ಚರಂಡಿಯಿಲ್ಲದ ಸರ್ವಿಸ್ ರಸ್ತೆಗಳು ಜಲಾವೃತ!

ಮಂಗಳೂರು ನಗರದಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಗಳ ಸರ್ವೀಸ್ ರಸ್ತೆಗಲ್ಲಿ ಮೊದಲ ಪ್ಲಾಸ್ಟಿಕ್ ರಸ್ತೆ ಪ್ರಯೋಗ ಯಶಸ್ವಿಯಾದರೂ ಮಳೆಗಾಲದಲ್ಲಿ ನೀರು ಹರಿಯಯಲು ಸಮರ್ಪಕ ಚರಂಡಿ ವ್ಯವಸ್ಥೆಗಳೇ ಇಲ್ಲದೆ ಅಲ್ಲಲ್ಲಿ ಜಲಾವೃತಗೊಳ್ಳುತ್ತಿದೆ.
ಮಂಗಳೂರು ನಗರದಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಗಳ ಸರ್ವೀಸ್ ರಸ್ತೆಗಲ್ಲಿ ಮೊದಲ ಪ್ಲಾಸ್ಟಿಕ್ ರಸ್ತೆ ಪ್ರಯೋಗ ಯಶಸ್ವಿಯಾದರೂ ಮಳೆಗಾಲದಲ್ಲಿ ನೀರು ಹರಿಯಯಲು ಸಮರ್ಪಕ ಚರಂಡಿ ವ್ಯವಸ್ಥೆಗಳೇ ಇಲ್ಲದೆ ಅಲ್ಲಲ್ಲಿ ಜಲಾವೃತಗೊಳ್ಳುತ್ತಿದೆ.
Published on
ಮಂಗಳೂರು: ಕರಾವಳಿ ಭಾಗದಲ್ಲಿ ಮಳೆಯಾದಾಗ ರಸ್ತೆಗಳು ಹಾನಿಗೊಳಗಾಗುವುದನ್ನು ತಡೆಯಲು ದೇಶದಲ್ಲೇ ಮೊದಲ ಬಾರಿಗೆ ರಾಷ್ಟ್ರೀಯ ಹೆದ್ದಾರಿಯ ಸರ್ವಿಸ್ ರಸ್ತೆಗೆ ಪ್ಲಾಸ್ಟಿಕ್ ಬಳಸುವ ವಿನೂತನ ಪ್ರಯೋಗವನ್ನು ಮಂಗಳೂರಿನಲ್ಲಿ ಮಾಡಲಾಗಿತ್ತು. ಭಾರತದ ಪ್ರತಿಷ್ಠಿತ ರಾಷ್ಟ್ರೀಯ ಸಂಸ್ಥೆಯಾದ ‘ಇಂಡಿಯನ್ ರೋಡ್ ಕಾಂಗ್ರೆಸ್’ ಈ ಸಂಶೋಧನಾ ಯೋಜನಾ ವರದಿಯನ್ನು ಸಮಗ್ರವಾಗಿ ಪರಿಶೀಲಿಸಿ ಅನುಮೋದನೆ ನೀಡಿತ್ತು. ತಾಂತ್ರಿಕವಾಗಿ ಈ ಪ್ಲಾಸ್ಟಿಕ್ ರಸ್ತೆ ನಿರ್ಮಾಣ ಯಶಸ್ವಿಯಾಗಿದ್ದರೂ, ಸಮರ್ಪಕ ಚರಂಡಿ ವ್ಯವಸ್ಥೆಯ ಕೊರತೆಯಿಂದಾಗಿ ಈ ಹೈಟೆಕ್ ರಸ್ತೆಗಳು ಈಗ ಮಳೆನೀರಿನಲ್ಲಿ ಮುಳುಗಡೆಯಾಗುತ್ತಿವೆ.
