

ನವದೆಹಲಿ: ಜಾಗತಿಕ ಪಿಡುಗಾಗಿ ಪರಿಣಮಿಸಿರುವ ಕೊವಿಡ್-19 ಸೋಂಕಿಗೆ ದೇಶಿಯವಾಗಿ ಲಸಿಕೆ ತಯಾರಿಸಲು ಭಾರತದ ಒಟ್ಟು 7 ಕಂಪನಿಗಳು ಪೈಪೋಟಿಗಿಳಿದಿವೆ.
ಈಗಾಗಲೆ ಘೋಷಿಸಿರುವಂತೆ ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಸಿದ್ಧಪಡಿಸಿರುವ ಕೊವಾಕ್ಸಿನ್ ಲಸಿಕೆಯನ್ನು ಮಾನವರ ಮೇಲೆ ಪ್ರಯೋಗಿಸಲಾಗುತ್ತಿದೆ. ಮುಂಬೈ ಮೂಲದ ಝೈಡಸ್ ಕ್ಯಾಡಿಲಾ ಕಂಪನಿ ಝೈಕೋವ್-ಡಿ ಎಂಬ ಲಸಿಕೆಯನ್ನು ಸಿದ್ಧಪಡಿಸಿದ್ದು, ಮಾನವರ ಮೇಲಿನ ಪ್ರಯೋಗಕ್ಕೆ ಮುಂದಾಗುತ್ತಿದೆ.
ಈ ಎರಡು ಕಂಪನಿಗಳಲ್ಲದೆ ಪುಣೆಯ ಸೆರಂ ಇನ್ಸ್ಟಿಟ್ಯೂಟ್, ಪನೇಷಿಯಾ ಬಯೋಟೆಕ್, ಇಂಡಿಯನ್ ಇಮ್ಯುನೋಲಾಜಿಕಲ್ಸ್, ಮೈನ್ವ್ಯಾಕ್ಸ್ ಮತ್ತು ಬಯೋಲಾಜಿಕಲ್ ಇ ಕಂಪನಿಗಳು ಕೂಡ ದೇಶಿಯವಾಗಿ ಕೋವಿಡ್-19 ಲಸಿಕೆ ತಯಾರಿಸಲು ಪೈಪೋಟಿಗಿಳಿದಿವೆ.
ಸೆರಂ ಇನ್ಸ್ಟಿಟ್ಯೂಟ್ ಸಂಸ್ಥೆಯು ಅಸ್ಟ್ರಾಜೆನೆಕಾ ಆಕ್ಸ್ಫರ್ಡ್ನ ಕೋವಿಡ್-19 ಲಸಿಕೆ ಅಭಿವೃದ್ಧಿ ಪ್ರಕ್ರಿಯೆಯಲ್ಲಿ ಕೈಜೋಡಿಸಿದೆ. ಆ ಲಸಿಕೆ ಸಿದ್ಧವಾದ ಬಳಿಕ ಭಾರತ ಸೇರಿ ಕೆಳಮಧ್ಯಮ ವರ್ಗದ ರಾಷ್ಟ್ರಗಳಿಗೆ ಅತ್ಯಂತ ಕಡಿಮೆ ದರದಲ್ಲಿ ಲಸಿಕೆಗಳನ್ನು ತಯಾರಿಸಿ, ವಿತರಿಸಲು ಈ ಸಂಸ್ಥೆ ಸಜ್ಜಾಗುತ್ತಿದೆ.
ಅಸ್ಟ್ರಾಜೆನೆಕಾ ಆಕ್ಸ್ಫರ್ಡ್ನ ಕೋವಿಡ್-19 ಲಸಿಕೆ ವರ್ಷಾಂತ್ಯದ ವೇಳೆಗೆ ಲಭ್ಯವಾಗುವ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿರುವ ಸೆರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ಸಿಇಒ ಅಡಾರ್ ಪೂನಾವಾಲಾ, ಜೀವಂತ ಕರೊನಾ ವೈರಾಣುವನ್ನು ನಿಶ್ಶಕ್ತಗೊಳಿಸಿದ ಲಸಿಕೆಯನ್ನು ಸಿದ್ಧಪಡಿಸುವ ಬಗ್ಗೆ ಅಮೆರಿಕದ ಬಯೋಟೆಕ್ ಸಂಸ್ಥೆ ಕೋಡಾಜೆನಿಕ್ಸ್ ಜತೆಗೂ ಕೆಲಸ ಮಾಡುತ್ತಿರುವುದಾಗಿ ತಿಳಿಸಿದ್ದಾರೆ. ಈ ಲಸಿಕೆಯು ಕ್ಲಿನಿಕಲ್ಪೂರ್ವ ಟ್ರಯಲ್ನಲ್ಲಿ ಇರುವುದಾಗಿ ಹೇಳಿದ್ದಾರೆ.
ರಾಷ್ಟ್ರೀಯ ಡೇರಿ ಅಭಿವೃದ್ಧಿ ಮಂಡಳಿಯ (ಎನ್ಡಿಡಿಬಿ) ಸಹಸಂಸ್ಥೆಯಾಗಿರುವ ಇಂಡಿಯನ್ ಇಮ್ಯುನೋಲಾಜಿಕಲ್ಸ್ ಕೋವಿಡ್-19 ಲಸಿಕೆ ಅಭಿವೃದ್ಧಿಪಡಿಸಲು ಆಸ್ಟ್ರೇಲಿಯಾದ ಗ್ರಿಫಿತ್ ಯೂನಿವರ್ಸಿಟಿ ಜತೆ ಒಪ್ಪಂದ ಮಾಡಿಕೊಂಡಿದೆ. ಮೈನ್ವ್ಯಾಕ್ಸ್ ಮತ್ತು ಬಯೋಲಾಜಿಲ್ ಇ ಸಂಸ್ಥೆಗಳು ಕೂಡ ಕೋವಿಡ್-19 ಲಸಿಕೆ ತಯಾರಿಸುವ ನಿಟ್ಟಿನಲ್ಲಿ ಪ್ರಯತ್ನಮುಖಿಯಾಗಿವೆ.