ಸರ್ವರ್ ಸಮಸ್ಯೆಯಿಂದ ಪಡಿತರದಾರರ ಪರದಾಟ

10BTP01
Published on

ಬೆಟ್ಟದಪುರ : ಪಡಿತರ ಕಾರ್ಡ್ ತಿದ್ದುಪಡಿಗೆ ಸರ್ಕಾರ ಅವಕಾಶ ಮಾಡಿಕೊಟ್ಟರೂ ಸರ್ವರ್ ಸಮಸ್ಯೆಯಿಂದ ಪಡಿತರದಾರರು ಕೆಲಸವಾಗದೆ ನಿರಾಸೆ ಅನುಭವಿಸಿದ್ದಾರೆ.

ಮೈಸೂರು ಜಿಲ್ಲೆಯಲ್ಲಿ ಅಕ್ಟೋಬರ್ 8ರಿಂದ 10ರವರೆಗೆ ಬಿಪಿಎಲ್ ಪಡಿತರ ಚೀಟಿದಾರರ ಹೆಸರು ಸೇರ್ಪಡೆ ಸೇರಿದಂತೆ ಅಗತ್ಯ ತಿದ್ದುಪಡಿಗಳಿಗೆ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಅವಕಾಶ ನೀಡಿತ್ತು. ಪಡಿತರ ಚೀಟಿಯಲ್ಲಿನ ಹೆಸರು ಡಿಲೀಟ್ ಮಾಡುವುದು, ಹೊಸ ಹೆಸರು ಸೇರ್ಪಡೆ, ಹೆಸರಿನಲ್ಲಿ ಲೋಪದೋಷಗಳ ತಿದ್ದುಪಡಿ, ವಿಳಾಸ ಬದಲಾವಣೆಯಂತಹ ಪರಿಷ್ಕರಣೆಗೆ ಅವಕಾಶ ಕಲ್ಪಿಸಲಾಗಿತ್ತು. ಆದರೆ ಮೂರು ದಿನವೂ ಇಲಾಖೆಯ ಸರ್ವರ್ ನಿಮಿಷಕ್ಕೊಮ್ಮೆ ಕೈಕೊಟ್ಟ ಕಾರಣ ನಾಗರಿಕರು ಕೆಲಸವಾಗದೆ ತೊಂದರೆ ಅನುಭವಿಸಿದ್ದಾರೆ.

ಪಿರಿಯಾಪಟ್ಟಣ ತಾಲೂಕು ಕಚೇರಿ ಸೇರಿದಂತೆ ಗ್ರಾಮ ಒನ್ ಸೇವಾ ಕೇಂದ್ರ ಹಾಗೂ ಪಿಬಿಸಿ ಕೇಂದ್ರಗಳಿಗೆ ಭೇಟಿ ನೀಡಿ ಪಡಿತರ ಕಾರ್ಡ್ ತಿದ್ದುಪಡಿ ಮಾಡಿಸಿಕೊಳ್ಳಲು ಜನರು ಕಾದಿದ್ದರು. ಆದರೆ ಮೂರು ದಿನವೂ ಸರ್ವರ್ ಸರಿಯಾಗಿ ಕೆಲಸ ಮಾಡದ ಪರಿಣಾಮ ಒಂದೋ, ಎರಡೋ ಅರ್ಜಿಗಳು ಮಾತ್ರ ಸಲ್ಲಿಕೆ ಯಶಸ್ವಿಯಾಗಿವೆ. ತಾಲೂಕಿನಲ್ಲಿ ಇದುವರೆಗೆ 30-40 ಅರ್ಜಿಗಳು ಮಾತ್ರ ಬಂದಿವೆ ಎನ್ನಲಾಗಿದೆ. ಸರ್ವರ್ ಸಮಸ್ಯೆಯಿಂದಾಗಿ ಪಡಿತರ ಚೀಟಿ ತಿದ್ದುಪಡಿಗಾಗಿ ಮಹಿಳೆಯರು, ವೃದ್ಧರು, ಸಾರ್ವಜನಿಕರು ಆನ್‌ಲೈನ್ ಕೇಂದ್ರಗಳ ಮುಂದೆ ಕಾಯ್ದು ಸುಸ್ತಾಗಿದ್ದಾರೆ. ಆಹಾರ ಇಲಾಖೆ ಹಿರಿಯ ಅಧಿಕಾರಿಗಳ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ.

