

ಬೆಂಗಳೂರು: ಕ್ರೆಡಿಟ್ ಕಾರ್ಡ್ ಗ್ರಾಹಕನಿಗೆ ಬ್ಯಾಂಕ್ ಅಧಿಕಾರಿ ಸೋಗಿನಲ್ಲಿ ಕರೆ ಮಾಡಿದ ಸೈಬರ್ ವಂಚಕರು, ಎಪಿಕೆ ಪೈಲ್ ಅಪ್ಲಿಕೇಷನ್ ಕಳುಹಿಸಿ 47 ಸಾವಿರ ರೂ. ವಂಚನೆ ಮಾಡಿದ್ದಾರೆ.
ಬಿಇಎಲ್ ರಸ್ತೆ ನಿವಾಸಿ ಯು.ಭವಾನಿ ಪ್ರಸಾದ್ ವಂಚನೆಗೆ ಒಳಗಾದವರು. ಇವರು ಕೊಟ್ಟ ದೂರಿನ ಮೇರೆಗೆ ಕೇಂದ್ರ ಸಿಇಎನ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಭವಾನಿ ಪ್ರಸಾದ್ ಸೆಪ್ಟೆಂಬರ್‌ನಲ್ಲಿ ಖಾಸಗಿ ಬ್ಯಾಂಕ್‌ನ ಕ್ರೆಡಿಟ್ ಕಾರ್ಡ್ ಪಡೆದಿದ್ದರು. ಅ. 17ರಂದು ಅಪರಿಚಿತ ವ್ಯಕ್ತಿ ಕರೆ ಮಾಡಿ ಬ್ಯಾಂಕಿನ ಪ್ರತಿನಿಧಿ ಎಂದು ಪರಿಚಯ ಮಾಡಿಕೊಂಡಿದ್ದಾನೆ. ಬಳಿಕ ನಿಮ್ಮ ಕ್ರೆಡಿಟ್ ಕಾರ್ಡ್ ಪ್ರಿಮಿಯಂ ಕಾರ್ಡ್ ಆಗಿದ್ದು, ಅದನ್ನು ಮುಂದುವರಿಸಲು ಅಥವಾ ಸ್ಥಗಿತ ಮಾಡಲು ನಿಮ್ಮ ಮೊಬೈಲ್ ಅಪ್ಲಿಕೇಷನ್ ಕಳುಹಿಸುತ್ತೆವೆ. ಅದರಲ್ಲಿ ನಿಮ್ಮ ಅಭಿಪ್ರಾಯ ತಿಳಿಸುವಂತೆ ಸಲಹೆ ನೀಡಿದ್ದ. ಬಳಿಕ ಬ್ಯಾಂಕ್ ಹೆಸರಿನಲ್ಲಿ ಎಪಿಕೆ ಫೈಲ್ ಅಪ್ಲಿಕೇಷನ್ ಕಳುಹಿಸಿದ್ದರು.
ಸೈಬರ್ ವಂಚಕನ ಮಾತು ನಂಬಿದ ಭವಾನಿ ಪ್ರಸಾದ್, ಅಪ್ಲಿಕೇಷನ್ ಡೌನ್‌ಲೋಡ್ ಮಾಡಿಕೊಂಡು ಕ್ರೆಡಿಟ್ ಕಾರ್ಡ್ ನಂಬರ್ ಭರ್ತಿ ಮಾಡಿದ್ದರು. ಇದಾದ ಕೆಲ ಹೊತ್ತಿಗೆ ಹಂತ ಹಂತವಾಗಿ 47,300 ರೂ. ಕಡಿತವಾಗಿದೆ. ಕೊನೆಗೆ ಇದೊಂದು ಸೈಬರ್ ವಂಚನೆ ಎಂಬುದು ಗೊತ್ತಾಗಿ ಭವಾನಿ ಪ್ರಸಾದ್, ದೂರು ಸಲ್ಲಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.