

ದಿಸ್ಪುರ: ಮಾನ್ಸೂನ್ ಮಳೆಯ ಅಬ್ಬರಕ್ಕೆ ಆಸ್ಸಾಂ ತತ್ತರಿಸಿದೆ. ಪ್ರವಾಹದಿಂದ ಅಪಾರ ಪ್ರಮಾಣದಲ್ಲಿ ಸಾವು-ನೋವು ಉಂಟಾಗುತ್ತಿದೆ.
ಆಸ್ಸಾಂನ ಕಾಜಿರಂಗ್ ರಾಷ್ಟ್ರೀಯ ಉದ್ಯಾನವನದ ಶೇ.85ರಷ್ಟು ಭಾಗ ನೀರಿನಲ್ಲಿ ಮುಳುಗಿಹೋಗಿದೆ. 100ಕ್ಕೂ ಹೆಚ್ಚು ಪ್ರಾಣಿಗಳು ನೀರಿನಲ್ಲಿ ಮುಳುಗಿ ಸಾವನ್ನಪ್ಪಿವೆ.
ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭಾನುವಾರ ಆಸ್ಸಾಂ ಮುಖ್ಯಮಂತ್ರಿ ಸರ್ಬಾನಂದ್ ಸೊರೊವಾಲ್ ಅವರಿಗೆ ಕರೆ ಮಾಡಿ ರಾಜ್ಯದಲ್ಲಿ ಇರುವ ಪ್ರವಾಹ ಪರಿಸ್ಥಿತಿಯ ಬಗ್ಗೆ ವರದಿ ಕೇಳಿದ್ದಾರೆ. ಅಷ್ಟೇ ಅಲ್ಲ ಕೊವಿಡ್-19 ಸ್ಥಿತಿಗತಿ, ತಿನಸುಕಿಯಾ ಜಿಲ್ಲೆಯ ಬಾಘ್ಜನ್ ಬಳಿ ಇರುವ ಆಯಿಲ್ ಇಂಡಿಯಾ ಲಿಮಿಟೆಡ್ನ ತೈಲ ಬಾವಿಯಲ್ಲಿ ಕಾಣಿಸಿಕೊಂಡ ಬೆಂಕಿಯ ಬಗ್ಗೆಯೂ ವಿಚಾರಿಸಿದ್ದಾರೆ ಎಂದು ವರದಿಯಾಗಿದೆ.
ಆಸ್ಸಾಂನ ಪ್ರವಾಹಕ್ಕೆ ಕಾಜಿರಂಗ ರಾಷ್ಟ್ರೀಯ ಉದ್ಯಾನವನದ ಮುಕ್ಕಾಲು ಭಾಗ ಮುಳುಗಿದ್ದು, ಪರಿಣಾಮವಾಗಿ 9 ಖಡ್ಗಮೃಗಗಳು, 80ಕ್ಕೂ ಹೆಚ್ಚು ಜಿಂಕೆಗಳು ಸೇರಿ ಸುಮಾರು 100 ಪ್ರಾಣಿಗಳು ಮೃತಪಟ್ಟಿವೆ. 130ಕ್ಕೂ ಹೆಚ್ಚು ಪ್ರಾಣಿಗಳನ್ನು ರಕ್ಷಣೆ ಮಾಡಲಾಗಿದೆ ಎಂದು ಉದ್ಯಾನವನದ ಆಡಳಿತ ತಿಳಿಸಿದೆ. ಹಾಗೇ ಪ್ರಾಣಿಗಳ ರಕ್ಷಣೆಗಾಗಿ ಸುಮಾರು 32 ಕಿ.ಮೀ.ಉದ್ದದ ಕೃತಕ ಗುಡ್ಡಗಾಡು ಪ್ರದೇಶ ನಿರ್ಮಿಸಲು ಸರ್ಕಾರ ನಿರ್ಧರಿಸಿದೆ. ಈ ಪ್ರಸ್ತಾವನೆಯನ್ನು ರಾಜ್ಯಸರ್ಕಾರ ಕೇಂದ್ರ ಸರ್ಕಾರದ ಎದುರು ಇಟ್ಟಿತ್ತು. ಅದಕ್ಕೆ ಕೇಂದ್ರ ಅಸ್ತು ಎಂದಿದೆ.
ರಾಜ್ಯದ ಪ್ರವಾಹ ಪರಿಸ್ಥಿತಿ ನಿಭಾಯಿಸಲು ಎಲ್ಲ ರೀತಿಯ ಅಗತ್ಯ ನೆರವನ್ನೂ ನೀಡುವುದಾಗಿ ಪ್ರಧಾನಿ ಮೋದಿಯವರು ಭರವಸೆ ನೀಡಿದ್ದಾರೆಂದು ಆಸ್ಸಾಂ ಮುಖ್ಯಮಂತ್ರಿ ಟ್ವೀಟ್ ಮಾಡಿದ್ದಾರೆ. (ಏಜೆನ್ಸೀಸ್)