ಏಳು ಮಂದಿ ಮನೆಗಳ್ಳರ ಸೆರೆ; ಸುಳಿವು ಕೊಟ್ಟ ಬಿಎಂಟಿಸಿ ಬಸ್

BMTC
ಸಾಂದರ್ಭಿಕ ಚಿತ್ರ
Published on

ಬೆಂಗಳೂರು: ಬೀಗ ಹಾಕಿದ ಮನೆಗಳಿಗೆ ಕನ್ನ ಹಾಕಿ ಚಿನ್ನಾಭರಣ ದೋಚಿದ್ದ ಪ್ರತ್ಯೇಕ ಪ್ರಕರಣಗಳಲ್ಲಿ ಏಳು ಕಳ್ಳರನ್ನು ಜ್ಞಾನಭಾರತಿ, ಬಾಗಲಗುಂಟೆ ಮತ್ತು ಸಂಜಯನಗರ ಪೊಲೀಸರು ಬಂಧಿಸಿದ್ದಾರೆ.

ರಾತ್ರಿ ವೇಳೆ ಮನೆಗಳಲ್ಲಿ ಕಳವು ಮಾಡುತ್ತಿದ್ದ ಮೋಹಿನುದ್ದೀನ್ ಮತ್ತು ಮೊಹಮ್ಮದ್ ಅಶ್ವಕ್ ಎಂಬುವರನ್ನು ಜ್ಞಾನಭಾರತಿ ಪೊಲೀಸರು ಬಂಧಿಸಿದ್ದಾರೆ. ತಲೆಮರೆಸಿಕೊಂಡಿರುವ ಜುನೈದ್ ಎಂಬಾತನ ಪತ್ತೆಗೆ ಬಲೆಬೀಸಿದ್ದಾರೆ. ಬಂಧಿತರಿಂದ 230 ಗ್ರಾಂ ಚಿನ್ನಾಭರಣ, 72 ಗ್ರಾಂ ಬೆಳ್ಳಿ ಹಾಗೂ 4 ಲಕ್ಷ ರೂ. ಜಪ್ತಿ ಮಾಡಲಾಗಿದೆ. ಇತ್ತೀಚೆಗೆ ಚಿಕ್ಕಬಸ್ತಿಯಲ್ಲಿ ಶಬರಿನ್ ತಾಜ್ ಎಂಬುವರ ಮನೆಗೆ ಆರೋಪಿಗಳು ಕನ್ನ ಹಾಕಿದ್ದರು. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು, ತಾಂತ್ರಿಕ ಮಾಹಿತಿ ಆಧರಿಸಿ ಕಳ್ಳರನ್ನು ಬಂಧಿಸಿದ್ದಾರೆ.

ಬಾಗಲಗುಂಟೆ ಪೊಲೀಸರು, ತಮ್ಮ ವ್ಯಾಪ್ತಿಯಲ್ಲಿ ಆಟೋದಲ್ಲಿ ಸುತ್ತಾಡಿ ಬೀಗ ಹಾಕಿದ ಮನೆಗಳನ್ನು ಗುರುತಿಸಿ ಕನ್ನ ಹಾಕುತ್ತಿದ್ದ ರವಿ ಅಲಿಯಾಸ್ ರವಿಕುಮಾರ್, ಇಮ್ರಾನ್ ಮತ್ತು ಜೈ ಕುಮಾರ್ ಎಂಬುವರನ್ನು ಬಂಧಿಸಿದ್ದಾರೆ. ಆರೋಪಿಗಳಿಂದ 1.8 ಲಕ್ಷ ರೂ. ಮತ್ತು 6.45 ಲಕ್ಷ ರೂ. ಮೌಲ್ಯದ 129 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ.

ಶೆಟ್ಟಿಹಳ್ಳಿಯ ಬೈರವೇಶ್ವರ ನಿವಾಸಿ ಶಾಂತಿಬಾಯಿ ಅವರು ದೇವರ ದರ್ಶನಕ್ಕೆ ಹೋಗಿದ್ದಾಗ ಕಳ್ಳರು ಮನೆಯ ಬೀಗ ಮುರಿದು ಕಳ್ಳತನ ಮಾಡಿದ್ದರು. ಸಿಸಿ ಕ್ಯಾಮರಾ ನೀಡಿದ ಸುಳಿವಿನ ಮೇರೆಗೆ ಆರೋಪಿಗಳು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮತ್ತೊಂದು ಪ್ರಕರಣದಲ್ಲಿ ಸಂಜಯನಗರ ಪೊಲೀಸರು, ಬಿಎಂಟಿಸಿ ಬಸ್‌ಗಳ ಸಿಸಿ ಕ್ಯಾಮರಾ ನೀಡಿದ ಸುಳಿವು ಆಧರಿಸಿ ಮನೆಗಳ್ಳನನ್ನು ಬಂಧಿಸಿದ್ದಾರೆ.

ಮತ್ತಿಕೆರೆ ಮುತ್ಯಾಲನಗರದ ಸುಬ್ರಾತೋ ಮಂಡಲ್ ಬಂಧಿತ. 75 ಸಾವಿರ ರೂ. ನಗದು ಹಾಗೂ 10.5 ಲಕ್ಷ ರೂ. ಮೌಲ್ಯದ 211 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ. ಆ.27ರಂದು ಪಟೇಲಪ್ಪ ಲೇಔಟ್‌ನ ಮನೆಯಲ್ಲಿ ಮನೆಗಳ್ಳತನ ನಡೆದಿತ್ತು.

ಘಟನೆ ನಡೆದ ಸ್ಥಳದ ಸುತ್ತಮುತ್ತ ಕಟ್ಟಡಗಳು ಮತ್ತು ಆ ಮಾರ್ಗದ ಬಿಎಂಟಿಸಿ ಬಸ್‌ಗಳ ಸಿಸಿ ಕ್ಯಾಮರಾ ದೃಶ್ಯಾವಳಿ ಪರಿಶೀಲಿಸಿದಾಗ ಆರೋಪಿ ಸುಳಿವು ಸಿಕ್ಕಿತು ಎಂದು ಅಧಿಕಾರಿಗಳು ಹೇಳಿದ್ದಾರೆ.

ಪಶ್ಚಿಮ ಬಂಗಾಳ ಮೂಲದ ಮಂಡಲ್, ಕೆಲ ದಿನಗಳ ಹಿಂದೆ ಕೆಲಸ ಅರಸಿ ನಗರಕ್ಕೆ ಬಂದಿದ್ದ. ನಿರ್ಮಾಣ ಹಂತದ ಕಟ್ಟಡಗಳಲ್ಲಿ ಟೈಲ್ಸ್ ಕೆಲಸ ಮಾಡುತ್ತಿದ್ದ ಮಂಡಲ್, ಬೀಗ ಹಾಕುವ ಮನೆಗಳನ್ನು ಗುರುತಿಸಿ ಕಳ್ಳತನ ಮಾಡುತ್ತಿದ್ದ ಎಂದು ಪೊಲೀಸರು ವಿವರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net