

ರಾಯ್‌ಪುರ: ಛತ್ತೀಸ್ಗಢದ ಬಿಜಾಪುರ ಜಿಲ್ಲೆಯ ನೈಋತ್ಯ ಪ್ರದೇಶದಲ್ಲಿ ಕೂಂಬಿಂಗ್ ಕಾರ್ಯಾಚರಣೆಯ ವೇಳೆ ಭದ್ರತಾ ಪಡೆಗಳೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ(Encounter) ಕನಿಷ್ಠ ಆರು ನಕ್ಸಲರು ಬಲಿಯಾಗಿದ್ದಾರೆ ಎಂದು ಮಂಗಳವಾರ(ನ. 11) ವರದಿಯಾಗಿದೆ.
ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರ ಯಾದವ್ ಮಾತನಾಡಿದ್ದು, ಬಿಜಾಪುರ ಜಿಲ್ಲೆಯ ರಾಷ್ಟ್ರೀಯ ಉದ್ಯಾನವನ ಪ್ರದೇಶದಲ್ಲಿ ನಕ್ಸಲರು ಇರುವ ಖಚಿತ ಮಾಹಿತಿ ಮೇರೆಗೆ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ. ಬಿಜಾಪುರ ಮತ್ತು ದಂತೇವಾಡದ ಜಿಲ್ಲಾ ಮೀಸಲು ಪಡೆ (DRG) ಮತ್ತು ವಿಶೇಷ ಕಾರ್ಯಪಡೆ (STF) ಜಂಟಿ ತಂಡವು ನಕ್ಸಲರು ಇರುವುದನ್ನು ಪತ್ತೆ ಹಚ್ಚಿತು. ಈ ವೇಳೆ ಎರಡು ಕಡೆಯಿಂದ ನಡೆದ ಗುಂಡಿನ ಚಕಮಕಿಯಲ್ಲಿ ಹಲವರು ಗಾಯಗೊಂಡಿದ್ದರು.
ಇದುವರೆಗೂ ಸ್ಥಳದಿಂದ ಆರು ನಕ್ಸಲರ ಶವಗಳು ಪತ್ತೆಯಾಗಿವೆ. ಜೊತೆಗೆ ಸ್ವಯಂಚಾಲಿತ INSAS ಅಸಾಲ್ಟ್ ರೈಫಲ್, ಸ್ಟೆನ್‌ಗನ್, .303 ರೈಫಲ್‌ಗಳು, ಸ್ಫೋಟಕಗಳು ಮತ್ತು ಮಾವೋವಾದಿಗಳಿಗೆ ಸೇರಿದ ಸಾಮಗ್ರಿಗಳನ್ನು ವಶಪಡಿಸಿಕೊಂಡಿವೆ ಎಂದು ಹೇಳಿದ್ದಾರೆ.
ಸುತ್ತಮುತ್ತಲಿನ ಅರಣ್ಯ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ಇನ್ನು ಮುಂದುವರೆದಿದೆ ಎನ್ನಲಾಗಿದೆ. (ಏಜೆನ್ಸೀಸ್)