ಕವಾಡಿಗರಹಟ್ಟಿ ವಿಷಜಲ ಪ್ರಕರಣ; ಚಿತ್ರದುರ್ಗಕ್ಕೆ ದಿಢೀರ್​ ಭೇಟಿ ನೀಡಿದ ಲೋಕಾಯುಕ್ತ ನ್ಯಾಯಮೂರ್ತಿ

BS Patil
Published on

ಚಿತ್ರದುರ್ಗ: ಕವಾಡಿಗರಹಟ್ಟಿ ವಿಷಜಲ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್​ ಚಿತ್ರದುರ್ಗಕ್ಕೆ ದಿಢೀರ್​ ಭೇಟಿ ನೀಡಿ ನಗರದ ವಿವಿಧೆಡೆ ಸ್ವಚ್ಛತೆ ಕುರಿತು ಪರಿಶೀಲನೆ ನಡೆಸಿದ್ದಾರೆ. ಕವಾಡಿಗರಹಟ್ಟಿಗೆ ಭೇಟಿ ನೀಡಿದ ಬಿ.ಎಸ್​. ಪಾಟೀಲ್​ ವಿಷಜಲ ದುರಂತದಲ್ಲಿ ಮೃತಪಟ್ಟ ಹಾಗೂ ಅಸ್ವಸ್ಥಗೊಂಡಿರುವವರ ಕುಟುಂಬಸ್ಥರನ್ನೂ ಭೇಟಿ ಮಾಡಿ ಅವರ ಯೋಗಕ್ಷೇಮ ವಿಚಾರಿಸಿದ್ದಾರೆ.

ಬಳಿಕ ಮಾತನಾಡಿದ ಬಿ.ಎಸ್​. ಪಾಟೀಲ್​ ಚಿತ್ರದುರ್ಗ ನಗರದ ಸ್ವಚ್ಛತೆಗೆ 10ಕ್ಕೆ 2 ರಿಂದ 3 ಅಂಕ ಮಾತ್ರ ನೀಡಬಹುದು. ಸ್ವಚ್ಛತೆ ಇಲ್ಲದಿದ್ದಾಗ ಮಾತ್ರ ರೋಗಗಳು ಹರಡಲು ಸಾಧ್ಯ. ಖಾಲಿ ನಿಚೇಶನಗಳಲ್ಲಿ ಕಸದ ರಾಶಿಯೇ ಬಿದ್ದಿದೆ. ಈ ಸಂಬಂಧ ನಗರಸಭೆ ಅಧಿಕಾರಿಗಳ ನಿರ್ಲಕ್ಷ್ಯದ ಬಗ್ಗೆ ಪ್ರಕರಣವನ್ನೂ ದಾಖಲಿಸಿಕೊಳ್ಳುತ್ತೇವೆ.

ವೇಸ್ಟ್​ ಡಿಸ್ಪೋಸಲ್​ ಮಾದರಿಯನ್ನು ಇಲ್ಲಿ ಜಾರಿಗೆ ತರಬೇಕಿದೆ. ಆಡಳಿತ ಮಾತ್ರವಲ್ಲ ಇದರಲ್ಲಿ ಜನರ ಪಾಲುದಾರಿಕೆ ಸಹ ಮುಖ್ಯ. ನಗರದ ಹಲವೆಡೆ ಅಂಗಡಿಗಳ ಮುಂಭಾಗ ಪ್ಲ್ಯಾಸ್ಟಿಕ್,​ ಕಸ ಬಿದ್ದಿದೆ. ಬೆಳಗ್ಗೆ 7:30 ಆದರೂ ಸಹ ಕಸ ಗುಡಿಸುವವರು ಇಲ್ಲ. ಕೆಲವೆಡೆ ಕಸ ಗುಡಿಸಿ ಒಂದೆಡೆ ಗುಡ್ಡೆ ಹಾಕಿದ್ದು ಕಂಡು ಬಂದಿದೆ. ಈ ರೀತಿಯಾದರೆ ಆಸ್ಪತ್ರೆ, ವೈದ್ಯರು ಸಾಲದು ಎಂದು ಕಿಡಿಕಾರಿದ್ದಾರೆ.

