ಬಿಹಾರ ಚುನಾವಣೆಯ ಕೊನೆಯ ಹಂತದ ಮತದಾನ ಮುಕ್ತಾಯ; ಸಂಜೆ 5.30ರವರೆಗೆ ಶೇ. 67.14ರಷ್ಟು ದಾಖಲೆಯ ಮತದಾನ | Bihar Election

ವಿಜಯವಾಣಿ - 2025-11-11T182415.545
Published on

ಪಾಟ್ನಾ: ಬಿಹಾರದಲ್ಲಿ ಇಂದು(ನ. 11) ವಿಧಾನಸಭೆ ಚುನಾವಣೆಯ(Bihar Election) ಕೊನೆಯ ಹಂತದ 122 ಕ್ಷೇತ್ರಗಳಿಗೆ ನಡೆದ  ಮತದಾನ ಮುಕ್ತಾಯವಾಗಿದ್ದು, ಸಂಜೆ 5.30ರ ವೇಳೆಗೆ ಶೇ. 67.14ರಷ್ಟು ಮತದಾನವಾಗಿ ಇದುವರೆಗಿನ ಅತಿ ಹೆಚ್ಚು ಮತದಾನ ಎಂಬ ದಾಖಲೆ ಬರೆದಿದೆ ಎಂದು ವರದಿಯಾಗಿದೆ. ಶೀಘ್ರದಲ್ಲೇ ಚುನಾವೋತ್ತರ ಸಮೀಕ್ಷೆಗಳು ಪ್ರಕಟವಾಗಲಿವೆ.

ಇಂದು ನಡೆದ ಎರಡನೇ ಹಂತದ ಚುನಾವಣೆಯಲ್ಲಿ ಒಟ್ಟು 1,302 ಅಭ್ಯರ್ಥಿಗಳು ಕಣದಲ್ಲಿದ್ದು, ಅವರಲ್ಲಿ 136 (ಸುಮಾರು ಶೇ. 10) ಮಹಿಳೆಯರು. 45,399 ಕೇಂದ್ರಗಳಲ್ಲಿ ಮತದಾನ ನಡೆದಿದೆ.  1.95 ಕೋಟಿ ಪುರುಷರು,  1.74 ಕೋಟಿ ಮಹಿಳೆಯರು ಮತ ಚಲಾವಣೆ ಮಾಡಿದ್ದಾರೆ.

ಎರಡನೇ ಹಂತದ ಚುನಾವಣೆಯಲ್ಲಿ ನಾಲ್ಕು ಜಿಲ್ಲೆಗಳು ಸೀಮಾಂಚಲ್ ಪ್ರದೇಶದಲ್ಲಿವೆ. ಜೊತೆಗೆ ಪಶ್ಚಿಮ ಚಂಪಾರಣ್, ಪೂರ್ವ ಚಂಪಾರಣ್, ಸೀತಾಮರ್ಹಿ, ಮಧುಬನಿ, ಸುಪೌಲ್, ಅರಾರಿಯಾ ಮತ್ತು ಕಿಶನ್‌ಗಂಜ್ ಸೇರಿವೆ.

ಸಿಎಂ ನಿತೀಶ್ ಕುಮಾರ್ ಅವರ ಸಂಪುಟದ ಬಿಜೇಂದ್ರ ಪ್ರಸಾದ್ ಯಾದವ್ (ಸುಪೌಲ್), ಸುಮಿತ್ ಕುಮಾರ್ ಸಿಂಗ್ (ಚಾಕೈ), ಮೊಹಮ್ಮದ್ ಜಮಾ ಖಾನ್ (ಚೈನ್‌ಪುರ್), ಲೇಶಿ ಸಿಂಗ್ (ಧಮ್‌ದಾಹಾ), ಕೃಷ್ಣ ನಂದನ್ ಪಾಸ್ವಾನ್ (ಹರ್ಸಿಧಿ), ರೇಣು ದೇವಿ (ಬೆಟ್ಟಿಯಾ) ಸೇರಿ ಒಟ್ಟು 12 ಸಚಿವರು ಕಣದಲ್ಲಿದ್ದು ಅದೃಷ್ಟ ಪರೀಕ್ಷೆ ಎದುರಿಸಿದ್ದಾರೆ.

ಹಾಗೆಯೇ ಎನ್‌ಡಿಎಯ ಸಣ್ಣ ಪಾಲುದಾರ ಪಕ್ಷಗಳಾದ ಜಿತನ್ ರಾಮ್ ಮಾಂಝಿ ಅವರ ಹಿಂದೂಸ್ತಾನಿ ಆವಾಮ್ ಮೋರ್ಚಾ ಮತ್ತು ರಾಜ್ಯಸಭಾ ಸಂಸದ ಉಪೇಂದ್ರ ಕುಶ್ವಾಹ ಅವರ ರಾಷ್ಟ್ರೀಯ ಲೋಕ ಮೋರ್ಚಾದಿಂದ ತಲಾ ಆರು ಜನ ಸ್ಪರ್ಧಿಸಿದ್ದಾರೆ. ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ರಾಜೇಶ್ ಕುಮಾರ್; ಮಾಜಿ ವಿಧಾನಸಭಾ ಸ್ಪೀಕರ್ ಉದಯ್ ನಾರಾಯಣ್ ಚೌಧರಿ (ಆರ್‌ಜೆಡಿ), ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಶಕೀಲ್ ಅಹ್ಮದ್ ಖಾನ್ ಸಹ ಕಣದಲ್ಲಿದ್ದರು.

ಇನ್ನೂ ಚುನಾವಣೆಗೆ ಭದ್ರತೆಯನ್ನು ಬಲಪಡಿಸಲಾಗಿದ್ದು, 4 ಲಕ್ಷಕ್ಕೂ ಹೆಚ್ಚು ಸಿಬ್ಬಂದಿಯನ್ನು ಸೇವೆಗೆ ನಿಯೋಜಿಸಲಾಗಿತ್ತು. ಕಳೆದ ವಾರ ನಡೆದ ಮೊದಲ ಹಂತದ ಚುನಾವಣೆಯಲ್ಲಿ ರಾಜ್ಯವು ಶೇ. 65 ಕ್ಕಿಂತ ಹೆಚ್ಚಿನ ದಾಖಲೆಯ ಮತದಾನವಾಗಿತ್ತು. ನ. 14ರಂದು ರಾಜ್ಯ ಚುನಾವಣೆಯ ಫಲಿತಾಂಶ ಪ್ರಕಟವಾಗಲಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net