VIDEO| ಬ್ರಿಟಿಷರ ಕಾಲದ ಮೂರು ಕಾಯ್ದೆ ಬದಲು; ಲೋಕಸಭೆಯಲ್ಲಿ ಮಸೂದೆ ಮಂಡನೆ

Amit Shah (3)
Published on

ನವದೆಹಲಿ: ಮುಂಗಾರು ಅಧಿವೇಶನದ ಕೊನೆಯ ದಿನವಾದ ಶುಕ್ರವಾರದಂದು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಭಾರತೀಯ ದಂಡ ಸಂಹಿತೆ(IPC), ಸಿಆರ್​ಪಿಸಿ ಮತ್ತು ಎವಿಡೆನ್ಸ್​ ಆ್ಯಕ್ಟ್​ ಬದಲಿಗೆ ಹೊಸ ಕಾನೂನು ರೂಪಿಸುವ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಿದೆ.

ಈ ಹೊಸ ಮಸೂದೆಯ ಪ್ರಕಾರ ದೇಶದ್ರೋಹ ಅಪರಾಧವನ್ನು ರದ್ದುಗೊಳಿಸಲಾಗುತ್ತಿದ್ದು, ಇದೇ ಮೊದಲ ಬಾರಿಗೆ ಶಿಕ್ಷೆಯಾಗಿ ಸಮುದಾಯ ಸೇವೆಯನ್ನು ಪರಿಚಯಿಸಲಾಗುತ್ತಿದೆ ಎಂದು ಲೋಕಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್​ ಷಾ ತಿಳಿಸಿದ್ದಾರೆ.

ಮಸೂದೆಯನ್ನು ಮಂಡಿಸಿ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್​ ಷಾ ನೂತನ ಮಸೂದೆಯಲ್ಲಿ ಭಾರತೀಯ ನ್ಯಾಯ ಸಂಹಿತಾ ಮಸೂದೆ(IPC), ಭಾರತೀಯ ನಾಗರೀಕ ಸುರಕ್ಷಾ ಸಂಹಿತೆ(CRPC), ಭಾರತೀಯ ಸಾಕ್ಷ್ಯ ಕಾನೂನು(ಎವಿಡೆನ್ಸ್​ ಆ್ಯಕ್ಟ್) ಆಗಿ ಹೆಸರು ಬದಲಾಯಿಸಲಾಗಿದೆ.

ಮಹಿಳೆಯರು ಹಾಗೂ ಮಕ್ಕಳ ಮೇಲಿನ ಅಪರಾಧ ಪ್ರಕರಣಗಳಿಗೆ ಹೆಚ್ಚು ಒತ್ತು ನೀಡಲಾಗಿದೆ. ಭಯೋತ್ಪಾದಕ ಚಟುವಟಿಕೆಗಳನ್ನು ಸಮರ್ಪಕವಾಗಿ ಎದುರಿಸಲು ಹೊಸ ಶಿಕ್ಷೆಗಳನ್ನು ಮಸೂದೆಯಲ್ಲಿ ಸೇರಿಸಲಾಗಿದೆ. ಹೊಸ ನಿಯಮದ ಪ್ರಕಾರ ತನಿಖೆಯಲ್ಲಿ ತಂತ್ರಜ್ಞಾನ ಮತ್ತು ವಿಜ್ಞಾನದ ಬಳಕೆ, ಎಲೆಕ್ಟ್ರಾನಿಕ್​ ಡಿವೈಸ್​ ಮೂಲಕ ಸಮನ್ಸ್​ ಜಾರಿ ಮಾಡುವುದು, ಡಿಜಿಟಲ್​ ದಾಖಲೆಗಳನ್ನು ಸಾಕ್ಷ್ಯವನ್ನಾಗಿ ಪರಿಗಣಿಸುವ ಅವಕಾಶ ಇದೆ ಎಂದು ತಿಳಿಸಿದ್ದಾರೆ.

1860 ರಿಂದ 2023ರವರೆಗೆ ದೇಶದ ಕ್ರಿಮಿನಲ್​ ನ್ಯಾಯ ವ್ಯವಸ್ಥೆಯೂ ಬ್ರಿಟಿಷರು ರೂಪಿಸಿದ ಕಾನೂನಿನಂತೆ ಕಾರ್ಯನಿರ್ವಹಿಸುತ್ತಿತ್ತು. ಈ ಮೂರು ಹೊಸ ಕಾನೂನುಗಳಿಂದ ದೇಶದ ಕ್ರಿಮಿನಲ್​ ನ್ಯಾಯ ವ್ಯವಸ್ಥೆಯಲ್ಲಿ ಪ್ರಮುಖ ಬದಲಾವಣೆಯಾಗಲಿದೆ ಎಂದು ಲೋಕಸಭೆಗೆ ಕೇಂದ್ರ ಗೃಹ ಸಚಿವ ಅಮಿತ್​ ಷಾ ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net