ಮಹಿಳೆಯರ ಆಕ್ರೋಶ: ಗೃಹಲಕ್ಷ್ಮೀ, ಗೃಹಜ್ಯೋತಿ, ವೈದ್ಯಕೀಯ ಸೇವೆಗಳಿಗೆ ಪಡಿತರ ಚೀಟಿ ಅಗತ್ಯವಾಗಿದೆ. ಅದರಲ್ಲೂ ‘ಗೃಹಲಕ್ಷ್ಮಿ’ ಯೋಜನೆ ಪಡೆಯಲು ಪಡಿತರ ಚೀಟಿ ಅತ್ಯವಶ್ಯಕವಾಗಿದೆ. ರೇಷನ್ ಕಾರ್ಡ್‌ನಲ್ಲಿ ಮಹಿಳಾ ಸದಸ್ಯೆಯನ್ನು ಯಜಮಾನಿ ಎಂದು ಗುರುತಿಸದೇ ಇದ್ದಲ್ಲಿ, ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಹಾಕಲು ಸಾಧ್ಯವಿಲ್ಲ. ಆದರೆ ಇದನ್ನು ತಿದ್ದುಪಡಿ ಮಾಡಿಸಲು ಸಾಧ್ಯವಾಗುತ್ತಿಲ್ಲ. ಪದೇ ಪದೆ ಸರ್ವರ್ ಸಮಸ್ಯೆ ಎದುರಾಗುತ್ತಿದೆ ಎಂದು ಮಹಿಳೆಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಮೈಸೂರು ಜಿಲ್ಲೆಯಲ್ಲಿ ಪಡಿತರ ಚೀಟಿ ತಿದ್ದುಪಡಿಗಾಗಿ ಇಲಾಖೆಯು ಅ.8 ರಿಂದ 10ರವರೆಗೆ ಅವಕಾಶ ಮಾಡಿಕೊಟ್ಟಿತ್ತು. ಆದರೆ ಸರ್ವರ್ ಸಮಸ್ಯೆಯಿಂದ ಪಿರಿಯಾಪಟ್ಟಣ ತಾಲೂಕಿನಲ್ಲಿ ಕಡಿಮೆ ಮಂದಿ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಾಗಿದೆ. ಎಲ್ಲೆಡೆ ಒಂದೇ ಬಾರಿಗೆ ಅರ್ಜಿ ಹಾಕುತ್ತಿರುವ ಪರಿಣಾಮ ಸಮಸ್ಯೆ ಉಂಟಾಗಿದೆ.
ಸಣ್ಣಸ್ವಾಮಿ, ಶಿರಸ್ತೇದಾರ್, ಆಹಾರ ಇಲಾಖೆ, ಪಿರಿಯಾಪಟ್ಟಣ

ಪಡಿತರ ಕಾರ್ಡ್ ಲೋಪದೋಷ ಸರಿಪಡಿಸಲು ತಾಲೂಕು ಕಚೇರಿಗೆ ಹೋಗಿದ್ದೆ. ಆದರೆ ಸರ್ವರ್ ಸಮಸ್ಯೆಯಿಂದ ಅರ್ಜಿ ಹಾಕಲು ಸಾಧ್ಯವಾಗಲಿಲ್ಲ. ಸರ್ಕಾರ ತಿದ್ದುಪಡಿಗೆ ಅವಕಾಶ ಮಾಡಿಕೊಟ್ಟ ಮೇಲೆ ಸರ್ವರ್ ನಿರ್ವಹಣೆ ಕೂಡ ಉತ್ತಮವಾಗಿ ಮಾಡಬೇಕು.
ರಮೇಶ್, ಪಡಿತರ ಕಾರ್ಡುದಾರ, ಐಚನಹಳ್ಳಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net