ರಾಜಿ ಆದ ಮಾತ್ರಕ್ಕೆ ಲೈಂಗಿಕ ಕಿರುಕುಳ ದೂರು ರದ್ದಾಗದು; ಸುಪ್ರೀಂಕೋರ್ಟ್ ತೀರ್ಪು

Law and Order
Published on

ನವದೆಹಲಿ: ದೂರುದಾರರು ಮತ್ತು ಆರೋಪಿಗಳು ರಾಜಿ ಮಾಡಿಕೊಂಡ ಮಾತ್ರಕ್ಕೆ ಲೈಂಗಿಕ ಕಿರುಕುಳ ಪ್ರಕರಣ ರದ್ದುಗೊಳಿಸಲಾಗುವುದಿಲ್ಲ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದೆ. ಈ ಮೂಲಕ ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸಿದ್ದ ಶಿಕ್ಷಕನಿಗೆ ರಿಲೀಫ್ ನೀಡಿದ್ದ ರಾಜಸ್ಥಾನ ಹೈಕೋರ್ಟ್ ತೀರ್ಪನ್ನು ಸುಪ್ರೀಂಕೋರ್ಟ್ ತಳ್ಳಿಹಾಕಿದೆ ಮತ್ತು ಆರೋಪಿ ವಿರುದ್ಧ ಕಾನೂನು ಕ್ರಮ ಜರುಗಿಸಲು ಆದೇಶಿಸಿದೆ. ಇದು ರಾಜಸ್ಥಾನದ ಗಂಗಾಪುರ ನಗರದಲ್ಲಿ 2022ರ ಪ್ರಕರಣಕ್ಕೆ ಸಂಬಂಧಿಸಿದೆ. ಲೈಂಗಿಕ ಕಿರುಕುಳ ನೀಡಿದ್ದರ ಬಗ್ಗೆ ಅಪ್ರಾಪ್ತ ದಲಿತ ಬಾಲಕಿಯೊಬ್ಬಳು ಸರ್ಕಾರಿ ಶಾಲೆಯ ಶಿಕ್ಷಕನ ಮೇಲೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಳು. ಪ್ರಕರಣದಲ್ಲಿ ಪೋಕ್ಸೊ ಕಾಯ್ದೆ ಮತ್ತು ಎಸ್​ಸಿ/ಎಸ್​ಟಿ (ದೌರ್ಜನ್ಯ ತಡೆ) ಕಾಯ್ದೆಯನ್ನೂ ಅಳವಡಿಸಲಾಗಿತ್ತು.

ಅಪ್ರಾಪ್ತೆಯ ಹೇಳಿಕೆಯನ್ನೂ ದಾಖಲಿಸಿಕೊಳ್ಳಲಾಗಿದೆ. ಆದರೆ, ಆರೋಪಿ ಶಿಕ್ಷಕ ವಿಮಲ್ ಕುಮಾರ್ ಗುಪ್ತಾ, ಸ್ಟಾಂಪ್ ಪೇಪರ್​ನಲ್ಲಿ ಬಾಲಕಿಯ ಕುಟುಂಬದಿಂದ ಹೇಳಿಕೆ ಪಡೆದಿದ್ದ. ತಪ್ಪು ತಿಳುವಳಿಕೆಯಿಂದ ಪೊಲೀಸರಲ್ಲಿ ದೂರು ದಾಖಲಿಸಲಾಗಿದೆ ಮತ್ತು ಶಿಕ್ಷಕರ ವಿರುದ್ಧ ಯಾವುದೇ ಕ್ರಮ ಬೇಡ ಎಂದು ಹೇಳಿಕೆಯಲ್ಲಿ ತಿಳಿಸಲಾಗಿತ್ತು. ಇದನ್ನು ಸ್ವೀಕರಿಸಿದ್ದ ಪೊಲೀಸರು ವರದಿ ಸಲ್ಲಿಸಿದ್ದರು. ಆದರೆ ಕೆಳ ನ್ಯಾಯಾಲಯ ಈ ಹೇಳಿಕೆಯನ್ನು ತಿರಸ್ಕರಿಸಿತು. ನಂತರ ಆರೋಪಿ ಹೈಕೋರ್ಟ್ ಮೆಟ್ಟಿಲೇರಿದ್ದ. ಎಫ್​ಐಆರ್ ರದ್ದುಗೊಳಿಸುವಂತೆಯೂ ಹೈಕೋರ್ಟ್ ಆದೇಶಿಸಿತ್ತು. ಸಾಮಾಜಿಕ ಕಾರ್ಯಕರ್ತ ರಾಮ್ ಲಾಲ್ ಬೈರ್ವಾ ಅವರು ಹೈಕೋರ್ಟ್ ತೀರ್ಪನ್ನು ಸುಪ್ರೀಂಕೋರ್ಟ್​ನಲ್ಲಿ ಪ್ರಶ್ನಿಸಿದ್ದರು. ನ್ಯಾಯಮೂರ್ತಿ ಸಿ.ಟಿ.ರವಿಕುಮಾರ್ ಮತ್ತು ನ್ಯಾಯಮೂರ್ತಿ ಪಿ.ವಿ.ಸಂಜಯ್ ಕುಮಾರ್ ಅವರಿದ್ದ ಪೀಠವು ಹೈಕೋರ್ಟ್ ತೀರ್ಪನ್ನು ತಳ್ಳಿಹಾಕಿದ್ದು, ಆರೋಪಿ ಶಿಕ್ಷಕನ ವಿರುದ್ಧದ ತನಿಖೆಗೆ ಆದೇಶಿಸಿದೆ.