ಕೂಳೂರು, ಪಂಪ್ವೆಲ್ ತೊಕ್ಕೊಟ್ಟೂ ಸೇರಿದಂತೆ ಹಲವಡೆ ಅಲ್ಪ ಮಳೆಯಾದರೂ ಸಾಕು, ಹೆದ್ದಾರಿಯ ಇಕ್ಕೆಲಗಳ ಸರ್ವಿಸ್ ರಸ್ತೆಗಳು ಕೆರೆಯಂತಾಗುತ್ತಿದ್ದು, ವಾಹನ ಸವಾರರು ಮತ್ತು ಪಾದಚಾರಿಗಳು ಜೀವ ಕೈಯಲ್ಲಿ ಹಿಡಿದು ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿಂದೆ ಕರಾವಳಿಯ ಅತಿಯಾದ ಮಳೆಗೆ ಮಣ್ಣು ಹದಗೆಟ್ಟು ಡಾಂಬರು ರಸ್ತೆಗಳು ಬೇಗನೇ ಹಾಳಾಗುತ್ತವೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಮಂಗಳೂರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕರು ಕೇಂದ್ರ ಹೆದ್ದಾರಿ ಇಲಾಖೆಗೆ ಪ್ಲಾಸ್ಟಿಕ್ ರಸ್ತೆ ನಿರ್ಮಾಣದ ಪ್ರಸ್ತಾವನೆ ಸಲ್ಲಿಸಿದ್ದರು. ಪರಿಸರ ಸ್ನೇಹಿ ಮತ್ತು ಬಾಳಿಕೆ ಬರುವ ಈ ಯೋಜನೆ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿತ್ತು. ಆದರೆ, ಇಷ್ಟೊಂದು ಮಹತ್ವಾಕಾಂಕ್ಷೆಯ ಯೋಜನೆಯನ್ನು ಅನುಷ್ಠಾನಗೊಳಿಸಿದ ಅಧಿಕಾರಿಗಳು, ರಸ್ತೆಯ ಪಕ್ಕದಲ್ಲಿ ನೀರು ಸರಾಗವಾಗಿ ಹರಿದು ಹೋಗಲು ಬೇಕಾದ ಚರಂಡಿ ವ್ಯವಸ್ಥೆಯನ್ನು ಸಮರ್ಪಕವಾಗಿ ರೂಪಿಸಿಲ್ಲ.
*ಹೂಳು ತುಂಬಿದ ಚರಂಡಿಗಳು: ಕೃತಕ ನೆರೆ ಭೀತಿ
ಕೂಳೂರು, ಕೊಟ್ಟಾರ ಚೌಕಿ, ತೊಕ್ಕೊಟ್ಟೂ ಸರ್ವಿಸ್ ರಸ್ತೆಗಳ ಅಕ್ಕಪಕ್ಕದಲ್ಲಿ ಸದ್ಯ ಇರುವ ಚರಂಡಿಗಳಲ್ಲಿ ವರ್ಷಗಳಿಂದ ಹೂಳೆತ್ತದೆ ಹಾಗೇ ಬಿಡಲಾಗಿದೆ. ಪರಿಣಾಮವಾಗಿ, ಚರಂಡಿಗಳಲ್ಲಿ ಮಣ್ಣು ಮತ್ತು ಕಸ ತುಂಬಿಕೊಂಡು ಸಂಪೂರ್ಣ ಮುಚ್ಚಿಹೋಗಿವೆ. ಮಳೆ ಬಂದಾಗ ಹೆದ್ದಾರಿಯ ನೀರೆಲ್ಲವೂ ರಸ್ತೆಯ ಮೇಲೆಯೇ ನಿಲ್ಲುತ್ತಿದ್ದು, ಕೃತಕ ನೆರೆ ಸೃಷ್ಟಿಯಾಗುತ್ತಿದೆ. ಇದು ಕೇವಲ ಸಂಚಾರಕ್ಕೆ ಅಡ್ಡಿಪಡಿಸುತ್ತಿರುವುದಲ್ಲದೆ, ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಮಾಡಿದ ದೇಶದ ಮೊದಲ ಪ್ಲಾಸ್ಟಿಕ್ ರಸ್ತೆ ಪ್ರಯೋಗದ ಆಶಯವನ್ನೇ ಮಣ್ಣುಪಾಲು ಮಾಡುತ್ತಿದೆ.
