ಸುಳ್ಳು ದಾಖಲೆ ಕೊಟ್ಟು ಬಿಡಿಎ ಸೈಟ್ ಕಬಳಿಕೆ

bda office
Published on

ಬೆಂಗಳೂರು : ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ (ಬಿಡಿಎ) ನಕಲಿ ದಾಖಲೆ ಸಲ್ಲಿಸಿ ಸೈಟ್ ಮಂಜೂರು ಮಾಡಿಸಿಕೊಂಡಿದ್ದ ಕುಟುಂಬದ ವಿರುದ್ಧ ಶೇಷಾದ್ರಿಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಿಡಿಎ ವಿಚಕ್ಷಣ ದಳದ ಪಿಎಸ್‌ಐ ಎಸ್.ಆರ್. ಸೌಮ್ಯ ಅವರು ನೀಡಿದ ದೂರಿನ ಮೇರೆಗೆ ಅನಿಲ್ ಕುಮಾರ್ ಅರ್ಗವಾಲ್, ಸೋನು ಅರ್ಗವಾಲ್, ರಾಮ್ ಪ್ರತಾಪ್ ಅರ್ಗವಾಲ್, ಸಂತೋಷ್ ದೇವಿ ಅರ್ಗವಾಲ್, ಸ್ನೇಹಲತಾ ಅರ್ಗವಾಲ್ ಮತ್ತು ಬಿಡಿಎ ಅಧಿಕಾರಿ, ಸಿಬ್ಬಂದಿ ವಿರುದ್ಧ ಎ್ಐಆರ್ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಅನಿಲ್ ಕುಮಾರ್, ಬಿಡಿಎಗೆ ಸುಳ್ಳು ದಾಖಲೆ ಮತ್ತು ಬೇರೆ ಬೇರೆ ವಿಳಾಸ ಕೊಟ್ಟು 2001ರ ಜುಲೈ 7 ರಿಂದ 2003ರ ಮಾರ್ಚ್ 24ರ ನಡುವೆ ತಮ್ಮ ಕುಟುಂಬ ಸದಸ್ಯರಿಗೆ ಐದು ಸೈಟ್‌ಗಳನ್ನು ಮಂಜೂರು ಮಾಡಿಸಿಕೊಂಡಿದ್ದರು. ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಅಂಜನಪುರ 8ನೇ ಬ್ಲಾಕ್, 4ನೇ ಬ್ಲಾಕ್, 2ನೇ ಬ್ಲಾಕ್, 6ನೇ ಬ್ಲಾಕ್, ಬನಶಂಕರಿ 6ನೇ ಬ್ಲಾಕ್ ಮತ್ತು 4ನೇ ಬ್ಲಾಕ್‌ನಲ್ಲಿ ತಲಾ ಒಂದು ಸೈಟ್‌ನ್ನು ಮಂಜೂರು ಮಾಡಿಸಿಕೊಂಡಿದ್ದರು.

ಅನಿಲ್ ಕುಮಾರ್, ಬೇರೆ ಬೇರೆ ವಿಳಾಸ ಕೊಟ್ಟು ಒಂದೇ ಕುಟುಂಬಕ್ಕೆ ಐದಾರು ಸೈಟ್ ಮಂಜೂರು ಮಾಡಿಸಿಕೊಂಡು ನಂಬಿಕೆ ದ್ರೋಹ ಬಗೆದಿದ್ದಾರೆ. ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಇದರ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net