ಸೇವಾಲಾಲ್ ಲಂಬಾಣಿ ಸಮಾಜದ ಮಾರ್ಗದರ್ಶಕ

banjara
ಶಿವಮೊಗ್ಗ ಜಿಲ್ಲಾ ಬಂಜಾರ ಸಂಘದಿಂದ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಹಾಗೂ ದೇವಾಲಯ ಉದ್ಘಾಟನಾ ಕಾರ್ಯಕ್ರಮವನ್ನು ಶ್ರೀ ಸರ್ದಾರ್ ಸೇವಾಲಾಲ್ ಸ್ವಾಮೀಜಿ ಉದ್ಘಾಟಿಸಿದರು. ಸೈನಾಭಗತ್ ಸೇವಾಲಾಲ್ ಸ್ವಾಮೀಜಿ, ಕೆ.ಬಿ.ಅಶೋಕ್‌ನಾಯ್ಕ, ಆಯನೂರು ಶಿವಾನಾಯ್ಕ, ಆರ್.ಸಿ. ನಾಯ್ಕ, ಹೀರಾನಾಯ್ಕ ಮುಂತಾದವರಿದ್ದರು.
Published on

ಶಿವಮೊಗ್ಗ: ಲಂಬಾಣಿ ಸಮಾಜವನ್ನು ಶಾಶ್ವತ ನೆಲೆಯತ್ತ ಕೊಂಡೊಯ್ದು ನಾಗರಿಕ ಸಮಾಜಕ್ಕೆ ಹತ್ತಿರ ಕೊಂಡಯ್ದು ಮುಕ್ತಿ ಕಲ್ಪಿಸಿದವರು ಸಂತ ಸೇವಾಲಾಲ್ ಗುರುಗಳು. ಅವರ ಸಂದೇಶ ಮತ್ತು ಆದರ್ಶಗಳನ್ನು ನಾವೆಲ್ಲರೂ ಪಾಲಿಸಬೇಕೆಂದು ಪಿಇಎಸ್ ಕಾಲೇಜಿನ ಮುಖ್ಯ ಆಡಳಿತಾಧಿಕಾರಿ ಡಾ.ಆರ್.ನಾಗರಾಜ್ ಹೇಳಿದರು.

ಜಿಲ್ಲಾ ಬಂಜಾರ ಸಂಘದಿಂದ ನಗರದ ಬಂಜಾರ ಕನ್ವೆನ್ಷನ್ ಹಾಲ್ ಆವರಣದಲ್ಲಿ ನಿರ್ಮಿಸಿರುವ ಸೇವಾಲಾಲ್, ಮರಿಯಮ್ಮ, ಗಣಪತಿ ದೇವಸ್ಥಾನದ ಉದ್ಘಾಟನೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಲಂಬಾಣಿ ಸಮಾಜ ವರ್ಣರಂಜಿತ ಬುಡಕಟ್ಟಿನದ್ದಾಗಿದೆ. ಜಿಲ್ಲೆಯಲ್ಲಿ 4.50ಲಕ್ಷಕ್ಕೂ ಹೆಚ್ಚು ಮಂದಿ ಬಂಜಾರ ಸಮುದಾಯದವರಿದ್ದಾರೆ. ಈ ಸಮಾಜವನ್ನು 27ವಿವಿಧ ಹೆಸರುಗಳಿಂದ ಗುರುತಿಸಲಾಗುತ್ತಿದೆ. ಇವರಿಗೆ ಶಾಶ್ವತವಾದ ನೆಲೆ, ತಾಂಡಾ ಆಡಳಿತ ವ್ಯವಸ್ಥೆ, ದುಶ್ಚಟಗಳ ನಿಗ್ರಹ, ಸತ್ಯಾ, ಅಹಿಂಸೆ, ಮಾನವೀಯ ತತ್ವಗಳನ್ನು ಬೋಧಿಸಿ ಕರ್ತವ್ಯವೇ ದೇವರು ಎಂದು ಮಾರ್ಗದರ್ಶನ ಮಾಡಿದವರು ಸಂತ ಸೇವಾಲಾಲ್ ಎಂದು ಹೇಳಿದರು.

ಈ ಹಿಂದೆ ಹೈದರಾಬಾದ್‌ನ ನಿಜಾಮ ಸೇವಾಲಾಲ್‌ರ ಭಕ್ತರಾಗಿದ್ದರು. ಇಂದು ಬಂಜಾರ ಹಿಲ್ಸ್ ಎಂದು ಕರೆಯಲ್ಪಡುವ ಪ್ರದೇಶವನ್ನು ಸೇವಾಲಾಲ್‌ರಿಗೆ ದಾನವಾಗಿ ನೀಡಿದ್ದರು. ಲಂಬಾಣಿ ಸಮಾಜ ಮದ್ಯಪಾನ ಮುಕ್ತ ಸಮಾಜವಾಗಿಸುವಲ್ಲಿ ಸೇವಾಲಾಲ್ ಗುರುಗಳ ಪಾತ್ರ ದೊಡ್ಡದು. ಬದುಕಿನ ಸತ್ಯವನ್ನು ಸರಳವಾಗಿ ಎಲ್ಲರಿಗೂ ಮುಟ್ಟಿಸಿದ್ದರು ಎಂದು ತಿಳಿಸಿದರು.

ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದವರಿಗೆ ಪ್ರತಿಭಾ ಪುರಸ್ಕಾರ ನೀಡುತ್ತಿರುವುದು ಒಳ್ಳೆಯ ಬೆಳವಣಿಗೆ. ಎಸ್‌ಎಸ್‌ಎಲ್‌ಸಿಯಲ್ಲಿ ಹೆಚ್ಚು ಅಂಕ ಪಡೆದರೆ ಒಳ್ಳೆಯ ಕಾಲೇಜಿನಲ್ಲಿ ಸೀಟು ಸಿಗುತ್ತದೆ ಎಂಬುದು ಪಾಲಕರ ಆಶಯ. ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದರೆ ಸಾಲದು, ನೀಟ್ ಪರೀಕ್ಷೆಯಲ್ಲೂ ಹೆಚ್ಚಿನ ಅಂಕ ಪಡೆದಾಗ ಮಾತ್ರ ಉಪಯೋಗವಾಗುತ್ತದೆ ಎಂದರು.

ವಿದ್ಯಾರ್ಥಿಗಳು ಮತ್ತು ಪಾಲಕರು ಐದು ವಿಷಯಗಳತ್ತ ಗಮನಹರಿಸಬೇಕು. ಶಾರೀರಿಕ ಬಲ, ಮನಸ್ಸಿನ ಬಲ, ಬುದ್ಧಿಶಕ್ತಿಯ ಬಲ, ಆತ್ಮಸಾಕ್ಷಿ ಮತ್ತು ಶಿಸ್ತು. ಈ ಐದು ಅಂಶಗಳನ್ನು ಕೇಂದ್ರೀಕರಿಸಿ ಅವುಗಳನ್ನು ಸಮಪರ್ಕವಾಗಿ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ವಿದ್ಯಾರ್ಥಿ ಯಶಸ್ಸು ಕಾಣಲು ಸಾಧ್ಯ ಎಂದು ಹೇಳಿದರು.

ಎಸ್‌ಎಸ್‌ಎಲ್‌ಸಿಯಲ್ಲಿ ಹೆಚ್ಚು ಅಂಕಪಡೆದವರಿಗೆ ಬಂಜಾರ ಸಂಘದಿಂದ ಸಾವಿರ ರೂ. ಪಿಯುಸಿ ವಿದ್ಯಾರ್ಥಿಗಳಿಗೆ 1,500 ರೂ. ಪ್ರತಿಭಾ ಪುರಸ್ಕಾರದ ರೂಪದಲ್ಲಿ ನೀಡಲಾಗುತ್ತಿದೆ. ಈ ಎಲ್ಲ ವಿದ್ಯಾರ್ಥಿಗಳಿಗೂ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ವೈಯಕ್ತಿಕವಾಗಿ ತಲಾ 500 ರೂ. ನೀಡಿದ್ದಾರೆ ಎಂದರು.

ಚಿತ್ರದುರ್ಗ ಗುರುಪೀಠದ ಶ್ರೀ ಸರ್ದಾರ್ ಸೇವಾಲಾಲ್ ಸ್ವಾಮೀಜಿ, ಶಿಕಾರಿಪುರ ಸಾಲೂರು ಮಠದ ಶ್ರೀ ಸೈನಾಭಗತ್ ಸೇವಾಲಾಲ್ ಸ್ವಾಮೀಜಿ, ಮಾಜಿ ಶಾಸಕ ಹಾಗೂ ಬಂಜಾರ ಸಂಘದ ಜಿಲ್ಲಾಧ್ಯಕ್ಷ ಕೆ.ಬಿ.ಅಶೋಕ್‌ನಾಯ್ಕ, ಹೀರಾನಾಯ್ಕ, ಆನಂದ ಕೆ. ದುಮ್ಮಳ್ಳಿ, ಹಾಲೇಶ್‌ನಾಯ್ಕ, ಆರ್.ಸಿ. ನಾಯ್ಕ, ಜಯಾನಾಯ್ಕ, ನಾನ್ಯಾನಾಯ್ಕ, ಆಯನೂರು ಶಿವಾನಾಯ್ಕ, ನಾಗೇಶ್ ನಾಯ್ಕ ಮುಂತಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net