

ರಿಪ್ಪನ್‌ಪೇಟೆ: ಅಸತ್ಯಗಳನ್ನು ಹೇಳುವ ಮೂಲಕ ವಾಸ್ತವ ಸ್ವರೂಪವನ್ನು ವಿರೂಪಗೊಳಿಸಬಾರದು. ದಶಲಕ್ಷಣ ಧರ್ಮದ ಉದ್ದೇಶ ಸತ್ಯಧರ್ಮ ಪರಿಪಾಲನೆ, ಆತ್ಮಕಲ್ಯಾಣ ಉಂಟುಮಾಡುವುದು ಎಂದು ಹೊಂಬುಜ ಜೈನ ಮಠದ ಜಗದ್ಗುರು ಶ್ರೀ ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ ತಿಳಿಸಿದರು.
ಹೊಂಬುಜ ಜೈನಮಠದಲ್ಲಿ ಜರುಗುತ್ತಿರುವ ದಶಲಕ್ಷಣ ಮಹಾಪರ್ವದ 5ನೇ ದಿನದ ಧಾರ್ಮಿಕ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಅವರು, ಆಚಾರ್ಯ ಉಮಾಸ್ವಾಮಿ ಅವರ ತತ್ವಾರ್ಥ ಸೂತ್ರ, ಸಮಂತಭದ್ರ ಆಚಾರ್ಯರ ಗ್ರಂಥಗಳ ಉಲ್ಲೇಖದಂತೆ ಸತ್ಯವನ್ನು ಹೇಳುವುದರಿಂದ ಲೋಭ ನಿವೃತ್ತಿಯಾಗಿ ಜೀವನದಲ್ಲಿ ಸತ್ಯಯುತ ಸಾಧನೆ ಮಾಡಿದಂತಾಗುವುದು. ಸತ್ಯ ಧರ್ಮವು ಎಲ್ಲ ಸಂಕಷ್ಟಗಳಿಗೂ ಪರಿಹಾರ ನೀಡುತ್ತದೆ. ಅಲ್ಲದೇ ಶಾಂತಿ, ನೆಮ್ಮದಿಯ ಮನಸ್ಥಿತಿ ಪ್ರಾಪ್ತಿಯಾಗುತ್ತದೆ ಎಂದರು.
ಶ್ರೀ ಪಾರ್ಶ್ವನಾಥ ಸ್ವಾಮಿ, ಲೋಕವಂದ್ಯ ಯಕ್ಷಿಶ್ರೀ ಪದ್ಮಾವತಿ ದೇವಿ, ಶ್ರೀ ನೇಮಿನಾಥ ಸ್ವಾಮಿ, ಶ್ರೀ ಮಹಾವೀರ ಸ್ವಾಮಿ, ಶ್ರೀ ಕೂಷ್ಮಾಂಡಿನಿ ದೇವಿ, ಶ್ರೀ ಸರಸ್ವತಿ ದೇವಿ, ಶ್ರೀ ಜಟ್ಟಿಂಗರಾಯ ಕ್ಷೇತ್ರಪಾಲ ಸನ್ನಿಧಿಯಲ್ಲಿ ಧಾರ್ಮಿಕ ವಿಧಿಗಳು ಆರ್ಯಿಕಾ ಶ್ರೀ 105 ಶಿವಮತಿ ಮಾತಾಜಿ ಉಪಸ್ಥಿತಿಯಲ್ಲಿ ನೆರವೇರಿದವು. ಶ್ರೀ ಪದ್ಮಾವತಿ ಮಹಿಳಾ ಮಂಡಳ, ಹುಂಚ ಶ್ರಾವಕ-ಶ್ರಾವಕಿಯರು, ಭಕ್ತರು, ಶ್ರೀ ಕುಂದಕುಂದ ವಿದ್ಯಾಪೀಠದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.