

ನವದೆಹಲಿ: ಸಂಸತ್ ಭವನದ ಉದ್ಘಾಟನಾ ಸಮಾರಂಭ ಐತಿಹಾಸಿಕ ಪ್ರಸಿದ್ಧಿಯುಳ್ಳ ಸುವರ್ಣ ರಾಜದಂಡ (ಸೆಂಗೋಲ್) ಸ್ಥಾಪನೆಗೆ ಸಾಕ್ಷಿಯಾಗುತ್ತಿರುವುದು ವಿಶೇಷ. ಬ್ರಿಟಿಷರಿಂದ ಭಾರತೀಯರಿಗೆ ಅಧಿಕಾರದ ಹಸ್ತಾಂತರವನ್ನು ಸಾಕ್ಷೀಕರಿಸಲು, ಬ್ರಿಟಿಷ್ ಇಂಡಿಯಾದ ಕೊನೆಯ ವೈಸರಾಯ್ ಲಾರ್ಡ್ ಮೌಂಟ್ ಬ್ಯಾಟನ್ ಅವರು ಈ ರಾಜದಂಡವನ್ನು ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರಿಗೆ ಹಸ್ತಾಂತರಿಸಿದ್ದರು ಎಂದು ಗೃಹ ಸಚಿವ ಅಮಿತ್ ಷಾ ಮಾಹಿತಿ ಹಂಚಿಕೊಂಡಿದ್ದಾರೆ.
ಇತಿಹಾಸದ ಪುಟ: ಐತಿಹಾಸಿಕ ದಾಖಲೆಗಳ ಪ್ರಕಾರ, ಭಾರತ ಸ್ವತಂತ್ರಗೊಳ್ಳುವ ವೇಳೆ ಅಧಿಕಾರ ಹಸ್ತಾಂತರದ ಸೂಚಕವಾಗಿ ಏನು ನೀಡಬೇಕು ಎಂದು ಲಾರ್ಡ್ ಮೌಂಟ್ ಬ್ಯಾಟನ್ ಅವರು ನೆಹರೂರನ್ನು ಕೇಳುತ್ತಾರೆ. ಆಗ ನೆಹರೂ ದೇಶದ ಕೊನೆಯ ಗವರ್ನರ್ ಜನರಲ್ ಆಗಿದ್ದ ತಮಿಳುನಾಡು ಮೂಲದ ಸಿ. ರಾಜಗೋಪಾಲಾಚಾರಿ ಅವರ ಸಲಹೆ ಕೇಳುತ್ತಾರೆ. ಅಧಿಕಾರಕ್ಕೆ ಬರುವ ಹೊಸ ರಾಜನಿಗೆ ರಾಜದಂಡವನ್ನು ಹಸ್ತಾಂತರಿಸುವ ತಮಿಳು ಸಂಪ್ರದಾಯದ ಬಗ್ಗೆ ಅವರು ತಿಳಿಸುತ್ತಾರೆ. ಚೋಳರ ಆಳ್ವಿಕೆಯಲ್ಲಿ ಈ ಸಂಪ್ರದಾಯ ಅನುಸರಿಸಲಾಗಿತ್ತು. ಇದರಿಂದ ಬ್ರಿಟಿಷರಿಂದ ಭಾರತದ ಸ್ವಾತಂತ್ರ್ಯವನ್ನು ಗುರುತಿಸಬಹುದು ಎಂದು ರಾಜಾಜಿ ವಿವರಿಸುತ್ತಾರೆ. ಸ್ವಾತಂತ್ರ್ಯದ ಐತಿಹಾಸಿಕ ಕ್ಷಣಕ್ಕಾಗಿ ರಾಜದಂಡದ ವ್ಯವಸ್ಥೆ ಮಾಡಲು ರಾಜಾಜಿ ಅವರಿಗೇ ಜವಾಬ್ದಾರಿ ನೀಡಲಾಗಿತ್ತು. ರಾಜಾಜಿ ತಮಿಳುನಾಡಿನ ತಿರುವಾಡುತುರೈ ಅಥೀನಂ ಎಂಬ ಪ್ರಮುಖ ಮಠವನ್ನು ಸಂಪರ್ಕಿಸುತ್ತಾರೆ. ಮಠದ ಶ್ರೀಗಳು ಈ ಜವಾಬ್ದಾರಿ ಒಪ್ಪಿಕೊಂಡು, ಆಗಿನ ಮದ್ರಾಸಿನಲ್ಲಿ ಆಭರಣ ವ್ಯಾಪಾರಿಯಾಗಿದ್ದ ವುಮ್ಮಿಡಿ ಬಂಗಾರು ಚೆಟ್ಟಿ ಅವರಿಗೆ ತಿಳಿಸಿ, ಸೆಂಗೋಲ್ ಅನ್ನು ತಯಾರಿಸುತ್ತಾರೆ.
