ಮೈಸೂರು: ವೀರಶೈವ ಲಿಂಗಾಯತ ಸಮುದಾಯದ ಯುವಜನರನ್ನು ಉದ್ಯಮಿಗಳಾಗಿ ರೂಪಿಸಲು ಹಾಗೂ ಉದ್ಯಮಿಗಳು, ವೃತ್ತಿಪರರನ್ನು ಒಂದು ವೇದಿಕೆ ಕರೆತಂದು ಯುವಜನರಿಗೆ ಮಾರ್ಗದರ್ಶನ ನೀಡುವ ಸಲುವಾಗಿ ‘ವಿಜಯಾನಂದ ಟ್ರಾವೆಲ್ಸ್’ ಪ್ರಸ್ತುತಿಯಲ್ಲಿ ಅಂತಾರಾಷ್ಟ್ರೀಯ ಲಿಂಗಾಯತ ಯೂತ್ ಫೋರಂ ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಕನ್ನಡದ ನಂ.1 ದಿನಪತ್ರಿಕೆ ‘ವಿಜಯವಾಣಿ’ ಮಾಧ್ಯಮ ಸಹಯೋಗದೊಂದಿಗೆ ಆಯೋಜಿಸಿರುವ ‘ವೀರಶೈವ ಲಿಂಗಾಯತ ಗ್ಲೋಬಲ್ ಬಿಜಿನೆಸ್ ಕಾನ್ಕ್ಲೇವ್’ ಅಪಾರ ಸಂಖ್ಯೆಯಲ್ಲಿ ಜನರನ್ನು ಆಕರ್ಷಿಸುತ್ತಿದೆ.
ಕಾನ್ಕ್ಲೇವ್ನಲ್ಲಿ 200ಕ್ಕೂ ಹೆಚ್ಚು ಮಳಿಗೆಗಳನ್ನು ತೆರೆಯಲಾಗಿದೆ. ಸಣ್ಣ ಕೈಗಾರಿಕೆ, ಗುಡಿ ಕೈಗಾರಿಕೆ, ರಿಯಲ್ ಎಸ್ಟೇಟ್, ಕಟ್ಟಡ, ಬಂಡವಾಳ ಹೂಡಿಕೆ, ಸ್ಟಾರ್ಟಪ್ ಕಂಪನಿಗಳ ಕುರಿತು ಮಳಿಗೆಗಳಲ್ಲಿ ಮಾಹಿತಿ ಸಿಗಲಿದೆ. ಅಲ್ಲದೆ, ಕಟ್ಟಡ ಸಾಮಗ್ರಿ, ತಾಂತ್ರಿಕ ವಸ್ತುಗಳ ಉತ್ಪಾದನೆಗಳು, ಅಲಂಕಾರಿಕ ವಸ್ತುಗಳ ಜತೆಗೆ ಸರ್ಕಾರದ ಸಾಲ ಸೌಲಭ್ಯ, ಕಿರುಸಾಲ ಕಂಪನಿಗಳು, ಆರೋಗ್ಯ ಸೇವೆ, ಜ್ಞಾನಾರ್ಜನೆಗೆ ಪುಸ್ತಕಗಳ ಮಳಿಗೆಗಳೂ ಇವೆ. ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮವು ವಿದೇಶ ವಿದ್ಯಾವಿಕಾಸ, ಬಸವ ಬೆಳಗು, ಕಾಯಕ ಕಿರಣ, ವಿಭೂತಿ ನಿರ್ವಣ, ಭೋಜನಾಲಯ ಕೇಂದ್ರ, ಸ್ವಯಂಉದ್ಯೋಗ ಯೋಜನೆ, ಜೀವ, ಸ್ವಾವಲಂಬಿ ಸಾರಥಿ ಯೋಜನೆಗಳ ಮಾಹಿತಿ ಮತ್ತು ನೋಂದಣಿ ಪ್ರಕ್ರಿಯೆ ಕೈಗೊಂಡಿದೆ.
