ಶಸ್ತ್ರಾಸ್ತ್ರ ವಿನಿಮಯ ಮಾಡಿಕೊಳ್ಳುವಾಗ ಸಿನಿಮೀಯ ರೀತಿಯಲ್ಲಿ ಗುಂಡಿನ ಚಕಮಕಿ; ನಾಲ್ವರ ಬಂಧನ| Gunfight

ವಿಜಯವಾಣಿ - 2025-11-11T175358.697
Published on

ಅಹ್ಮದಾಬಾದ್: ಗುಜರಾತ್​​​ನ ನವಸಾರಿ ಜಿಲ್ಲೆಯ ಬಿಲಿಮೋರಾ ನಗರದಲ್ಲಿ ಅಂತರಾಜ್ಯ ಶಾಸ್ತ್ರಾಸ್ತ್ರ ಜಾಲ ಪತ್ತೆಯಾಗಿದ್ದು, ಹೋಟೆಲ್​ವೊಂದರಲ್ಲಿ ಶಸ್ತ್ರಾಸ್ತ್ರ ವಿನಿಮಯ ಮಾಡಿಕೊಳ್ಳುವಾಗ ಗುಜರಾತ್ ಪೊಲೀಸ್ ಇಲಾಖೆಯ ರಾಜ್ಯ ಮೇಲ್ವಿಚಾರಾಣ ದಳ(ಎಸ್​ಎಂಸಿ) ದಾಳಿ ಮಾಡಿದ್ದು, ಈ ವೇಳೆ ಗ್ಯಾಂಗ್ ಮತ್ತು ಪೊಲೀಸರ ನಡುವೆ ಸಿನಿಮೀಯ ರೀತಿಯಲ್ಲಿ ಗುಂಡಿನ ಚಕಮಕಿ(Gunfight) ನಡೆದಿದೆ.

ಇಂದು(ನ. 11) ಮುಂಜಾನೆ ಬಿಲಿಮೋರಾ ನಗರದ ಹೋಟೆಲ್​ವೊಂದರಲ್ಲಿ ಘಟನೆ ನಡೆಸಿದೆ. ಪೊಲೀಸರು ಹೋಟೆಲ್​ ಹತ್ತಿರ ಬರುತ್ತಿದ್ದಂತೆ ಆರೋಪಿಗಳು ಭಯಭೀತರಾಗಿ ಮೊದಲು ಗುಂಡಿನ ದಾಳಿ ನಡೆಸಿದ್ದು, ಪ್ರತಿಯಾಗಿ ಪೊಲೀಸರು  ಹೋಟೆಲ್​ ಸುತ್ತುವರೆದು ಪ್ರತಿದಾಳಿ ನಡೆಸಿದ್ದಾರೆ. ಘಟನೆಯಲ್ಲಿ ಒರ್ವನ ಕಾಲಿಗೆ ಗುಂಡು ಹೊಡೆದು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಸ್ಥಳದಲ್ಲಿ ಮೂರು ದೇಶಿಯ ಪಿಸ್ತೂಲ್​, 27 ಜೀವಂತ ಕಾರ್ಟ್ರಿಡ್ಜ್​​ಗಳನ್ನು ವಶಕ್ಕೆ ಪಡಿಸಿಕೊಂಡಿದ್ದಾರೆ.

ಗುಂಡಿನ ಚಕಮಕಿಯಲ್ಲಿ ಹರಿಯಾಣದ ಯಶ್ಸಿಂಗ್ ಸುಂದರಸಿಂಗ್ ಎಂದು ಗುರುತಿಸಲಾದ ಒಬ್ಬ ಆರೋಪಿಯ ಕಾಲಿಗೆ ಪೆಟ್ಟಾಗಿದ್ದು, ತಕ್ಷಣ ಪೊಲೀಸ್ ಬೆಂಗಾವಲಿನಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಹಠಾತ್ ದಾಳಿಯ ಹೊರತಾಗಿಯೂ ಪೊಲೀಸ್ ತಂಡವು ಕೆಲವೇ ನಿಮಿಷಗಳಲ್ಲಿ ಗ್ಯಾಂಗ್ ಅನ್ನು ಸೆದೆ ಬಡಿದು ನಾಲ್ವರನ್ನು ಬಂಧಿಸಿದೆ.  ಹರಿಯಾಣದ ಗಾಯಾಳು ಯಶ್ಸಿಂಗ್ ಸುಂದರಸಿಂಗ್ ಸೇರಿ ಮಧ್ಯಪ್ರದೇಶದ ರಿಷಭ್ ಅಶೋಕ್ ಶರ್ಮಾ, ರಾಜಸ್ಥಾನದ ಮನೀಶ್ ಕಲುರಾಮ್ ಕುಮಾವತ್, ಮದನ್ ಗೋಪಿರಾಮ್​ ಕುಮಾವತ್ ಬಂಧಿತರು.

ಈ ಕುರಿತು ಮತನಾಡಿರುವ ಎಸ್​ಎಮ್​ಸಿ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ಇಂದು ಬೆಳಿಗ್ಗೆ ನವಸಾರಿಯ ಬಿಲಿಮೋರಾದಲ್ಲಿ ಆರೋಪಿಗಳು ಮತ್ತು ರಾಜ್ಯ ಮೇಲ್ವಿಚಾರಣಾ ಕೋಶ (SMC) ತಂಡದ ನಡುವೆ ಗುಂಡಿನ ಚಕಮಕಿ ನಡೆದಿದೆ. ಗುಂಡಿನ ಚಕಮಕಿಯ ಸಮಯದಲ್ಲಿ, ಒಬ್ಬ ಆರೋಪಿ ಗಾಯಗೊಂಡರು ಮತ್ತು ನಾಲ್ವರು ಆರೋಪಿಗಳನ್ನು ಯಶಸ್ವಿಯಾಗಿ ಬಂಧಿಸಲಾಯಿತು. ಅವರ ಬಳಿಯಿಂದ ಮೂರು ದೇಶೀಯ ಪಿಸ್ತೂಲ್‌ಗಳು ಮತ್ತು ಇಪ್ಪತ್ತೇಳು ಜೀವಂತ ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಸ್ತುತ ಪರಿಸ್ಥಿತಿ ನಿಯಂತ್ರಣದಲ್ಲಿದೆ ಮತ್ತು FIR ದಾಖಲಾದ ನಂತರ ಹೆಚ್ಚಿನ ವಿವರಗಳನ್ನು ತಿಳಿಸಲಾಗುವುದು ಎಂದು ತಿಳಿಸಿದ್ದಾರೆ.

ಇನ್ನು ಪ್ರಾಥಮಿಕ ತನಿಖೆ ಪ್ರಕಾರ, ಬಂಧಿತ ವ್ಯಕ್ತಿಗಳು ಕುಖ್ಯಾತ ಅಂತರರಾಜ್ಯ ಕ್ರಿಮಿನಲ್ ಜಾಲದೊಂದಿಗೆ ಸಂಪರ್ಕ ಹೊಂದಿದ್ದಾರೆ. ಅಕ್ರಮ ಶಸ್ತ್ರಾಸ್ತ್ರ ಕಳ್ಳಸಾಗಣೆಯಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗಿದೆ. ಹರಿಯಾಣ, ಮಧ್ಯಪ್ರದೇಶ ಮತ್ತು ರಾಜಸ್ಥಾನ ಸೇರಿದಂತೆ ಇತರೆ ರಾಜ್ಯಗಳಲ್ಲಿ ಗ್ಯಾಂಗ್‌ನ ಕಾರ್ಯಾಚರಣೆ ಬಗ್ಗೆ ತನಿಖೆ ನಡೆಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net