More

    150 ಮಿಡಿ ಮಾವಿನ ತಳಿ ರೂಪಿಸಿದ ಅಪರೂಪದ ರೈತ ಇವರು…

    | ನಾಗರಾಜ ಮತ್ತಿಗಾರ
    ಸುಬ್ಬರಾವ್​ ಹೆಗಡೆ ಅಂದರೆ ಬೇಳೂರು ಸುಬ್ಬಣ್ಣ ಯಾವುದಾದರೂ ಸಮಾರಂಭಕ್ಕೆ ಬರುತ್ತಾರೆಂದರೆ ಅವರ ವಾಹನದಲ್ಲಿ ನಾಲ್ಕಾರು ಕಸಿ ಕಟ್ಟಿದ ಅಪ್ಪೆ ಸಸಿಗಳು (ಮಿಡಿ ಮಾವಿನ ಸಸಿ) ಅಥವಾ ಉತ್ತಮ ತಳಿಯ ಹಲಸಿನ ಸಸಿ ಇದ್ದೇ ಇರುತ್ತವೆ. ಯಾರಿಗಾದರೂ ಉಡುಗೊರೆ ಕೊಡುವುದಾದರೆ ಸುಬ್ಬಣ್ಣ ನೀಡುವುದು ಕಸಿ ಕಟ್ಟಿದ ಉತ್ತಮ ತಳಿಯ ಸಸಿಯನ್ನು. ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಬೇಳೂರು ಹೆಗಡೆ ಸುಬ್ಬರಾವ್​ ಅವರು ಅಪ್ಪೆ ಮಿಡಿ ತಳಿಗಳ ಸಂರಕ್ಷಕ ಎಂದೇ ಖ್ಯಾತಿ.

    ಸುಬ್ಬರಾವ್​ ಅವರ ಮನೆ ಅಂಗಳ ಪ್ರವೇಶಿಸಿದರೆ ಸಸ್ಯಲೋಕಕ್ಕೆ ಕಾಲಿಟ್ಟ ಅನುಭವ ಆಗುತ್ತದೆ. ಅವರ ಸಸ್ಯಗಳ ಮೇಲಿನ ಪ್ರೀತಿ ಅನಾವರಣ ಆಗುವುದೇ ಅಲ್ಲಿಂದ. ಸುಮಾರು 65 ವರ್ಷಗಳಿಂದ ಗಿಡ, ಮರ, ಹೂವು, ಹಣ್ಣುಗಳ ಗಿಡದೊಂದಿಗೆ ಒಡನಾಟ. ‘ನಾವು ಯಾವ ಕೃಷಿಯನ್ನು ಮಾಡುತ್ತೇವೋ ಆ ಕೃಷಿಯ ಬಗ್ಗೆ ಸರಿಯಾಗಿ ತಿಳಿದುಕೊಳ್ಳಬೇಕು. ಸಸ್ಯಗಳ ಪ್ರಕೃತಿಯನ್ನು ಅರಿಯಬೇಕು. ಹಾಗಾದರೆ ಮಾತ್ರ ಅವು ನಮಗೆ ಬೇಕಾದ ಹಾಗೆ ಬೆಳೆಯುತ್ತವೆ’ ಎಂಬ ತತ್ವವನ್ನು ಅಳವಡಿಕೊಂಡಿರುವ ವ್ಯಕ್ತಿ ಸುಬ್ಬರಾವ್​.

    ಹೂವಿನ ಕುರಿತು ಆಸಕ್ತಿ

    ಸುಬ್ಬಣ್ಣ ಯುವಕರಾಗಿರುವ ಸಮಯದಲ್ಲಿ ಒಮ್ಮೆ ಮೈಸೂರಿಗೆ ಹೋಗಿದ್ದರಂತೆ. ಕೆಆರ್​​ಎಸ್ ಉದ್ಯಾನವನದಲ್ಲಿ ದಸರಾ ಸಮಯದಲ್ಲೇ ಎಲ್ಲ ಹೂವು ಅರಳಿರುವುದು ಕಂಡು ಸೋಜಿಗರಾದರಂತೆ. ಊರಿಗೆ ಬಂದವರೇ ತಾವೇ ಏಕೆ ಒಂದು ಚಿಕ್ಕ ಉದ್ಯಾನ ಮಾಡಬಾರದು ಎಂದು ಯೋಚಿಸಿ, ಹೂವಿನ ಬೀಜ ಪೂರೈಕೆ ಮಾಡುವ ಕಂಪನಿಗಳೊಂದಿಗೆ ಪತ್ರ ವ್ಯವಹಾರ ಮಾಡಿ ಕೃಷಿ ಮಾಡಿದರು. ಆಸುಪಾಸಿನ ಊರಿನವರು ಆಗಮಿಸಿ ಇವರು ಮಾಡಿದ ಉದ್ಯಾನದ ಸೊಬಗನ್ನು ಸವಿದು ಹೋಗುತ್ತಿದ್ದರು. ಅಲ್ಲಿಂದ ಆರಂಭವಾದ ವಿವಿಧ ಬಗೆಯ ಕೃಷಿ ಇನ್ನೂ ಮುಂದುವರಿಯುತ್ತಿದೆ.