------------
ಹೆದ್ದಾರಿ ಪ್ರಾಧಿಕಾರವು ಸರ್ವೀಸ್ ರಸ್ತೆಗಳ ಚರಂಡಿಗಳಿಂದ ಹೂಳೆತ್ತುವ ಕಾರ್ಯ ಕೈಗೊಳ್ಳಬೇಕು. ಕೇಂದ್ರ ಸರ್ಕಾರದ ಮೆಚ್ಚುಗೆ ಗಳಿಸಿದ್ದ ಈ ವಿಶೇಷ ಯೋಜನೆಗೆ ಈಗ ಸ್ಥಳೀಯ ಆಡಳಿತದ ಬೇಜವಾಬ್ದಾರಿತನ ಮುಳುವಾಗಿದೆ. ರಾಷ್ಟ್ರೀೀಯ ಹೆದ್ದಾರಿ ಪ್ರಾಧಿಕಾರ ಮತ್ತು ನಗರ ಪಾಲಿಕೆ ಜಂಟಿಯಾಗಿ ಕಾರ್ಯಾಚರಣೆ ನಡೆಸಿ, ಸರ್ವಿಸ್ ರಸ್ತೆಗಳ ಪಕ್ಕದಲ್ಲಿ ಸುಸಜ್ಜಿತ ಚರಂಡಿ ವ್ಯವಸ್ಥೆ ಕಲ್ಪಿಸದಿದ್ದರೆ, ಈ ಮಾದರಿ ಯೋಜನೆ ಕೇವಲ ದಾಖಲೆಗಷ್ಟೇ ಸೀಮಿತವಾಗುವ ಅಪಾಯವಿದೆ.
-ಕಿರಣ್‌ರಾವ್, ಸ್ಥಳೀಯ ನಿವಾಸಿ
---------------
ರಾಷ್ಟ್ರೀಯ ಹೆದ್ದಾರಿ 66ರ ತಲಪಾಡಿಯಿಂದ ಸಾಸ್ತಾನದವರೆಗಿನ ಸರ್ವಿಸ್ ರಸ್ತೆಯನ್ನು ಎಲ್‌ಡಿಪಿ ಪ್ಲಾಸ್ಟಿಕ್ ಬಳಸಿ ರಸ್ತೆ ನಿರ್ಮಾಣ ಮಾಡಲಾಗಿದೆ. ಈ ರಸ್ತೆಯಲ್ಲಿ ತೇವಾಂಶ ನಿರೋಧಕತೆ ಮತ್ತು ತಾಪಮಾನ ತಡೆದುಕೊಳ್ಳುವ ಸಾಮರ್ಥ್ಯ ಗುಣಲಕ್ಷಣ ಇರುವುದರಿಂದ ರಸ್ತೆ ಧೀಘಕಾಲ ಬಾಳಿಕೆ ಬರಲಿದೆ. ಹೆದ್ದಾರಿ ಪ್ರಾಧಿಕಾರವು ಸರ್ವೀಸ್ ರಸ್ತೆಗಳ ಚರಂಡಿಗಳಿಂದ ಹೂಳೆತ್ತುವ ಕಾರ್ಯ ಈಗಾಗಲೇ ಮಾಡಲಾಗಿದೆ. ಪಾಲಿಕೆಯ ಅಸಮರ್ಪಕ ಕಾಮಗಾರಿಗಳಿಂದಾಗಿಯೇ ಇಲ್ಲಿ ಮಣ್ಣು ತುಂಬಿಕೊಳ್ಳುತ್ತಿದೆ.
- ಅಬ್ದುಲ್ಲಾ ಜಾವೇದ್ ಅಝ್ಮಿ
ಯೋಜನಾ ನಿರ್ದೇಶಕರು, ಎನ್‌ಎಚ್‌ಎಐ ಮಂಗಳೂರು
----------------
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net