

ಬೆಂಗಳೂರು: ಕೇರಳದಲ್ಲಿ ಬಕ್ರೀದ್, ಓಣಂ ಹಬ್ಬದ ಬಳಿಕ ಕರೊನಾ ಹೆಚ್ಚಳ ಹಿನ್ನೆಲೆಯಲ್ಲಿ ಕರ್ನಾಟಕ ಸೇರಿದಂತೆ ಎಲ್ಲ ರಾಜ್ಯಗಳೂ ಮುಂಬರುವ ಸಾಲು ಸಾಲು ಹಬ್ಬಗಳ ವೇಳೆ ಎಚ್ಚರ ವಹಿಸುವಂತೆ ಕೇಂದ್ರ ಸರ್ಕಾರ ನಿರ್ದೇಶನ ನೀಡಿದೆ. ಕರೊನಾ ಲಸಿಕೆ ನೀಡಿಕೆ ಪ್ರಗತಿ ಕುರಿತು ನಡೆದ ಎಲ್ಲ ರಾಜ್ಯಗಳ ಆರೋಗ್ಯಾಧಿಕಾರಿಗಳ ಉನ್ನತ ಮಟ್ಟದ ಸಭೆಯಲ್ಲಿ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಅನೇಕ ಸೂಚನೆಗಳನ್ನು ನೀಡಿದ್ದಾರೆ. ಲಸಿಕೆ ನೀಡುವಿಕೆಯನ್ನು ತೀವ್ರಗೊಳಿಸುವುದರ ಜತೆಗೆ ಮುಂಬರುವ ಹಬ್ಬಗಳ ಸಂದರ್ಭದಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚಳವಾಗುವ ಅಪಾಯವನ್ನು ಗಮನಕ್ಕೆ ತಂದಿದ್ದಾರೆ. ಸೋಂಕು ವ್ಯಾಪಿಸುವುದನ್ನು ತಡೆಯಲು ಅವಶ್ಯಕ ಜಾಗೃತಿ, ಔಷಧ ದಾಸ್ತಾನು, ವೈದ್ಯಕೀಯ ವ್ಯವಸ್ಥೆ ಸಜ್ಜುಗೊಳಿಸುವುದರ ಜತೆಗೆ, ಜನಸಾಮಾನ್ಯರು ಕೋವಿಡ್ ನಿಯಂತ್ರಣ ನಿಯಮಾವಳಿಗಳನ್ನು ಮೀರದಂತೆ ‘ಅಗತ್ಯವಿರುವ ಎಲ್ಲ ಕ್ರಮ’ಗಳನ್ನೂ ಕೈಗೊಳ್ಳಿ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.
2ನೇ ಡೋಸ್ಗೆ ಜಿಲ್ಲಾವಾರು ಯೋಜನೆ: ಜಿಲ್ಲಾವಾರು ಲಸಿಕೆ ನೀಡಿಕೆ ಯೋಜನೆ ರೂಪಿಸಿ, ಅರ್ಹರಿಗೆ ಎರಡನೇ ಡೋಸ್ ಲಸಿಕೆ ನೀಡಬೇಕು ಎಂದು ಕೇಂದ್ರ ಸರ್ಕಾರ ಸೂಚಿಸಿದೆ. ಇದಕ್ಕಾಗಿ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ರಾಜ್ಯದ ಸರಾಸರಿಗಿಂತ ಕಡಿಮೆ ಲಸಿಕೆ ನೀಡಿರುವ ಜಿಲ್ಲೆಗಳನ್ನು ಗುರುತಿಸಿ ಅಲ್ಲಿ ವ್ಯಾಪಕವಾಗಿ ಲಸಿಕೆ ಕಾರ್ಯಕ್ರಮ ನಡೆಸಬೇಕು ಎಂದು ತಿಳಿಸಲಾಗಿದೆ. ರಾಜ್ಯದಲ್ಲಿ ಸರಾಸರಿ ಶೇ.52 ರಷ್ಟು ಲಸಿಕೆ ನೀಡಲಾಗಿದೆ. ಬೆಂಗಳೂರು ನಗರ(ಶೇ.70.51), ಚಾಮರಾಜನಗರ(53.56), ದಕ್ಷಿಣ ಕನ್ನಡ(60.58), ಮೈಸೂರು (61.29), ರಾಮನಗರ(65.17), ಉಡುಪಿ (69.49) ಸೇರಿ 15 ಜಿಲ್ಲೆಗಳಲ್ಲಿ ಮಾತ್ರ ರಾಜ್ಯದ ಸರಾಸರಿಗಿಂತ ಹೆಚ್ಚಿದ್ದು, ಉಳಿದ ಜಿಲ್ಲೆಗಳು ಸರಾಸರಿಗಿಂತ ಕೆಳಗಿವೆ.