    ಅಪ್ಪೆ, ಹಲಸು

    ಹೊಟ್ಟೆಯೂ ತುಂಬ ಬೇಕು; ನಾಲಿಗೆಯ ರುಚಿಯೂ ನೀಗಬೇಕು ಎಂಬ ದಿಸೆಯಲ್ಲಿ ಸುಬ್ಬಣ್ಣ ಅವರ ಆಸಕ್ತಿ ತರ ತರಹದ ಮಾವು, ಅಪ್ಪೆ ತಳಿಗಳ ಹುಡುಕಾಟಕ್ಕೆ ತೊಡಗಿಸಿತು. ಅದರ ಪರಿಣಾಮವಾಗಿ ಇಂದು ಸುಬ್ಬಣ್ಣ ಅವರ ಮನೆಯ ಹಿತ್ತಲಿನಲ್ಲಿ 150 ಅಪ್ಪೆ ತಳಿಗಳು ಕಂಗೊಳಿಸುತ್ತಿವೆ, ಫಸಲನ್ನು ನೀಡುತ್ತಿವೆ. ಯಾವ ಯಾವ ಊರಿನಿಂದ ಯಾವ ತಳಿ ತಂದಿದ್ದಾರೋ ಅದಕ್ಕೆ ಅದೇ ಊರಿನ ಹೆಸರು ಇಟ್ಟಿದ್ದಾರೆ. ಅಲ್ಲದೆ, ಕೆಳದಿ ಮಹಾರಾಜ್ ಎನ್ನುವ ಬಕ್ಕೆ ಹಲಸಿನ ತಳಿಯನ್ನು ಸಂರಕ್ಷಿಸಿದ್ದಾರೆ. ಆಸಕ್ತಿಯಿಂದ ಬಂದವರಿಗೆ ಅಪ್ಪೆ ಕಸಿ ಮಾಡಲು ಪ್ರೀತಿಯಿಂದ ಕುಡಿಯನ್ನು ನೀಡುತ್ತಾರೆ. ಇದೂ ಒಂದು ರೀತಿಯ ಸಮಾಜ ಸೇವೆ ಎನ್ನುವುದು ಸುಬ್ಬಣ್ಣ ಅವರ ಭಾವನೆ.

    ಬೊನ್ಸಾಯ್ ಬೆಡಗು

    ಸುಬ್ಬಣ್ಣ ಅವರ ಮನೆಯಂಗಳದ ವಿಶೇಷ ಅಂದರೆ ತುಳಸಿ ಕಟ್ಟೆ ಸುತ್ತ ಇರುವ ಬೊನ್ಸಾಯ್ ಮರಗಳು. ಜೀರಿಗೆ ಅಪ್ಪೆ, ಆ್ಯಪಲ್ ರಾಜಾ ಮಾವು, ಬುಶ್ ಪೆಪ್ಪರ್ (ಗೊಂಚಲು ಕಾಳುಮೆಣಸು), ಕೆಜಿ ಪೇರಲೆ, ಲಿಂಬು, ಸಂಪಿಗೆ, ಮರಗಳು ಫಲ ಬಂದು ನಿಂತಾಗ ನೋಡುವುದೇ ಕಣ್ಣಿಗೆ ಮಹದಾನಂದ.

