ಚೀನಾ ಗಡಿಯಲ್ಲಿ ಪರಿಸ್ಥಿತಿ ಬಿಗಡಾಯಿಸಿದೆ; ಸರ್ಕಾರದ ಮಟ್ಟದಲ್ಲಿಯೇ ನಡೆಯಬೇಕಿದೆ ಚರ್ಚೆ; ಜೈಶಂಕರ್​ ಕಳವಳ

jaishankar
Published on

ನವದೆಹಲಿ: ಚೀನಾದೊಂದಿಗಿನ ದ್ವೀಪಕ್ಷೀಯ ಮಾತುಕತೆಗೂ ಮುನ್ನ ಅದರ ಬಾಹ್ಯ ಸ್ವರೂಪದ ಬಗ್ಗೆ ವಿಶ್ಲೇಷಿಸಿರುವ ವಿದೇಶಾಂಗ ಸಚಿವ ಎಸ್​. ಜೈಶಂಕರ್​, ಚೀನಾದೊಂದಿಗಿನ ಬಾಂಧವ್ಯವನ್ನು ಗಡಿಯಲ್ಲಿರುವ ಪರಿಸ್ಥಿತಿಯಿಂದ ಪ್ರತ್ಯೇಕಿಸಿ ನೋಡಲಾಗದು ಎಂದು ಹೇಳಿದ್ದಾರೆ.

ವಾಸ್ತವ ಗಡಿ ರೇಖೆಯುದ್ದಕ್ಕೂ ಪರಿಸ್ಥಿತಿ ತುಂಬಾ ಗಂಭೀರವಾಗಿದೆ. ಸರ್ಕಾರದ ಮಟ್ಟದಲ್ಲಿಯೇ ಅತ್ಯಂತ ಆಳವಾಗಿ ಚರ್ಚೆಗಳು ನಡೆಯಬೇಕಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಮಾಸ್ಕೋದಲ್ಲಿ ನಡೆಯಲಿರುವ ಶಾಂಘೈ ಸಹಕಾರ ಸಂಘಟನೆಯ ವಿದೇಶಾಂಗ ಸಚಿವರ ಸಭೆಗೆ ತೆರಳುವ ಮುನ್ನ ಈ ಹೇಳಿಕೆ ನೀಡಿದ್ದಾರೆ. ಅಲ್ಲಿ ಚೀನಾದ ವಿದೇಶಾಂಗ ಸಚಿವರೊಂದಿಗೆ ಮುಖಾಮುಖಿ ಮಾತುಕತೆ ನಡೆಸಲಿದ್ದಾರೆ.

ಒಂದು ವೇಳೆ ಗಡಿಯಲ್ಲಿ ಶಾಂತಿ, ನೆಮ್ಮದಿ ನೆಲೆಸಿರದಿದ್ದರೆ ಉಳಿದ ಸಂಬಂಧಗಳು ಕೂಡ ಅದೇ ಹಾದಿಯಲ್ಲಿ ಸಾಗುತ್ತವೆ. ಕಳೆದ 30 ವರ್ಷಗಳಿಂದ ಗಡಿಯಲ್ಲಿ ಸಮಸ್ಯೆಗಳೂ ಇದ್ದವು ಜತೆಗೆ, ಶಾಂತಿಯುತ ವಾತಾವರಣವಿತ್ತು. ಹೀಗಾಗಿಯೇ ಚೀನಾ ಭಾರತದ ಎರಡನೇ ಅತಿ ದೊಡ್ಡ ವಹಿವಾಟು ಪಾಲುದಾರ ರಾಷ್ಟ್ರವಾಗಿ ಗುರುತಿಸಿಕೊಂಡಿದೆ ಎಂದರು.

ಎರಡು ರಾಷ್ಟ್ರಗಳ ನಡುವೆ 1993 ರಿಂದ ಹಲವು ಒಪ್ಪಂದಗಳಾಗಿವೆ. ಗಡಿಯಲ್ಲಿ ಅತ್ಯಂತ ಕಡಿಮೆ ಸೇನಾ ಜಮಾವಣೆ ಇರಬೇಕು ಎಂದು ಈ ಒಪ್ಪಂದಗಳಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ನಂತರದ ಒಪ್ಪಂದಗಳಲ್ಲಿ ಸೇನೆ ಯಾವ ರೀತಿ ವರ್ತಿಸಬೇಕು ಎಂಬುದನ್ನು ಸೂಚಿಸಲಾಗಿದೆ ಎಂದು ಹೇಳಿದರು.

ಪ್ರಸ್ತುತ ಗಡಿಯಲ್ಲಿ ಭಾರಿ ಸೂಕ್ಷ್ಮ ಪರಿಸ್ಥಿತಿಯಿದೆ. ಮೇ ನಂತರದಲ್ಲಿ ಇದು ಮುಂದುವರಿದೇ ಇದೆ. ಹೀಗಾಗಿ ಇದರ ಪರಿಹಾರಕ್ಕೆ ಸರ್ಕಾರದ ಮಟ್ಟದಲ್ಲಿಯೇ ಚರ್ಚೆಗಳು ನಡೆಯಬೇಕಿದೆ ಎಂದು ಅವರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net