ಒಳಪಂಗಡಗಳು ಒಂದಾಗಲಿ: ವೀರಶೈವ ಲಿಂಗಾಯತ ಸಮುದಾಯಕ್ಕೆ ತನ್ನದೇ ಆದ ಭವ್ಯ ಇತಿಹಾಸವಿದೆ. ಸಮಾಜದ ಸರ್ವರನ್ನೂ ಸಮಾನವಾಗಿ ಕಾಣಬೇಕು ಮತ್ತು ಕಾಣಲು ಅವಕಾಶ ಇದೆ ಎಂಬುದನ್ನು ಜಗತ್ತಿಗೆ ತೋರಿಸಿಕೊಟ್ಟ ಧರ್ಮ ಇದು ಎಂದು ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು. ಒಳಪಂಗಡಗಳು ಇರಬಾರದು ಎಂದು ಎಲ್ಲರೂ ಬಯಸುತ್ತಿದ್ದಾರೆ. ಹಾಗಾಗಿ, ಈ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸುವ ಅವಶ್ಯಕತೆ ಇದೆ. ಬೆಂಕಿಗೆ ಯಾವುದೇ ಮರವನ್ನು ಹಾಕಿದರೂ ಅದು ಸುಟ್ಟು ಬೂದಿಯಾಗುತ್ತದೆ. ಒಮ್ಮೆ ಬೂದಿಯಾದರೆ ಅದು ಯಾವ ಮರದ ಬೂದಿ ಎಂದು ತಿಳಿಯುವುದಿಲ್ಲ. ಹಾಗಾಗಿ ಲಿಂಗಧಾರಣೆಯಾದವರು ವೀರಶೈವ ಲಿಂಗಾಯತ ಸಮಾಜಕ್ಕೆ ಸೇರಿದ ನಂತರ ಬೂದಿಯ ರೀತಿಯಲ್ಲಿ ಒಂದಾಗಬೇಕು. ಆ ಮೂಲಕ ಎಲ್ಲರೂ ಒಗ್ಗೂಡಿ ಸಮಾಜವನ್ನು ಕಟ್ಟಬೇಕು ಎಂದು ಕರೆ ನೀಡಿದರು.
ಉಪ ಪಂಗಡಗಳು ಒಂದೆಡೆ ಬರಲಿ: ಮತ್ತೊಮ್ಮೆ ಜಾತಿ ಜನಗಣತಿ ನಡೆಸಿದರೂ ವೀರಶೈವ ಲಿಂಗಾಯತ ಸಮುದಾಯದ ಸಂಖ್ಯೆಯಲ್ಲಿ ಏರಿಕೆ ಕಾಣಲು ಸಾಧ್ಯವಿಲ್ಲ. ಮತ್ತೆ ಗಣತಿ ನಡೆದರೆ ಶೇ.1 ಕುಸಿತ ಕಾಣುವ ಸಾಧ್ಯತೆ ಇದೆ. ಮೀಸಲಾತಿ ಪಡೆಯುವ ಉದ್ದೇಶದಿಂದ ಗಣತಿ ಸಂದರ್ಭ ಉಪ ಪಂಗಡವನ್ನು ಪ್ರತ್ಯೇಕವಾಗಿ ದಾಖಲಿಸುತ್ತಿರುವುದೇ ಇದಕ್ಕೆ ಪ್ರಮುಖ ಕಾರಣ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ ಎಂ.ಬಿ.ಪಾಟೀಲ್ ಹೇಳಿದರು. ಮೀಸಲಾತಿ ಪಡೆಯಲು ವೀರಶೈವ ಲಿಂಗಾಯತದ ಉಪ ಪಂಗಡದವರು ಉಪ ಪಂಗಡದ ಹೆಸರನ್ನು ಜಾತಿ ಗಣತಿ ಸಂದರ್ಭ ನೀಡಿದ್ದಾರೆ. ಉಪ ಪಂಗಡಗಳಿಗೆ ಬೇಕಾಗಿರುವುದು ಮೀಸಲಾತಿ. ಎಲ್ಲ ಉಪ ಪಂಗಡಗಳು ಒಂದೆಡೆ ಬಂದರೆ ಜನಸಂಖ್ಯೆಯಲ್ಲಿ ಶೇ.17 ವೀರಶೈವ ಲಿಂಗಾಯತರನ್ನು ಕಾಣಬಹುದು ಎಂದು ಹೇಳಿದರು.