ಸರ್ಕಾರದ ಅನುಮತಿ ಅಗತ್ಯ: ಸಿಆರ್​ಪಿಸಿ ಸೆಕ್ಷನ್ 197(1) ಅಡಿ ಸರ್ಕಾರಿ ಅಧಿಕಾರಿಗಳನ್ನು ವಿಚಾರಣೆಗೆ ಒಳಪಡಿಸಲು ಸರ್ಕಾರದ ಪೂರ್ವಾನುಮತಿ ಅಗತ್ಯವಾಗಿದ್ದು, ಇದೇ ನಿಯಮ ಹಣಕಾಸು ಅವ್ಯವಹಾರ ತಡೆ ಕಾಯ್ದೆ (ಪಿಎಂಎಲ್​ಎ) ಅಡಿ ದಾಖಲಾಗುವ ಪ್ರಕರಣಗಳಿಗೂ ಅನ್ವಯಿಸುತ್ತದೆ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದೆ.

ನೇಮಕಾತಿ ಪ್ರಕ್ರಿಯೆಯಲ್ಲಿ ಮಧ್ಯಂತರ ಬದಲಾವಣೆ ಇಲ್ಲ: ಕಾರ್ಯವಿಧಾನದಲ್ಲಿ ಬದಲಾವಣೆಗೆ ಅವಕಾಶ ಇಲ್ಲದ ಹೊರತು ಸರ್ಕಾರಿ ಉದ್ಯೋಗಗಳ ನೇಮಕಾತಿಗಳಲ್ಲಿ ಮಧ್ಯಂತರ ಬದಲಾವಣೆ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದೆ. ಸಿಜೆಐ ನೇತೃತ್ವದ ಐವರು ನ್ಯಾಯಾಧೀಶರ ಸಂವಿಧಾನ ಪೀಠ, ನೇಮಕಾತಿ ಪ್ರಕ್ರಿಯೆಯು ಅರ್ಜಿಗಳನ್ನು ಕರೆಯುವ ಜಾಹೀರಾತು ನೀಡುವಿಕೆಯಿಂದ ಪ್ರಾರಂಭಗೊಂಡು, ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ಮೂಲಕ ಕೊನೆಗೊಳ್ಳುತ್ತದೆ. ನೇಮಕಾತಿ ಪ್ರಕ್ರಿಯೆಯ ಪ್ರಾರಂಭದಲ್ಲಿ ಸೂಚಿಸಲಾದ ಆಯ್ಕೆ ಪಟ್ಟಿಯಲ್ಲಿ ಸ್ಥಾನ ಪಡೆಯುವ ಅರ್ಹತೆಯ ಮಾನದಂಡಗಳನ್ನು ನೇಮಕಾತಿ ಪ್ರಕ್ರಿಯೆಯ ಮಧ್ಯದಲ್ಲಿ ಬದಲಾಯಿಸಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ನಿಯಮಬಾಹಿರ ಧ್ವಂಸಕ್ಕೆ ಸುಪ್ರೀಂ ಕೆಂಡ: ರಸ್ತೆ ಅಗಲೀಕರಣ ಮತ್ತು ಅತಿಕ್ರಮ ತೆರವು ಕಾರ್ಯಾಚರಣೆ ವೇಳೆ ಪಾಲಿಸಬೇಕಾದ ನಿಯಮಗಳ ಬಗ್ಗೆ ಎಲ್ಲಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶನ ಜಾರಿ ಮಾಡಿದ ವೇಳೆ ಸುಪ್ರೀಂಕೋರ್ಟ್ ಉತ್ತರ ಪ್ರದೇಶ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದು, 2019ರಲ್ಲಿ ನಿಯಮಬಾಹಿರ ಧ್ವಂಸ ಕಾರ್ಯಾಚರಣೆ ಕೈಗೊಂಡಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದೆ. ರಸ್ತೆ ಅಗಲೀಕರಣ ಯೋಜನೆ ಹೆಸರಲ್ಲಿ ವ್ಯಕ್ತಿಯೊಬ್ಬನ ಮನೆ ನೆಲಸಮಗೊಳಿಸಿದ್ದಕ್ಕೆ 25 ಲಕ್ಷ ರೂ. ಪರಿಹಾರ ನೀಡಬೇಕೆಂದು ಉತ್ತರಪ್ರದೇಶ ಸರ್ಕಾರಕ್ಕೆ ಆದೇಶಿಸಿದ ಸಿಜೆಐ ನೇತೃತ್ವದ ನ್ಯಾಯಪೀಠ, ಬುಲ್ಡೋಜರ್​ಗಳಿಂದ ರಾತ್ರೋರಾತ್ರಿ ಮನಸೋಇಚ್ಛೆ ಧ್ವಂಸ ಕಾರ್ಯಾಚರಣೆ ನಡೆಸಲು ಸಾಧ್ಯವಿಲ್ಲ. ಮನೆ ಖಾಲಿ ಮಾಡಲೂ ಸಮಯ ನೀಡುವುದಿಲ್ಲ. ಹೀಗಿದ್ದಾಗ ಮನೆಯೊಳಗೆ ಇರುವ ಸಾಮಗ್ರಿಗಳ ಕಥೆ ಏನು ಎಂದು ಕಟುವಾಕ್ಯಗಳಲ್ಲಿ ಪ್ರಶ್ನಿಸಿದೆ. ಮಹಾರಾಜ್ ಗಂಜ್ ಜಿಲ್ಲೆಯಲ್ಲಿರುವ ಈ ಮನೆ ಪ್ರಕರಣದ ಬಗ್ಗೆ ತನಿಖೆ ನಡೆಸುವಂತೆ ರಾಜ್ಯ ಮುಖ್ಯ ಕಾರ್ಯದರ್ಶಿಗೆ ಸೂಚಿಸಿದ ನ್ಯಾಯಪೀಠ, ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳುವಂತೆ ತಿಳಿಸಿತು. ಅತಿಕ್ರಮ ಕಂಡುಬಂದಲ್ಲಿ ಮೊದಲು ಸರ್ಕಾರ ಅದನ್ನು ತೆರವು ಮಾಡುವಂತೆ ನೋಟಿಸ್ ನೀಡಬೇಕು. ನಂತರ ಆಕ್ಷೇಪಣೆಗಳಿದ್ದಲ್ಲಿ ಅದನ್ನು ಆಲಿಸಬೇಕು. ಒಂದುವೇಳೆ ಅತಿಕ್ರಮ ನಿಜವಾಗಿದ್ದು, ನೋಟಿಸ್​ಗೆ ಪೂರಕವಾಗಿ ನಡೆದುಕೊಳ್ಳಲು ವ್ಯಕ್ತಿ ಹಿಂಜರಿದಾಗ ಅಗತ್ಯ ಕ್ರಮ ಕೈಗೊಳ್ಳಲು ಸಕ್ಷಮ ಪ್ರಾಧಿಕಾರಗಳು ಮುಂದಾಗಬೇಕು ಎಂದು ಕೋರ್ಟ್ ಸಲಹೆ ನೀಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net