

ಕರಾಚಿ: ಪಾಕಿಸ್ತಾನದ ಕರಾಚಿಯಲ್ಲಿ ಭಾರಿ ಸ್ಫೋಟವಾಗಿದ್ದು ಕನಿಷ್ಠ 12 ಮಂದಿ ಸಾವಿಗೀಡಾಗಿದ್ದಲ್ಲದೆ, 11 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇಲ್ಲಿನ ಮೋರಿಯೊಂದರ ಅಡಿಯಲ್ಲಿ ಸ್ಫೋಟ ಸಂಭವಿಸಿದ್ದು, ಅದರ ಮೇಲೆ ಇದ್ದ ಬ್ಯಾಂಕ್ ಕಟ್ಟಡವೊಂದಕ್ಕೆ ಭಾರಿ ಹಾನಿ ಉಂಟಾಗಿದೆ.
ಕರಾಚಿಯ ಶೇರ್ಷಹಾ ಪ್ರದೇಶದ ಕಟ್ಟಡದ ಅಡಿಭಾಗದಲ್ಲಿದ್ದ ಮೋರಿಯೊಳಗೆ ತುಂಬಿಕೊಂಡಿದ್ದ ಅನಿಲದಿಂದ ಈ ಸ್ಫೋಟ ಸಂಭವಿಸಿದೆ ಎಂದು ಬಾಂಬ್ ನಿಷ್ಕ್ರಿಯ ದಳದವರು ಅಂದಾಜಿಸಿದ್ದಾರೆ. ಅಷ್ಟಕ್ಕೂ ಸ್ಫೋಟಕ್ಕೆ ಕಾರಣ ಏನು ಎಂಬುದು ಇನ್ನೂ ಖಚಿತವಾಗಿ ಬಹಿರಂಗಗೊಂಡಿಲ್ಲ.
ತೆರವು ಕಾರ್ಯಾಚರಣೆ ನಡೆಯುತ್ತಿದ್ದು, ಸಾವು-ನೋವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆಗಳು ಇವೆ ಎಂದೂ ಹೇಳಲಾಗುತ್ತಿದೆ. ಸಾವು ನೋವಿಗೆ ಒಳಗಾದವರಲ್ಲಿ ಬಹುತೇಕರು ಸ್ಫೋಟದಿಂದ ಹಾನಿಗೀಡಾಗಿರುವ ಕಟ್ಟಡದಲ್ಲಿ ಖಾಸಗಿ ಬ್ಯಾಂಕ್ ಕಚೇರಿಯ ಸಿಬ್ಬಂದಿ ಹಾಗೂ ಗ್ರಾಹಕರು ಎನ್ನಲಾಗಿದೆ. -ಏಜೆನ್ಸೀಸ್