BS Patil

ತನಿಖೆಯಿಂದ ಬಯಲಾಗಲಿದೆ

ಸ್ವಚ್ಛತೆ ಕಾಪಾಡುವ ನಿಟ್ಟನಲ್ಲಿ ಸಾರ್ವಜನಿಕರು ಹಾಗೂ ಅಂಗಡಿ ಮಾಲೀಕರು ಎಚ್ಚೆತ್ತುಕೊಳ್ಳಬೇಕಿದೆ. ಮೊದಲು ಪರಿಸರ, ಕುಡಿಯುವ ನೀರು ಸರಿಯಿರಬೇಕು ಹಾಗಿದ್ದರೆ ಮಾತ್ರ ರೋಗ ನಿರೋಧಕ ಶಕ್ತಿ ಹೆಚ್ಚಳವಾಗುವುದಕ್ಕೆ ಸಾಧ್ಯವಾಗುತ್ತದೆ. ಶಾಲೆ, ಸಂಸ್ಥೆಗಳ ಮೂಲಕ ಈ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಹೇಳಿದ್ದಾರೆ.

ಕವಾಡಿಗರಹಟ್ಟಿ ದುರಂತದ ಕುರಿತು ಪ್ರತಿಕ್ರಿಯಿಸಿ ಮುಂಜಾಗೃತೆ ವಹಿಸಿದ್ದರೆ ದುರಂತವನ್ನು ತಡೆಯಬಹುದಿತ್ತು. ಇಲ್ಲಿನ ಪೈಪ್​ಲೈನ್​ ಅವ್ಯವಸ್ಥೆಯಿಂದ ಈ ರೀತಿ ಆಗಹಿರಬಹುದು. ದುರಂತಕ್ಕೆ ಕಾರಣ ಏನು ಎಂಬುದರ ಕುರಿತು ತನಿಖೆಯಿಂದ ಬಯಲಾಗಲಿದೆ. ಬಯಲು ಬಹಿರ್ದೆಸೆಯಿಂದ ಕಾಲೆರಾ ಹರಡುವ ಸಾಧ್ಯತೆಯಿದ್ದು, ತಜ್ಞರು ಈ ಬಗ್ಗೆಯೂ ಪರಿಶೀಲನೆ ನಡೆಸುತ್ತಿದ್ದಾರೆ.

ಪ್ರಕರಣ ಸಂಬಂಧ ಅಧಿಕಾರಿಗಳಿಂದ ವರದಿ ಕೇಳಿದ್ದೇವೆ. ಕವಾಡಿಗರಹಟ್ಟಿ ಜನರಲ್ಲಿ ಆತಂಕವಿದೆ, ಧೈರ್ಯ ತುಂಬಬೇಕು ನೀರಿನಲ್ಲಿ ವಿಷ ಹಾಕಲಾಗಿದೆ ಎಂಬ ಆರೋಪವೂ ಕೇಳಿ ಬಂದಿದೆ. ಇದೆಲ್ಲದರ ಬಗ್ಗೆಯೂ ವೈಜ್ಞಾನಿಕ ಪರೀಕ್ಷೆ ನಡೆಸಬೇಕು. ಚಿತ್ರದುರ್ಗದಲ್ಲಿ ಸ್ವಚ್ಛತೆ ಕಾಪಾಡದಿದ್ದರ ಬಗ್ಗೆ ಪ್ರಿನ್ಸಿಪಲ್ ಸೆಕ್ರಟರಿ,
ಜಿಲ್ಲಾಧಿಕಾರಿ, ನಗರಸಭೆ ಪೌರಾಯುಕ್ತ ಸೇರಿ ಹಲವು ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತದೆ ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net