    ಕಸಿ ಪರಿಣತಿ, ಪಾಠದ ಮೂಲಕ ಪ್ರಚಾರ

    ಸುಬ್ಬರಾವ್ ಅವರು ಮರ-ಗಿಡಗಳಿಗೆ ಕಸಿ ಕಟ್ಟುವುದರಲ್ಲಿ ಪರಿಣತರು. ಮೂವತ್ತೈದು ವರ್ಷಗಳಿಂದ ಅವರು ಕಸಿ ಕಟ್ಟುತ್ತಿದ್ದಾರೆ. ಮಾವು, ಬದನೆ, ಪೇರಲೆ, ಹಲಸು ಇತ್ಯಾದಿ ಗಿಡ-ಮರಗಳಿಗೆ ಕಸಿ ಕಟ್ಟಿ ಗುಣಮಟ್ಟದ ಫಸಲು ಪಡೆಯುತ್ತಿದ್ದಾರೆ. ಸುಬ್ಬರಾವ್ ಅವರ ಪತ್ನಿ ಭಾಗಿರಥಿ ಅವರೂ ಕೃಷಿಯಲ್ಲಿ ತುಂಬಾ ಆಸಕ್ತಿ ಇರುವವರು ಮತ್ತು ಕಸಿತಜ್ಞರು. ಇವರು ಸುಮಾರು ಸಾವಿರ ಮಹಿಳೆಯರಿಗೆ ಕಸಿ ಕಟ್ಟುವ ಕುರಿತು ತರಬೇತಿ ನೀಡಿದ್ದಾರೆ. ಸುಬ್ಬಣ್ಣ ಅನೇಕ ಶಾಲೆ-ಕಾಲೇಜುಗಳಲ್ಲಿ ಕಸಿ ಮತ್ತು ಅಪ್ಪೆ, ಮಾವು, ಹಲಸಿನ ತಳಿಗಳ ಕುರಿತು ಉಪನ್ಯಾಸ ನೀಡಿದ್ದಾರೆ. ವರ್ಷದಲ್ಲಿ ನೂರಾರು ಜನ ಇವರ ಮನೆಗೆ ಬಂದು ಕಸಿ ಕಟ್ಟುವ ಕುರಿತು ಪಾಠ ಕಲಿತು ಹೋಗುತ್ತಾರೆ.

    68 ವರ್ಷವಾದರೂ ಕೆಡದ ಜೇನುತುಪ್ಪ

    ಸುಬ್ಬಣ್ಣ ಅವರಿಗೆ 1953ನೇ ಇಸವಿಯಿಂದಲೂ ಜೇನು ಕೃಷಿ ಕುರಿತು ಆಸಕ್ತಿ. ಅಂದು ಕಮ್ಯೂನಿಟಿ ಫಾರ್ಮಿಂಗ್ ಯೋಜನೆಯಲ್ಲಿ ಎರಡು ಪೆಟ್ಟಿಗೆಯಲ್ಲಿ ಜೇನು ಸಾಕಲಿಕ್ಕೆ ಆರಂಭಿಸಿದರು. ಅಂದು ಅವರು ಸಂಗ್ರಹಿಸಿದ ಜೇನುತುಪ್ಪವನ್ನು ಇಂದಿಗೂ ಕಾಪಾಡಿಕೊಂಡು ಬಂದಿದ್ದಾರೆ. ಒಂದು ಬಾಟಲಿ ಜೇನುತುಪ್ಪಕ್ಕೆ ಈಗ 68 ವರ್ಷವಾಗಿದೆ. ಅದು ಇನ್ನೂ ಕೆಡದೆ ಇರುವುದು ಆಶ್ಚರ್ಯದ ವಿಷಯ. ಇಂದಿಗೂ ಜೇನುಪೆಟ್ಟಿಗೆ ಇವರಲ್ಲಿ ಇದೆ.

    ಸುಬ್ಬಣ್ಣ ಅವರ ಕೃಷಿ ಆಸಕ್ತಿ, ಸಾಧನೆ ಗಮನಿಸಿದ ಅನೇಕ ಸಂಘ ಸಂಸ್ಥೆಗಳು ಸನ್ಮಾನಿಸಿವೆ‌. ತೋಟಗಾರಿಕೆ ಇಲಾಖೆಯವರು ವಿಶೇಷವಾಗಿ ಪರಿಗಣಿಸಿ ಗೌರವಿಸಿದ್ದಾರೆ. ಹವ್ಯಕ ಮಹಾಸಭಾದವರು ಹವ್ಯಕ ರತ್ನ ಪುರಸ್ಕಾರ ನೀಡಿದ್ದಾರೆ. 84ರ ಪ್ರಾಯವಾದರೂ ಸುಬ್ಬಣ್ಣ (9740864168) ಅವರ ಕೃಷಿ ಆಸಕ್ತಿ ಕಿಂಚಿತ್ತೂ ಕಡಿಮೆ ಆಗಲಿಲ್ಲ.

    ಫ್ರೀ ಕೊಟ್ರೂ ಊಟ-ತಿಂಡಿ-ನೀರು ಏನೂ ಬೇಡ ಎಂದು ಹೇಳಿ ಸಿಕ್ಕಿಬಿದ್ದ ಸ್ಮಗ್ಲರ್; ಹೊಟ್ಟೆಯಲ್ಲಿತ್ತು 11 ಕೋಟಿ ರೂ. ಮೌಲ್ಯದ ಡ್ರಗ್ಸ್

    ಇವರು ಅಂಥಿಂಥ ಕಳ್ಳರಲ್ಲ: ಇವರ ಬಳಿ ಇತ್ತು ಕೋಟಿ ರೂಪಾಯಿ ಮೌಲ್ಯದ ಪುರಾತನ ರತ್ನ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts