

ಎನ್.ಆರ್.ಪುರ: ತಾಲೂಕಿನ ಸೀತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಪ್ರಸಕ್ತ ವರ್ಷ 7.32 ಲಕ್ಷ ರೂ. ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ವೈ.ಎಸ್.ಸುಬ್ರಹ್ಮಣ್ಯ ತಿಳಿಸಿದರು.
ಭಾನುವಾರ ಗ್ರಾಮದಲ್ಲಿ ನಡೆದ ಸರ್ವ ಸದಸ್ಯರ ವಾರ್ಷಿಕ ಸಭೆಯಲ್ಲಿ ಮಾತನಾಡಿ, ಈ ವರ್ಷ 1.03 ಕೋಟಿ ರೂ. ವೆಚ್ಚದಲ್ಲಿ ಅಡಕೆ ಸಂಸ್ಕರಣಾ ಘಟಕ ನಿರ್ಮಿಸಿದ್ದೇವೆ. ಸಂಸ್ಕರಣೆಗಾಗಿ ಸಂಘದ ಸದಸ್ಯರು ಹೆಸರು ನೋಂದಣಿ ಮಾಡಿಕೊಳ್ಳಬಹುದು ಎಂದು ತಿಳಿಸಿದರು.
71.52 ಲಕ್ಷ ರೂ. ವೆಚ್ಚದಲ್ಲಿ ಬೆಳ್ಳೂರು ಶಾಖೆ ಕಟ್ಟಡ ಮತ್ತು 15.36 ಲಕ್ಷ ರೂ. ವೆಚ್ಚದಲ್ಲಿ ಈಚಿಕೆರೆ ಶಾಖೆ ಕಟ್ಟಡ ನಿರ್ಮಿಸಿದ್ದೇವೆ. ಸಂಘದ ಬೆಳವಣಿಗೆ ಮತ್ತು ಅಳವಡಿಸಿಕೊಂಡ ಕ್ರಮದಿಂದ ಮಾದರಿ ಸಂಸ್ಥೆ ಎಂದು ಗುರುತಿಸಿಕೊಂಡಿದ್ದರಿಂದ ನಬಾರ್ಡ್ ಸಂಸ್ಥೆಯು ಏಕರೂಪದ ಸಾಫ್ಟ್‌ವೇರ್ ಅಳಡಿಸಿಕೊಳ್ಳಲು ನಮ್ಮ ಸಂಸ್ಥೆಯನ್ನು ಆಯ್ಕೆ ಮಾಡಿದೆ. ಸಂಘದ ಮೂಲಕ ರೈತ ಉತ್ಪಾದನಾ ಸಂಸ್ಥೆ ಮಾಡಲು ಚಿಂತನೆ ನಡೆಸಲಾಗಿದೆ. ಸೀತೂರು ಸಹಕಾರ ಸಂಘ ಮುಂದೆ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ ಎಂದು ಹೆಸರು ಬದಲಾವಣೆಯಾಗಲಿದೆ ಎಂದರು.
ಸಂಘದ ಮಳಿಗೆಯಲ್ಲಿ ಅತಿ ಹೆಚ್ಚು ವ್ಯಾಪಾರ ಮಾಡಿದ ಬಿ.ವಿ.ಚಂದ್ರಶೇಖರ್, ಎನ್.ಬಿ.ಚನ್ನಕೇಶವ, ಬಿ.ಎಸ್.ಮಂಜುನಾಥ್, ಅಭಿಲಾಷ್ ತೋಮಸ್ ಅವರನ್ನು ಗೌರವಿಸಲಾಯಿತು. ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಾದ ಶ್ರೇಯಾ, ಆದಿತ್ಯ, ಜಿ.ಎನ್.ರುಕ್ಮಿಣಿ, ವೈದ್ಯಕೀಯ ಪದವಿ ಪಡೆದ ಎಂ.ವಿ.ಸಹನಾ ಅವರನ್ನು ಪುರಸ್ಕರಿಸಲಾಯಿತು.
ಸಂಘದ ಸಿಇಒ ಅನಿಲ್‌ಕುಮಾರ್ ವರದಿ ವಾಚನ ಮಾಡಿದರು. ನಿರ್ದೇಶಕರಾದ ಸಂದೀಪ್‌ಕುಮಾರ್, ಎನ್.ಪಿ.ರವಿ, ಎಸ್.ಉಪೇಂದ್ರರಾವ್, ಎಚ್.ಎನ್.ಸತೀಶ್, ಇ.ಡಿ.ಮಂಜುನಾಥ್, ಎಂ.ಎಸ್.ಗೀತಾ, ಸುಶೀಲಮ್ಮ, ಜಿ.ಕೆ.ಜಯರಾಂ, ಎಂ.ಡಿ.ರಾಜೇಶ್, ರಂಗಿಣಿ, ಎ.ಎಸ್.ವೆಂಕಟರಮಣ ಇದ್ದರು.