ಸ್ಪೀಕರ್ ಪೀಠದ ಪಕ್ಕ ಸ್ಥಾಪನೆ: ಲೋಕಸಭೆಯಲ್ಲಿ ಸಭಾಧ್ಯಕ್ಷರು ಕುಳಿತುಕೊಳ್ಳುವ ಪೀಠದ ಪಕ್ಕದಲ್ಲಿ ಸೆಂಗೋಲ್ ಅನ್ನು ನೂತನ ಸಂಸತ್ ಭವನ ಉದ್ಘಾಟನೆಗೊಳ್ಳುವ ಮೇ 28ರಂದು ಸ್ಥಾಪಿಸಲಾಗುತ್ತದೆ.
ಮಧ್ಯರಾತ್ರಿ ಹಸ್ತಾಂತರ: ಮಠದ ಹಿರಿಯ ಅರ್ಚಕರು ಮೊದಲು ರಾಜದಂಡವನ್ನು ಮೌಂಟ್ಬ್ಯಾಟನ್ಗೆ ಹಸ್ತಾಂತರಿಸಿ, ನಂತರ ಹಿಂದಕ್ಕೆ ತೆಗೆದು ಕೊಳ್ಳುತ್ತಾರೆ. ಬಳಿಕ ಅದಕ್ಕೆ ಗಂಗಾಜಲ ಸಿಂಪಡಿಸಿ ಮೆರವಣಿಗೆಯಲ್ಲಿ ತಂದು ಪ್ರಧಾನ ಮಂತ್ರಿ ನೆಹರೂ ಅವರಿಗೆ ದೇಶ ಮಧ್ಯರಾತ್ರಿ ಸ್ವಾತಂತ್ರ್ಯ ಹೊಂದುವ 15 ನಿಮಿಷಕ್ಕೆ ಮುನ್ನ ಹಸ್ತಾಂತರ ಮಾಡಲಾಗುತ್ತದೆ. ಆ ಸಂದರ್ಭಕ್ಕೆ ವಿಶೇಷ ಗೀತೆಯೊಂದನ್ನು ಕೂಡ ರಚಿಸಿ, ಮತ್ತಷ್ಟು ಸ್ಮರಣೀಯಗೊಳಿಸಲಾಗಿತ್ತು.
ಬ್ರಿಟಿಷರಿಂದ ಭಾರತೀಯರಿಗೆ ಅಧಿಕಾರದ ಹಸ್ತಾಂತರದ ಸಂಕೇತ: ಸೆಂಗೋಲ್ ಎಂದು ಕರೆಯಲ್ಪಡುವ ಈ ರಾಜ ದಂಡವು ತಮಿಳು ಪದ ಸೆಮ್ಮೈನಿಂದ ಹುಟ್ಟಿಕೊಂಡಿತು. ಸೆಮ್ಮೈಎಂದರೆ ಸದಾಚಾರ ಎಂದರ್ಥ. ರಾಜದಂಡವು ಐದು ಅಡಿ ಉದ್ದವಿದ್ದು, ನ್ಯಾಯವನ್ನು ಸಂಕೇತಿಸುವ ‘ನಂದಿ’ ಯನ್ನು ಹೊಂದಿದೆ.