ಸಿಝಡ್‌ಎ ಸದ್ಯ ಹೊಂದಿರುವ ಕೊನೆಯ ವರದಿ (ಜುಲೈ-ಸೆಪ್ಟೆಂಬರ್ 2025) ಪ್ರಕಾರ, ಪಿಲಿಕುಳದಲ್ಲಿ ಒಟ್ಟು 24 ಕಾಡುನಾಯಿಗಳಿದ್ದವು. ಆ ಅವಧಿಯಲ್ಲಿ ಕೇವಲ ಒಂದು ಕಾಡುನಾಯಿ ಮೃತಪಟ್ಟಿತ್ತೇ ಹೊರತು, ಯಾವುದೇ ಪ್ರಾಣಿಯನ್ನು ಬೇರೆಡೆಗೆ ವರ್ಗಾಯಿಸಿದ ಬಗ್ಗೆ ಉಲ್ಲೇಖವಿರಲಿಲ್ಲ. ಹೀಗಿರುವಾಗ 4 ಕಾಡುನಾಯಿಗಳು ಹಠಾತ್ತಾಗಿ ಮಾಯವಾಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಆರೋಪಗಳ ಗಂಭೀರತೆಯನ್ನು ಪರಿಗಣಿಸಿರುವ ಸಿಝಡ್‌ಎ, ಪ್ರತಿಯೊಂದು ವಿಷಯಕ್ಕೂ ಸ್ಪಷ್ಟವಾದ ವಿವರಣೆ ನೀಡುವಂತೆ ಮೃಗಾಲಯದ ಆಡಳಿತ ಮಂಡಳಿಗೆ ತಿಳಿಸಿದೆ. ಪತ್ರ ತಲುಪಿದ 10 ದಿನಗಳ ಒಳಗೆ ಬಾಕಿ ಇರುವ ಎಲ್ಲ ವರದಿಗಳು, ಪರಿಷ್ಕೃತ ಮಾಸ್ಟರ್ ಪ್ಲಾನ್ ಮತ್ತು ಸತ್ಯಾಸತ್ಯತೆಯ ವರದಿಯನ್ನು ಸಲ್ಲಿಸಲು ಸೂಚಿಸಲಾಗಿದೆ.