

ಬೀರೂರು: ಪಡಿತರ ಚೀಟಿಯಲ್ಲಿ ತಿದ್ದುಪಡಿಗಾಗಿ ಆನ್‌ಲೈನ್ ಅಪ್ಲಿಕೇಷನ್ ಶುಕ್ರವಾರ ತೆರೆದಿದ್ದು 4 ದಿನ ಹಾಗೂ 4 ಗಂಟೆಗಳು ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಆದರೆ ಸರ್ವರ್ ಸಮಸ್ಯೆಯಿಂದ ಜನತೆ ಬಸವಳಿಯುತ್ತಿದ್ದಾರೆ.
ಮರಣ ಹೊಂದಿರುವವರ ಹೆಸರನ್ನು ಪಡಿತರ ಚೀಟಿಯಿಂದ ತೆಗೆಯುವ, ಹೊಸ ಸದಸ್ಯರನ್ನು ಸೇರ್ಪಡೆ ಮಾಡುವ, ಹೆಸರು ತಪ್ಪಾಗಿದ್ದರೆ ಸರಿಪಡಿಸಲು ಹಾಗೂ ಮನೆಯ ಯಜಮಾನಿಯಾಗುವವರ ಹೆಸರು ಸೇರ್ಪಡೆಗೆ ಆನ್‌ಲೈನ್ ಅರ್ಜಿಯನ್ನು ಕೇವಲ 4 ದಿನಗಳಿಗೆ ತೆರೆದಿದ್ದು ಆ.21 ಕೊನೆಯ ದಿನವಾಗಿರುತ್ತದೆ.
ತಪ್ಪಾಗಿರುವ ಪಡಿತರ ಚೀಟಿದಾರರು ಕಂಪ್ಯೂಟರ್ ಕೇಂದ್ರಗಳ ಮುಂದೆ ಸರತಿ ಸಾಲಿನಲ್ಲಿ ನಿಲ್ಲುತ್ತಿದ್ದಾರೆ. ಚುನಾವಣಾ ನೀತಿ ಸಂಹಿತೆ ಜಾರಿಯಾದ ಕ್ಷಣದಿಂದ ಈ ಪಡಿತರ ಚೀಟಿಯ ತಿದ್ದುಪಡಿ ರದ್ದು ಮಾಡಲಾಗಿತ್ತು, ಆದರೆ ಶುಕ್ರವಾರ ತೆರೆದ ಅರ್ಜಿಯನ್ನು ಸಲ್ಲಿಸಿ ಸರಿಪಡಿಸಿಕೊಳ್ಳಲು ಮುಂದಾಗಿದ್ದ ಜನತೆಗೆ ಸರ್ವರ್ ಸಮಸ್ಯೆ ನಿರಾಸೆ ಉಂಟುಮಾಡಿ ಮನೆಗೆ ಹಿಂದಿರುಗುವಂತೆ ಮಾಡಿತು.
ಇದು ರಾಜ್ಯ ಸರ್ಕಾರ ಜಾರಿ ಮಾಡಿರುವ ಗ್ಯಾರಂಟಿ ಯೋಜನೆಗಳ ಪೈಕಿ ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಲು ತೊಂದರೆ ಆಗಿದೆ. ಅರ್ಜಿ ಸಲ್ಲಿಸಿದಾಗ ಹೆಸರು ಬಾರದೆ ಮರಣ ಹೊಂದಿರುವ ಅತ್ತೆ ಅಥವಾ ತಾಯಿ ಹೆಸರನ್ನು ತೋರಿಸುತ್ತಿದ್ದು ಸೊಸೆಯ ಹೆಸರನ್ನು ಬದಲಾವಣೆ ಮಾಡಲು ಯಾವುದೇ ಅವಕಾಶ ಕಲ್ಪಿಸಿಲ್ಲ. ಇದು ಮಹಿಳೆಯರಿಗೆ ಬೇಸರ ಉಂಟುಮಾಡುತ್ತಿದೆ.
ಸಮಯ ವಿಸ್ತರಿಸಿ:
ಪಡಿತರ ಚೀಟಿ ತಿದ್ದುಪಡಿಗೆ ಕೇವಲ 4 ದಿನ ಅರ್ಜಿ ಸಲ್ಲಿಸಲು ಅವಕಾಶ ನೀಡಿರುವುದು ಸರಿಯಲ್ಲ. ತಿದ್ದುಪಡಿಯಾಗಬೇಕಿದ್ದ ಪಡಿತರ ಚೀಟಿಗಳು ನಮ್ಮ ಗ್ರಾಮದಲ್ಲಿ ಸಾಕಷ್ಟಿವೆ. ನನ್ನ ಮೊಮ್ಮಕ್ಕಳನ್ನು ಸೇರ್ಪಡೆ ಮಾಡಿಕೊಳ್ಳಲು ಎರಡು ದಿನದಿಂದ ಕಾಯುತ್ತಿದ್ದೇನೆ. ಆದರೆ ಸರ್ವರ್ ಸಮಸ್ಯೆಯಿಂದ ಆಗುತ್ತಿಲ್ಲ. ಆದ್ದರಿಂದ ತಿದ್ದುಪಡಿಗೆ ಇನ್ನೂ ಸ್ವಲ್ಪ ದಿನಗಳ ಕಾಲ ಕಾಲಾವಕಾಶ ನೀಡುವುದು ಸೂಕ್ತ ಎನ್ನುತ್ತಾರೆ ಕಾರೇಹಳ್ಳಿ ಲಕ್ಷ್ಮಮ್ಮ .
ಪಡಿತರ ಚೀಟಿ ತಿದ್ದುಪಡಿಗೆ ಅರ್ಜಿ ತೆರೆಯಲಾಗಿದ್ದು ಅರ್ಹರು ತಿದ್ದುಪಡಿ ಮಾಡಿಕೊಳ್ಳಬಹುದು. ರಾಜ್ಯಾದ್ಯಂತ ಅರ್ಜಿ ತೆರೆದಿರುವುದರಿಂದ ಎಲ್ಲಾ ಕಂಪ್ಯೂಟರ್ ಕೇಂದ್ರಗಳಲ್ಲಿ ಈ ಕಾರ್ಯ ನಡೆಯುತ್ತಿದೆ. ಆದರೆ ಸರ್ವರ್ ಸಮಸ್ಯೆ ಎದುರಾಗಿದೆ. ಜಿಲ್ಲಾ ಕಚೇರಿಗೆ ಸರ್ವರ್ ಸಮಸ್ಯೆ ಬಗ್ಗೆ ದೂರು ನೀಡಿ, ಇನ್ನಷ್ಟು ಕಾಲಾವಕಾಶಕ್ಕಾಗಿ ಮನವಿ ಮಾಡುತ್ತೇವೆ ಎನ್ನುತ್ತಾರೆ ಕಡೂರು ಆಹಾರ ನಿರೀಕ್ಷಕ ಶ್ರೀನಿವಾಸ್.