

ಮುಂಬೈ: ಲಾರಿ ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಖ್ಯಾತ ಸೀರಿಯಲ್ ನಟರೊಬ್ಬರು (Serial Actor) ಮೃತಪಟ್ಟಿರುವ ಘಟನೆ ಮುಂಬೈನ ಜೋಗೇಶ್ವರಿಯಲ್ಲಿ ನಡೆದಿದೆ. ಮೃತರನ್ನು ಅಮನ್ ಜೈಸ್ವಾಲ್ (23) ಎಂದು ಗುರುತಿಸಲಾಗಿದೆ.
ಅಮನ್ ಜೈಸ್ವಾಲ್ ಹಿಂದಿ ಧಾರಾವಾಹಿ ಧರತಿಪುತ್ರ ನಂದಿನಿ ಎಂಬ ಧಾರಾವಾಹಿಯಲ್ಲಿ ನಟಿಸಿ ಕಿರುತೆರೆ ಲೋಕದಲ್ಲಿ ಖ್ಯಾತಿ ಗಳಿಸಿದ್ದರು. ಇವರ ಸಾವಿಗೆ ಸೀರಿಯಲ್ ಹಾಗೂ ಚಲನಚಿತ್ರ ನಟರು ಕಂಬನಿ ಮಿಡಿದಿದ್ದಾರೆ.
ಘಟನೆ ಕುರಿತು ಮಾಹಿತಿ ನೀಡಿರುವ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ಜೋಗೇಶ್ವರಿ ಪೂರ್ವ ವ್ಯಾಪ್ತಿಗೆ ಬರುವ ಹಿಲ್ ಪಾರ್ಕ್ ರೋಡ್ನಲ್ಲಿ ಅಪಘಾತ ನಡೆದಿದ್ದು, ಬೈಕ್ಗೆ ಲಾರಿ ಗುದ್ದಿದ ಪರಿಣಾಮ ದುರ್ಘಟನೆ ಸಂಭವಿಸಿದೆ. ಗಾಯಾಳುವನ್ನು ಕೂಡಲೇ ಟ್ರಾಮಾ ಕೇರ್ಗೆ ದಾಖಲಿಸಲಾಯಿತಾದರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಅಪಘಾತ ಸಂಬಂಧ ಲಾರಿ ಹಾಗೂ ಚಾಲಕನನ್ನು ವಶಕ್ಕೆ ಪಡೆಯಲಾಗಿದ್ದು, ವಿಚಾರಣೆಗೆ ಒಳಪಡಿಸಲಾಗಿದೆ ಎಂದು ತಿಳಿಸಿದ್ದಾರೆ.