

ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ನಮ್ಮ ಮೆಟ್ರೋ ಹಂತ&2ಬಿ ಯೋಜನೆಗೆ ವಿದ್ಯುದಿಕರಣ ನಡೆಸಲು ಬಿಎಂಆರ್ಸಿಎಲ್ ಆಹ್ವಾನಿಸಿದ್ದ ಟೆಂಡರ್ನ್ನು ಸೀಮೆನ್ಸ್ ಲಿಮಿಟೆಡ್, ರೈಲು ವಿಕಾಸ ನಿಗಮ ಲಿಮಿಟೆಡ್ ಒಕ್ಕೂಟ ಪಡೆದುಕೊಂಡಿವೆ.
ಟೆಂಡರ್ ಮೌಲ್ಯ ಅಂದಾಜು 766 ಕೋಟಿ ರೂ. ಆಗಿದ್ದು, ಸೀಮೆನ್ಸ್ ಲಿ. ಭಾಗವು ಅಂದಾಜು 558 ಕೋಟಿ ರೂ.ಗಳಾಗಿವೆ. ಕೆಐಎ-ಕೆ.ಆರ್.ಪುರ-ಸೆಂಟ್ರಲ್ ಸಿಲ್ಕ್ಬೋರ್ಡ್ವರೆಗಿನ 58 ಕಿ.ಮೀ. ಮಾರ್ಗದಲ್ಲಿ ಸೀಮೆನ್ಸ್ ಕಂಪನಿ ಕಾಮಗಾರಿ ನಡೆಸಲಿದೆ. ಈ ಮಾರ್ಗ 30 ನಿಲ್ದಾಣಗಳನ್ನು ಒಳಗೊಂಡಿದೆ.
ಈ ಕುರಿತು ಸೀಮೆನ್ಸ್ ಲಿ. ಮೊಬಿಲಿಟಿ ಬ್ಯುಸಿನೆಸ್ ಮುಖ್ಯಸ್ಥೆ ಗುಂಜನ್ ವಖಾರಿಯಾ ಪ್ರತಿಕ್ರಿಯಿಸಿ, ಸುಸ್ಥಿರ ರೈಲು ಸಾರಿಗೆಯ ಮೂಲಕ ದೇಶದ ಅಭಿವೃದ್ಧಿ ಕಡೆಗಿನ ನಿರಂತರ ಪ್ರಯತ್ನಗಳ ಭಾಗವಾಗಿ, ನಮ್ಮ ಮೆಟ್ರೋ ಯೋಜನೆಯ 2ನೇ ಹಂತದ ಮಾರ್ಗದಲ್ಲಿ ವಿದ್ಯುದಿಕರಣ ನಡೆಸಲು ಟೆಂಡರ್ ಪಡೆದುಕೊಂಡಿರುವುದು ಸಂತಸದ ಸಂಗತಿಯಾಗಿದೆ ಎಂದಿದ್ದಾರೆ.