ಒಳಪಂಗಡ ಮರೆತು ಸಾಗಿದರೆ ಒಳಿತು: ಒಳಪಂಗಡಗಳನ್ನು ಬದಿಗಿಟ್ಟು ನಾವೆಲ್ಲರೂ ಒಂದು ಎಂಬ ಭಾವನೆ ಯಿಂದ ಮುಂದೆ ಸಾಗಿದಾಗ ಮಾತ್ರ ಸಮಾಜಕ್ಕೆ ಒಳಿತಾಗುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅಭಿಪ್ರಾಯಪಟ್ಟರು. ಸಮಾವೇಶ ದಲ್ಲಿ ಮಾತನಾಡಿ, ವೀರಶೈವ ಲಿಂಗಾಯತ ಸಮುದಾಯ ರಾಜ್ಯದ ಸಾಂಸ್ಕೃತಿಕ, ಆಧ್ಯಾತ್ಮಿಕ ಪರಂಪರೆಗೆ ದೊಡ್ಡ ಕೊಡುಗೆ ನೀಡಿದೆ. ವೀರಶೈವ ಲಿಂಗಾಯತ ಸಮಾಜ ಬೇಡುವ ಸಮಾಜವಲ್ಲ, ನೀಡುವ ಸಮಾಜ ಎಂಬುದನ್ನು ಎಲ್ಲರೂ ನೆನಪು ಮಾಡಿಕೊಳ್ಳಬೇಕು. ಸಮಾಜದ ಒಳಿತಿನಿಂದ ರಾಜ್ಯಕ್ಕೂ ಒಳಿತಾಗುತ್ತದೆ. ಈ ಸಮುದಾಯ ಒಗ್ಗಟ್ಟಾದ ಸಂದರ್ಭದಲೆಲ್ಲ ರಾಜ್ಯಕ್ಕೆ ಒಳ್ಳೆಯದಾಗಿದೆ ಎಂದರು.
ಸಂಕೇಶ್ವರರು ಸಮಾಜದ ಕಣ್ಣು: ವಿಆರ್ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ, ವ್ಯವಸ್ಥಾಪಕ ನಿರ್ದೇಶಕ ಡಾ. ಆನಂದ ಸಂಕೇಶ್ವರ ಅವರು ನಮ್ಮ ಸಮಾಜದ ಕಣ್ಣುಗಳಿದ್ದಂತೆ. ವೀರಶೈವ ಲಿಂಗಾಯತ ಗ್ಲೋಬಲ್ ಬಿಜಿನೆಸ್ ಕಾನ್ಕ್ಲೇವ್ಗೆ ಅವರು ಶಕ್ತಿ ತುಂಬುವ ಕಾರ್ಯ ಮಾಡಿರುವುದು ಹೆಮ್ಮೆಯ ವಿಚಾರ ಎಂದು ಬಿ.ವೈ. ವಿಜಯೇಂದ್ರ ಮೆಚ್ಚುಗೆ ವ್ಯಕ್ತಪಡಿಸಿದರು.
ಡಾ. ಆನಂದ ಸಂಕೇಶ್ವರರಿಂದ ವಿಚಾರಮಂಡನೆ ಇಂದು: ಐಎಲ್ವೈಎಫ್ ಗ್ಲೋಬಲ್ ಬಿಜಿನೆಸ್ ಕಾನ್ಕ್ಲೇವ್ನಲ್ಲಿ ಶನಿವಾರ ಸಂಜೆ 4.30ಕ್ಕೆ ಆಯೋಜಿಸಿರುವ ‘ಕ್ರಾಂತಿಕಾರಿ ಭವಿಷ್ಯ: ಆನಂದ ಸಂಕೇಶ್ವರ ಅವರ ದೃಷ್ಟಿ’ ವಿಷಯದ ಕುರಿತು ವಿಆರ್ಎಲ್ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಡಾ.ಆನಂದ ಸಂಕೇಶ್ವರ ಮಾತನಾಡಲಿದ್ದಾರೆ.
