

ನವದೆಹಲಿ: ಕರೊನಾ ವೈರಸ್ ನಿಗ್ರಹಕ್ಕಾಗಿ ಭಾರತೀಯ ಕಂಪನಿಯೊಂದು ತಯಾರಿಸುತ್ತಿರುವ ಲಸಿಕೆ ಮಹತ್ವದ ಘಟ್ಟ ತಲುಪಿದೆ.
ಲಸಿಕೆಯನ್ನು ಈಗಾಗಲೇ ಮಾನವರ ಮೇಲೆ ಪ್ರಯೋಗಿಸಲಾಗುತ್ತಿದ್ದು, ಮೂರನೇ ಹಂತದ ಪ್ರಯೋಗ ನಡೆದಿದೆ ಎಂದು ಪುಣೆಯ ಸಿರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್ಐಐ) ಹೇಳಿದೆ.
ಎಸ್ಐಐ ಜಗತ್ತಿನಲ್ಲಿಯೇ ಲಸಿಕೆ ತಯಾರಿಸುವ ಅತಿದೊಡ್ಡ ಘಟಕವಾಗಿದೆ. ಲಂಡ್ನ ಆಕ್ಸ್ಫರ್ಡ್ ವಿವಿಯ ಸಂಶೋಧನಾ ತಂಡ ಅಭಿವೃದ್ಧಿಪಡಿಸುತ್ತಿರುವ ಲಸಿಕೆಯನ್ನು ಉತ್ಪಾದಿಸಲು ಈಗಾಗಲೇ ಒಪ್ಪಂದ ಮಾಡಿಕೊಂಡಿದೆ. ಪ್ರಯೋಗದ ಹಂತಗಳು ಪೂರ್ಣಗೊಂಡದ್ದೇ ಆದಲ್ಲಿ, ಆಕ್ಟೋಬರ್ನಿಂದಲೇ ಲಸಿಕೆ ತಯಾರಿಕೆ ಆರಂಭವಾಗಲಿದೆ. ಮೊದಲ ಆರು ತಿಂಗಳು ಪ್ರತಿತಿಂಗಳು 50 ಲಕ್ಷ ಡೋಸ್ ಲಸಿಕೆಗಳನ್ನು ಉತ್ಪಾದಿಸಲಾಗುವುದು ನಂತರದ ಆರು ತಿಂಗಳು ಪ್ರತಿತಿಂಗಳು 1 ಕೋಟಿ ಡೋಸ್ ಲಸಿಕೆ ಮಾರುಕಟ್ಟೆಗೆ ಬಿಡುಗಡೆಯಾಗಲಿದೆ ಎಂದು ಎಸ್ಐಐ ಮುಖ್ಯಸ್ಥ ಅದಾರ್ ಪೂನಾವಾಲಾ ಹೇಳಿದ್ದಾರೆ.
ಈ ನಡುವೆ, ಎಸ್ಐಐ ಅಭಿವೃದ್ಧಿಪಡಿಸುತ್ತಿರುವ ಲಸಿಕೆಯನ್ನು ಪುಣೆಯ ನಾಯ್ಡು ಆಸ್ಪತ್ರೆಯಲ್ಲಿರುವ ಕರೊನಾ ರೋಗಿಗಳ ಮೇಲೆ ಪ್ರಯೋಗಿಸಲಾಗಿದೆ. ಕಳೆದ 10 ದಿನಗಳಿಂದ ಈ ಕಾರ್ಯ ನಡೆಯುತ್ತಿದೆ. ಕರೊನಾ ಸೋಂಕಿತರು, ಶಂಕಿತರು, ರೋಗದ ಗುಣಲಕ್ಷಣ ಇಲ್ಲದವರು ಹಾಗೂ ಕೋವಿಡ್ಗೆ ತುತ್ತಾದವರ ಮೇಲೆ ಲಸಿಕೆಯನ್ನು ಪ್ರಯೋಗಿಸಲಾಗಿದೆ. ಅಧ್ಯಯನ ನಡೆಯುತ್ತಿದ್ದು, ಅಂತಿಮ ಫಲಿತಾಂಶಕ್ಕೂ ಮುನ್ನ ಹಲವು ಮಾಹಿತಿಗಳನ್ನು ಕಲೆ ಹಾಕಬೇಕಾಗಿದೆ ಎಂದು ಎಸ್ಐಐ ತಜ್ಞರು ಮಾಹಿತಿ ನೀಡಿದ್ದಾರೆ.
ಕರೊನಾ ವಿರುದ್ಧ ಹೋರಾಟಕ್ಕಾಗಿ ಅಭಿವೃದ್ಧಿಪಡಿಸುವ ಯಾವ ಲಸಿಕೆಗೂ ಪೇಟೆಂಟ್ ಪಡೆಯುವುದಿಲ್ಲ ಎಸ್ಐಐ ಸ್ಪಷ್ಟಪಡಿಸಿದೆ. ಇದನ್ನು ಯಾರೂ ಬೇಕಾದರೂ ಉತ್ಪಾದಿಸಿ ಮಾರಾಟ ಮಾಡಬಹುದು. ಭಾರತದಲ್ಲಷ್ಟೇ ಅಲ್ಲ, ವಿಶ್ವದ ಯಾವುದೇ ಭಾಗದವರೂ ಕೂಡ ಇದನ್ನು ಉತ್ಪಾದಿಸಿ ಮಾರಾಟ ಮಾಡಲು ಹಕ್ಕು ಹೊಂದಿರಲಿದ್ದಾರೆ ಎಂದು ಪೂನಾವಾಲಾ ಹೇಳಿದ್ದಾರೆ.