

ಚಂಡೀಗಢ: ಸಹಾಯ ಮಾಡಿದರೆ ಕೃತಜ್ಞತೆ ಸಲ್ಲಿಸುವುದನ್ನು ನೋಡಿದ್ದೇವೆ. ಆದರೆ, ಇಲ್ಲೊಬ್ಬ ವ್ಯಕ್ತಿ ಸಕಾಲಕ್ಕೆ ನೆರವಾದ ವ್ಯಕ್ತಿಗೆ ಕಪಾಳ ಮೋಕ್ಷ ಮಾಡುವ ಮೂಲಕ ದುರಹಂಕಾರ ಮೆರೆದು, ಪೊಲೀಸರ ಅತಿಥಿಯಾಗಿದ್ದಾನೆ. ಈ ಘಟನೆ ಹರಿಯಾಣದ ಗುರುಗ್ರಾಮದಲ್ಲಿ ನಡೆದಿದೆ.
ಬಂಧಿತ ವ್ಯಕ್ತಿಯನ್ನು ವರುಣ್ ನಾಥ್ ಎಂದು ಗುರುತಿಸಲಾಗಿದೆ. ಅಲ್ಲದೆ, ಆತನಿಗೆ ಜಾಮೀನಿನ ಜೊತೆಗೆ ಎಚ್ಚರಿಕೆಯನ್ನು ನೀಡಿ ಜೈಲಿನಿಂದ ಬಿಡುಗಡೆ ಮಾಡಲಾಗಿದೆ. ಗುರುಗ್ರಾಮದ ನಿರ್ವಾಣ ಕಂಟ್ರಿಯ ಕ್ಲೋಸ್ ನಾರ್ಥ್ ಸೊಸೈಟಿಯಲ್ಲಿ ಈ ಘಟನೆ ನಡೆದಿದ್ದು, ಇಡೀ ಪ್ರಕರಣ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಆರೋಪಿ ವರುಣ್, ಕ್ಲೋಸ್ ನಾರ್ಥ್ ಸೊಸೈಟಿಯ ನಿವಾಸಿ. 14ನೇ ಮಹಡಿಯಿಂದ ಲಿಫ್ಟ್ನಲ್ಲಿ ಬರುತ್ತಿರುವಾಗ ಇದ್ದಕ್ಕಿದ್ದಂತೆ ಲಿಫ್ಟ್ ನಿಂತು ಹೋಗಿದೆ. ಅಲ್ಲಿಯೇ ಸಿಲುಕಿಕೊಂಡ ವರುಣ್, ತಕ್ಷಣ ಸೆಕ್ಯುರಿಟಿ ಗಾರ್ಡ್ಗೆ ಲಿಫ್ಟ್ ಒಳಗೆ ಅಳವಡಿಸಿದ್ದ ಇಂಟರ್ಕಾಮ್ ಮೂಲಕ ಮಾಹಿತಿ ನೀಡಿದ್ದಾರೆ. ತಕ್ಷಣ ಲಿಫ್ಟ್ ಮ್ಯಾನ್ ಜೊತೆಗೆ ಸ್ಥಳಕ್ಕೆ ಧಾವಿಸಿದ ಸೆಕ್ಯುರಿ ಗಾರ್ಡ್ ಅಶೋಕ್, ಐದೇ ನಿಮಿಷದಲ್ಲಿ ವರಣ್ ಅವರನ್ನು ಲಿಫ್ಟ್‌ನಿಂದ ಹೊರ ಕರೆತರುವ ಮೂಲಕ ರಕ್ಷಿಸಿದ್ದಾರೆ.
ಲಿಫ್ಟ್‌ನಿಂದ ಹೊರಬರುತ್ತಿದ್ದಂತೆ ಕೋಪಗೊಂಡಿದ್ದ ವರುಣ್, ಸೆಕ್ಯುರಿಟಿ ಗಾರ್ಡ್ ಮೇಲೆ ಹಲ್ಲೆ ಮಾಡಿದ್ದಾನೆ. ವರುಣ್ ತಪ್ಪು ಮಾಡಿರುವುದು ಸಿಸಿಟಿವಿಯಲ್ಲಿ ಬಯಲಾಯಿತು. ಈ ಘಟನೆಯ ಬೆನ್ನಲ್ಲೇ ಕೆಲವೊತ್ತು ಕೆಲಸ ನಿಲ್ಲಿಸಿದ ಸೆಕ್ಯೂರಿಟಿ ಗಾರ್ಡ್ಗಳು ಸೊಸೈಟಿಯ ನಿವಾಸಿಗಳ ವಿರುದ್ಧ ಅಸಮಾಧಾನ ಹೊರಹಾಕಿದರು. ಸೇವೆಯನ್ನು ಒದಗಿಸಲು ಹಗಲಿರುಳು ಶ್ರಮಿಸುತ್ತೇವೆ. ಆದರೆ ಕೆಲವು ನಿವಾಸಿಗಳು ನಮ್ಮನ್ನು ಗುಲಾಮರಂತೆ ಪರಿಗಣಿಸುತ್ತಾರೆ. ಆರೋಪಿ ವರುಣ್ ನಾಥ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
3-4 ನಿಮಿಷಗಳಲ್ಲಿ ಲಿಫ್ಟ್‌ನಿಂದ ಹೊರಬರಲು ನಾನು ಅವರಿಗೆ ಸಹಾಯ ಮಾಡಿದೆ. ಅವರು ಹೊರಬಂದ ತಕ್ಷಣ ನನ್ನನ್ನು ಥಳಿಸಲು ಪ್ರಾರಂಭಿಸಿದರು ಎಂದು ಸಿಬ್ಬಂದಿ ಅಶೋಕ್ ಕುಮಾರ್ ಅಳಲು ತೋಡಿಕೊಂಡರು.
ಪ್ರತಿಭಟನೆಯ ಬೆನ್ನಲ್ಲೇ ವರುಣ್ ಅವರನ್ನು ಬಂಧಿಸಿದ ಪೊಲೀಸರು ಜಾಮೀನು ನೀಡಿ ಜೊತೆಗೆ ಎಚ್ಚರಿಕೆಯನ್ನೂ ನೀಡಿ ಮನೆಗೆ ಕಳುಹಿಸಿದ್ದಾರೆ. (ಏಜೆನ್ಸೀಸ್)