

ಹರಿಯಾಣ: ಇಲ್ಲಿನ ಫರಿದಬಾದ್ ನಗರದ ಮನೆಯೊಂದರಲ್ಲಿ 7ಲಕ್ಷ ರೂ. ಮೌಲ್ಯದ ಮಹಿಳಾ ಕೂದಲು ಮತ್ತು 2 ಲಕ್ಷ ರೂ ನಗದು ಕಳ್ಳತನ ಮಾಡಿದ ವಿಚಿತ್ರ ಘಟನೆಯೊಂದು ಇತ್ತೀಚಿಗೆ ನಡೆದಿದೆ.
ಸಂತ್ರಸ್ತರು ನೀಡಿದ ದೂರಿನ ಮೇರೆಗೆ ಖದೀಮರ ವಿರುದ್ಧ ಪ್ರಕರಣ ದಾಖಲಾಗಿದ್ದು, ಕೂದಲಿನ ಬೆಲೆ ಕೇಳಿದ ಪೊಲೀಸರು ಬೆರಾಗಿದ್ದಾರೆ. ಸಂತ್ರಸ್ತರು ವಿಗ್ ತಯಾರಿಕೆ ಮಾಡುತ್ತಿದ್ದು, ಅದಕ್ಕಾಗಿ ಕೂದಲನ್ನು ಕಚ್ಚ ವಸ್ತುವಾಗಿ ಬಳಕೆ ಮಾಡುತ್ತಿದ್ದರು. 150 ಕೆ.ಜಿ ಕೂದಲು(7 ಲಕ್ಷ ರೂ. ಮೌಲ್ಯ) ಜತೆಗೆ 2 ಲಕ್ಷ ರೂ. ನಗದು ಕದ್ದಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಖದೀಮರ ಕೈಚಳಕ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಮೂವರು ದುಷ್ಕರ್ಮಿಗಳು ಮೆಟ್ಟಿಲುಗಳ ಮೂಲಕ ಮನೆಗೆ ಪ್ರವೇಶಿಸಿದ್ದಾರೆ. ಕೋಣೆಯ ಬೀಗವನ್ನು ಮುರಿದು ಕೂದಲು ಮತ್ತು ನಗದು ಹಣದೊಂದಿಗೆ ಪರಾರಿಯಾಗಿರುವ ಘಟನೆಯ ಕ್ಲಿಪ್ಗಳ ವಿಡಿಯೋ ಇದೀಗ ಬಹಿರಂಗಗೊಂಡಿದೆ. ಈ ಘಟನೆಯು ಜ.14 ರಾತ್ರಿ 2:30 ರಿಂದ 3 ಗಂಟೆಯ ನಡುವೆ ನಡೆದಿದೆ ಎಂದು ವರದಿಯಾಗಿದೆ.
ವಿಗ್ ಮಾರುಕಟ್ಟೆ ವಿಸ್ತಾರಗೊಂಡಿದೆ. ಈ ಹಿನ್ನೆಲೆ ದೇಶಿ ಮತ್ತು ಅಂತರಾಷ್ಟ್ರೀಯ ಮಾರ್ಕೆಟ್ನಲ್ಲಿ ವಿಗ್ಗಳಿಗೆ ಬಹುಬೇಡಿಕೆ ಇದೆ. ಹೀಗಾಗಿ, ಕೂದಲಿನ ದರ ಅಧಿಕವಾಗಿದೆ ಎಂದು ಸಂತ್ರಸ್ತರು ತಿಳಿಸಿದ್ದಾರೆ.
ಸಿಸಿಟಿವಿ ದೃಶ್ಯಾವಳಿಗಳನ್ನು ಬಳಸಿಕೊಂಡು ಪೊಲೀಸರು ಆರೋಪಿಗಳ ಗುರುತಿನ ಪ್ರಕ್ರಿಯೆ ಆರಂಭಿಸಿದ್ದು, ಶೀಘ್ರವೇ ಆರೋಪಿಗಳನ್ನು ಬಂಧಿಸಲಾಗುವುದು ಅಧಿಕಾರಿಗಳು ಭರವಸೆ ನೀಡಿದ್ದಾರೆ.(ಏಜೆನ್ಸೀಸ್)