ಹೆಚ್ಚುವರಿ ಔಷಧ ದಾಸ್ತಾನಿಗೆ ಸೂಚನೆ: ಎಲ್ಲ ರಾಜ್ಯಗಳಲ್ಲೂ ಮಕ್ಕಳ ಚಿಕಿತ್ಸಾ ಕೇಂದ್ರ ಸ್ಥಾಪನೆ, ಐಸಿಯು ಸ್ಥಾಪನೆ, ಆಕ್ಸಿಜನ್ ಸಂಗ್ರಹ ವ್ಯವಸ್ಥೆ ಸೇರಿ ಅವಶ್ಯಕ ಕಾರ್ಯಗಳಿಗೆ 23,123 ಕೊಟಿ ರೂ. ಮೊತ್ತದ ಕೋವಿಡ್ ರೆಸ್ಪಾನ್ಸ್ ಪ್ಯಾಕೇಜ್-2 ಅನ್ನು ಕೇಂದ್ರ ಸರ್ಕಾರ ಘೋಷಣೆ ಮಾಡಿದೆ. ಇದರಲ್ಲಿ ಕೇಂದ್ರ ಸರ್ಕಾರದ ಪಾಲಿನ 15 ಸಾವಿರ ಕೋಟಿ ರೂ.ನಲ್ಲಿ ಶೇ.50 ಹಣವನ್ನು ರಾಜ್ಯಗಳಿಗೆ ನೀಡಲಾಗಿದೆ.
ಕೋವಿಡ್-19 ನಿಯಂತ್ರಣಕ್ಕೆ ಅತ್ಯವಶ್ಯಕ ಔಷಧಗಳನ್ನು ಹೆಚ್ಚುವರಿ ದಾಸ್ತಾನು ಇರಿಸಿಕೊಳ್ಳಲು ಈ ಹಣವನ್ನು ಬಳಸಬೇಕು. ಅತ್ಯವಶ್ಯಕ ಔಷಧಗಳು ಉತ್ಪಾದನೆಯಾದ ಕೂಡಲೇ ತಪಾಸಣೆಗೆ ಒಳಪಟ್ಟು ಗುಣಮಟ್ಟ ಖಾತ್ರಿಯಾಗಬೇಕು. ಹಾಗಾಗಿ ಉತ್ಪಾದನೆಯಾದ 2-4 ವಾರದ ನಂತರವಷ್ಟೆ ರಾಜ್ಯಗಳಿಗೆ ಇವು ಸಿಗುತ್ತವೆ. ಅಂತಿಮ ಕ್ಷಣದಲ್ಲಿ ಖರೀದಿಗೆ ಮುಂದಾಗಿ ಸಂಕಷ್ಟ ಎದುರಿಸುವ ಬದಲಿಗೆ ಕಡಿಮೆ ಪ್ರಕರಣಗಳಿರುವಾಗಲೇ ಔಷಧಗಳನ್ನು ದಾಸ್ತಾನು ಇರಿಸಿಕೊಳ್ಳಬೇಕು ಎಂದು ಕೇಂದ್ರ ಸೂಚನೆ ನೀಡಿದೆ.
ಅಂತಾರಾಜ್ಯ ಪ್ರಯಾಣ, ರೈಲು ಮತ್ತು ವಿಮಾನಯಾನದ ಕುರಿತಂತೆ ಏ.25ರಂದು ಹೊರಡಿಸಿದ್ದ ಮಾರ್ಗಸೂಚಿಗೆ ಹೆಚ್ಚುವರಿಯಾಗಿ ಹೊಸ ಮಾರ್ಗಸೂಚಿಯನ್ನು ಕೇಂದ್ರ ಸರ್ಕಾರ ಗುರುವಾರ ಪ್ರಕಟಿಸಿದೆ. ಪ್ರಯಾಣಿಕರು, ಸಾರಿಗೆ ಸಂಸ್ಥೆಗಳ ಜತೆಗೆ ರಾಜ್ಯ ಸರ್ಕಾರಗಳಿಗೆ ಸೂಚನೆಗಳನ್ನು ನೀಡಲಾಗಿದೆ. ಅಂತಾರಾಜ್ಯ ಪ್ರಯಾಣಕ್ಕೆ ಕೇಂದ್ರದಿಂದ ಯಾವುದೇ ನಿರ್ಬಂಧ ಇಲ್ಲ, ರಾಜ್ಯಗಳು ಪರಿಸ್ಥಿತಿಗೆ ಅನುಗುಣವಾಗಿ ಕ್ರಮ ಕೈಗೊಳ್ಳಲು ಸ್ವತಂತ್ರವಾಗಿವೆ. ಕೆಲವು ರಾಜ್ಯಗಳು ಇತರೆ ರಾಜ್ಯಗಳಿಂದ ಬರುವವರಿಗೆ ಆರ್ಟಿಪಿಸಿಆರ್ ನೆಗೆಟಿವ್ ವರದಿಯನ್ನು ಕಡ್ಡಾಯಗೊಳಿಸಿವೆ. ಬೇರೆ ರಾಜ್ಯದಿಂದ ಆಗಮಿಸುವವರು ಎರಡನೇ ಲಸಿಕೆ ಪಡೆದು 15 ದಿನ ದಾಟಿದ್ದರೆ, ಅಂಥವರು ಸೋಂಕಿನ ಗುಣಲಕ್ಷಣ ಹೊಂದಿರದಿದ್ದರೆ, ಎರಡನೇ ಲಸಿಕೆ ಪಡೆದ ಅಧಿಕೃತ ಪ್ರಮಾಣಪತ್ರದ ಸಲ್ಲಿಕೆ ಮೂಲಕ ಅಂಥವರಿಗೆ ಆರ್ಟಿಪಿಸಿಆರ್ ನೆಗೆಟಿವ್ ವರದಿಯಿಂದ ವಿನಾಯಿತಿ ನೀಡಬಹುದು ಎಂದು ತಿಳಿಸಲಾಗಿದೆ. ಆದರೆ ಅಂತಿಮ ನಿರ್ಧಾರವನ್ನು ರಾಜ್ಯಗಳಿಗೆ ಬಿಡಲಾಗಿದೆ.