

ಮುಂಬೈ: ನವ ಸೇವಾ ಬಂದರಿನಲ್ಲಿ ಶನಿವಾರ 1,000 ಕೋಟಿ ರೂ. ಮೊತ್ತದ ಭಾರಿ ಪ್ರಮಾಣದ ಮಾದಕ ವಸ್ತುವನ್ನು ಜಪ್ತಿ ಮಾಡಲಾಗಿದೆ.
ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಮಾದಕ ದ್ರವ್ಯ 191 ಕಿ.ಗ್ರಾಂ ನಷ್ಟಿತ್ತು. ಸುಳಿವಿನ ಆಧಾರದ ಮೇಲೆ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಆ ಮಾದಕ ದ್ರವ್ಯವನ್ನು ಅಫ್ಘಾನಿಸ್ತಾನದಿಂದ ಇರಾನ್ ಮೂಲಕ ಭಾರತಕ್ಕೆ ಕಳ್ಳಸಾಗಣೆ ಮಾಡಲಾಗುತ್ತಿತ್ತು.
ಮಾದಕ ವಸ್ತುವನ್ನು ಬಿದಿರಿನಂತೆ ಕಾಣುವಂತೆ ಮಾಡಲು ಪ್ಲಾಸ್ಟಿಕ್ ಕೊಳವೆಗಳಲ್ಲಿ ಮುಚ್ಚಿ ಬಣ್ಣ ಬಳೆಯಲಾಗಿತ್ತು. ಸಾಗಿಸಲು ಸುಲಭವಾಗುವಂತೆ ಮಾಡಲು ಮಾದಕ ವಸ್ತುವನ್ನು ಆಯುರ್ವೇದ ಔಷಧವೆಂಬಂತೆ ಬಿಂಬಿಸಲಾಗಿತ್ತು.
ಸುಂಕದ ಅಧಿಕಾರಿಯೊಬ್ಬರು ಸುಳಿವು ನೀಡಿದ ನಂತರ ಕಸ್ಟಮ್ಸ್ ಮತ್ತು ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಅಕ್ರಮ ಮಾದಕ ವಸ್ತುವನ್ನು ಜಪ್ತಿ ಮಾಡಿದ್ದಾರೆ. ವಿಶೇಷ ಗುಪ್ತಚರ ಮತ್ತು ತನಿಖಾ ಶಾಖೆಯ (ಎಸ್‌ಐಐಬಿ) ಅಧಿಕಾರಿಗಳು ಸಹಾಯಕ್ಕಾಗಿ ಡಿಆರ್‌ಐ ಅನ್ನು ಸಂಪರ್ಕಿಸಿದ್ದರು.
ಅವರು ಕಂಟೇನರ್ ಅನ್ನು ಪರಿಶೀಲಿಸಿದಾಗ, ಸರ್ವಿಮ್ ರಫ್ತು ಕಂಪನಿಯೊಂದರಿಂದ ಆಮದು ಮಾಡಿಕೊಂಡಿದ್ದ ಕಿತ್ತಳೆ ಬಣ್ಣದ ಗೋಣಿ ಚೀಲಗಳಿದ್ದಿರುವುದು ಗಮನಕ್ಕೆ ಬಂದಿತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಗೋಣಿ ಚೀಲಗಳೊಳಗಿನ ಸರಕುಗಳನ್ನು ಗ್ಲೈಸಿರಿಜಾ ಗ್ಲಾಬ್ರಾ ಎಕ್ಸ್ಟ್ರಾಕ್ಟ್ ಅಥವಾ ಲೈಕೋರೈಸ್ ರೂಟ್ ಎಕ್ಸ್ಟ್ರಾಕ್ಟ್ ಎಂದು ಬರೆಯಲಾಗಿತ್ತು.
ಅವುಗಳನ್ನು ಮರದ ತೊಗಟೆಯಿಂದ ಮುಚ್ಚಲಾಗಿತ್ತು. ಅಧಿಕಾರಿಗಳು ಹೊರಗಿನ ತೊಗಟೆಯನ್ನು ತೆಗೆದಾಗ, ಅದು ಹಸಿರು ಪೈಪ್ ಆಗಿದ್ದು, ಅದರೊಳಗೆ ಪುಡಿಯನ್ನು ತುಂಬಿಸಲಾಗಿತ್ತು. ಪುಡಿ ಹೆರಾಯಿನ್ ಎಂದು ಖಚಿತಪಡಿಸಿಕೊಳ್ಳಲು ಎನ್‌ಡಿಪಿಎಸ್ ಪರೀಕ್ಷೆಯನ್ನು ಸಹ ನಡೆಸಲಾಯಿತು.
ನಿಷೇಧಿತ ವಸ್ತುವನ್ನು ದೇಶಕ್ಕೆ ಸಾಗಿಸಲಾಗುತ್ತಿದೆ ಎಂದು ದೃಢಪಟ್ಟ ನಂತರ, ಎನ್‌ಡಿಪಿಎಸ್ ಅದನ್ನು ಮುಟ್ಟುಗೋಲು ಹಾಕಿಕೊಂಡಿದೆ. ಈ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಇಬ್ಬರು ಕಸ್ಟಮ್ಸ್ ಹೌಸ್ ಏಜೆಂಟರು-ಎಂ ಬಿ ಶಿಪ್ಪಿಂಗ್ ಆ್ಯಂಡ್ ಲಾಜಿಸ್ಟಿಕ್ಸ್ ಸಾಲ್ಯೂಷನ್ನ ಮೀನಾನಾಥ್ ಬೊಡಕೆ ಮತ್ತು ಕೊಂಡಿಭಾವು ಪಾಂಡುರಂಗ್ ಗುಂಜನ್ ಅವರನ್ನು ಬಂಧಿಸಲಾಗಿದೆ. ಇಬ್ಬರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ಅವರನ್ನು ನ್ಯಾಯಾಂಗ ಬಂಧನದಲ್ಲಿಡಲಾಗಿದೆ.