಲಿ ವಿರಾಜಮಾನರಾಗಿರುವ ಹಿರಿತಲೆಗಳು ಸ್ಥಾನ ತ್ಯಜಿಸಲು ಒಪ್ಪುತ್ತಿಲ್ಲ. ಯುವಕರನ್ನು ಮುಂದೆ ಬರಲು ಬಿಡುತ್ತಿಲ್ಲ.

ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಪ್ರತ್ಯೇಕತಾವಾದಿ ನಾಯಕರದ್ದೂ ಅದೇ ಕಥೆ. ಅನೇಕರು ಐಷಾರಾಮಿ ಜೀವನ ಸಾಗಿಸುತ್ತಿದ್ದಾರೆ. ಇದನ್ನು ಯುವಕರು ವಿರೋಧಿಸುತ್ತಿದ್ದಾರೆ. ಈ ನಾಯಕರ ವಿರುದ್ಧ ಗೀಲಾನಿಗೆ ಅಲ್ಲಿನ ಯುವಕರು ದೂರು ನೀಡಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸತೊಡಗಿದ್ದರು. ಈ ಎಲ್ಲ ಒತ್ತಡಗಳ ಪರಿಣಾಮ ಗೀಲಾನಿ ಮೇಲಾಗಿದೆ. ಹೀಗಾಗಿಯೇ ಅವರು ರಾಜೀನಾಮೆ ಕೊಟ್ಟಿದ್ದಾರೆ ಎನ್ನುತ್ತಿವೆ ಮೂಲಗಳು. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net